- ದೇಶದ ಗಮನ ಸೆಳೆದ ‘ದಿ ಟೆಲಿಗ್ರಾಫ್’ ದಿನಪತ್ರಿಕೆಯ ಮುಖಪುಟ
- ಪ್ರಧಾನಿ ಹೇಳಿಕೆಯನ್ನು ‘ಮೊಸಳೆ ಕಣ್ಣೀರು’ ಎಂದು ಪರೋಕ್ಷ ಟಾಂಗ್
ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಮಣಿಪುರ ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಕೊನೆಗೂ ನಿನ್ನೆ(ಜು.20) ಮೌನ ಮುರಿದಿದ್ದರು.
ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾದ 79 ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮಾತನಾಡಿರುವುದಕ್ಕೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಸದನದ ಹೊರಗೆ ಮಾತನಾಡಿದ್ದ ಪ್ರಧಾನಿ ಮೋದಿ, ‘ಘಟನೆಯು ಹೇಯ ಮತ್ತು ನಾಚಿಕೆಗೇಡಿನ ಸಂಗತಿ. ಮಣಿಪುರದ ಹೆಣ್ಣು ಮಕ್ಕಳಿಗೆ ಏನಾಗಿದೆಯೋ ಅದನ್ನು ಕ್ಷಮಿಸಲು ಸಾಧ್ಯವಿಲ್ಲ. ಆರೋಪಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಾನು ದೇಶದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ” ಎಂದು ಹೇಳಿದ್ದರು.
ಪ್ರಧಾನಿಯ ಹೇಳಿಕೆಗೆ ರಾಷ್ಟ್ರೀಯ ದೈನಿಕ ‘ದಿ ಟೆಲಿಗ್ರಾಫ್’ ಇಂದು(ಜು.21) ಮುಖಪುಟದಲ್ಲೇ ಪರೋಕ್ಷ ಟಾಂಗ್ ಕೊಟ್ಟಿದ್ದು, 79 ದಿನಗಳ ನಂತರ ‘ಮೊಸಳೆ ಕಣ್ಣೀರು’ ಎಂದು ಜಾಡಿಸಿದೆ. ಇದು ದೇಶದ ಜನತೆಯ ಗಮನ ಸೆಳೆದಿದ್ದು, ಪ್ರಧಾನಿಯವರ ಬೇಜವಾಬ್ದಾರಿತನ ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ಗೆ ಒಳಗಾಗಿದೆ.
’56 ಇಂಚಿನ ಚರ್ಮಕ್ಕೆ ನೋವು ಮತ್ತು ಅವಮಾನ ತಿಳಿಯಲು 79 ದಿನ ಬೇಕಾಯಿತು’ ಎಂಬ ಶೀರ್ಷಿಕೆಯೊಂದಿಗೆ ಮೊಸಳೆಯೊಂದು ಕಣ್ಣೀರು ಹಾಕುತ್ತಿರುವ ಗ್ರಾಫಿಕ್ಸ್ ಅನ್ನು ಬಳಸಿ, ‘ದಿ ಟೆಲಿಗ್ರಾಫ್’ ಪತ್ರಿಕೆಯು ಮುಖಪುಟದಲ್ಲಿ ಪ್ರಕಟಿಸಿದೆ.
ಪತ್ರಿಕೆಯ ಮುಖಪುಟವನ್ನು ಸಾವಿರಾರು ಮಂದಿ ಲೈಕ್, ಶೇರ್ ಹಾಗೂ ರೀಟ್ವೀಟ್ ಮಾಡುವ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸತ್ಯವನ್ನು ಈ ರೀತಿ ಬರೆಯುತ್ತಿರುವುದನ್ನು ನೋಡಲು ನಿಜಕ್ಕೂ ಖುಷಿಯಾಗುತ್ತಿದೆ. ನಮ್ಮದೊಂದು ಸೆಲ್ಯೂಟ್ ಇರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ದಿ ಟೆಲಿಗ್ರಾಫ್’ ಪತ್ರಿಕೆಯು ಇಂಗ್ಲಿಷ್ ದಿನಪತ್ರಿಕೆಯಾಗಿದ್ದು, 7 ಜುಲೈ 1982ರಿಂದ ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಪ್ರಕಟಗೊಳ್ಳುತ್ತಿದೆ. 2019ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ ಓದುವ ಎಂಟನೇ ಇಂಗ್ಲಿಷ್ ಪತ್ರಿಕೆಯಾಗಿದೆ. ಈ ಪತ್ರಿಕೆಯು ಇಂತದ್ದೇ ಮುಖಪುಟ ಶೀರ್ಷಿಕೆಗಳಿಗೆ ಹೆಸರು ಗಳಿಸಿಕೊಂಡಿದೆ.
ಟೆಲಿಗ್ರಾಪ್ ಪತ್ರಿಕೆ ಕೇಂದ್ರ ಸರ್ಕಾರದ ಭ್ರಷ್ಟಾಚಾರ ಹಾಗೂ ಬಿಜೆಪಿ ನಾಯಕರ ಅವ್ಯವಹಾರವನ್ನು ಸದಾ ಬಯಲಿಗೆಳೆಯುತ್ತಲೇ ಬರುತ್ತಿದೆ. ದೇಶದಲ್ಲಿ ಕೇಂದ್ರದ ವಿರುದ್ಧ ಗಟ್ಟಿತನ ತೋರುತ್ತಿರುವುದು ಇದೊಂದೇ ಮಾಧ್ಯಮ ಸಂಸ್ಥೆ. ಉಳಿದವುಗಳು ಕೇವಲ ‘ಗೋದಿ ಮಾಧ್ಯಮ’ಗಳಾಗಿವೆ ಎಂದು ಜನರು ಟೀಕಿಸುತ್ತಿದ್ದಾರೆ.