ಜೂನ್ 15ರಿಂದ 17ರವರೆಗೆ ಕೆನಡಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆನಡಾ ತಡವಾಗಿ ಆಹ್ವಾನಿಸಿದೆ. ಕಾನೂನು ಜಾರಿಗೆ ಸಂಬಂಧಿಸಿದ ಸಹಕಾರ ಸೆರಿದಂತೆ ಮಹತ್ವದ ಷರತ್ತುಗಳನ್ನು ವಿಧಿಸಿ ಮೋದಿ ಅವರನ್ನು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಆಹ್ವಾನಿಸಿದ್ದಾರೆ ಎಂದು ಕೆನಡಾದ ಮಾಧ್ಯಮಗಳು ವರದಿ ಮಾಡಿವೆ.
ಜಿ7 ಶೃಂಗಸಭೆಯ ಬಳಿಕ ಖಲಿಸ್ತಾನಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರದಲ್ಲಿ ಎದ್ದಿರುವ ಉದ್ವಿಗ್ನತೆಯ ಕುರಿತು ಚರ್ಚಿಸಲು ಸಭೆ ಸಭೆ ನಡೆಯಲಿದೆ. ದಿನವಿಡೀ ನಡೆಯುವ ಆ ಸಭೆಯಲ್ಲಿ ಮೋದಿ ಭಾಗವಹಿಸಲೇಬೇಕು ಎಂಬ ಪೂರ್ವಭಾಮಿ ಷರತ್ತು ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
“ಕಾರ್ನಿ ಅವರು ಭಾರತೀಯ ಪ್ರಧಾನಿಗೆ ನೀಡಿದ ಆಹ್ವಾನದಲ್ಲಿ ಷರತ್ತುಗಳನ್ನು ಹಾಕಿದ್ದಾರೆ. ಆ ಷರತ್ತುಗಳನ್ನು ಒಪ್ಪಿಕೊಳ್ಳುವ ಕುರಿತು ನಿರ್ಧರಿಸಲು ಮೋದಿ ಸಮಯ ಕೇಳಿದ್ದಾರೆ” ಎಂದು ಕೆನಡಾ ಸರ್ಕಾರದ ಮೂಲಗಳು ತಿಳಿಸಿರುವುದಾಗಿ ‘ದಿ ಟೊರೊಂಟೊ ಸ್ಟಾರ್’ ವರದಿ ಮಾಡಿದೆ. ಆದಾಗ್ಯೂ, ಮಾಹಿತಿ ನೀಡಿದ ಮೂಲದ ಬಗ್ಗೆ ಸ್ಪಷ್ಟವಾಗಿ ಪತ್ರಿಕೆಯು ಉಲ್ಲೇಖಿಸಿಲ್ಲ.
ನಿಜ್ಜರ್ ಅವರ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದಾರೆ ಎಂದು ಕೆನಡಾ ಪೊಲೀಸ್ ‘ಆರ್‌ಸಿಎಂಪಿ’ ಆರೋಪಿಸಿದೆ. ಈ ಆರೋಪಗಳ ನಡುವೆಯೇ, ಜಿ7 ಶೃಂಗಸಭೆಗೆ ಮೋದಿ ಅವರನ್ನು ಆಹ್ವಾನಿಸಿದ್ದಕ್ಕಾಗಿ ಕಾರ್ನಿ ಅವರನ್ನು ಕೆನಡಾ ಪ್ರಜೆಗಳು ಟೀಕಿಸಿಸುತ್ತಿದ್ದಾರೆ. ಈ ಟೀಕೆಗಳ ಬೆನ್ನಲ್ಲೇ, ‘ಮೋದಿ ಅವರಿಗೆ ನೀಡಲಾಗಿರುವ ಆಹ್ವಾನವು ನಿಜ್ಜಾರ್ ಹತ್ಯೆ ಮತ್ತು ಉದ್ವಿಗ್ನತೆ ಕುರಿತ ದ್ವಿಪಕ್ಷೀಯ ಮಾತುಕತೆಯ ಭಾಗವಾಗಿದೆ’ ಎಂದು ಕೆಡನಾ ಸರ್ಕಾರ ಹೇಳಿಕೊಂಡಿದೆ ಎಂದು ವರದಿಗಳು ಹೇಳುತ್ತಿವೆ.
“ನಾವು ಈಗ ಕಾನೂನು ಜಾರಿಗೆ ಸಂಬಂಧಿಸಿದ ಮಾತುಕತೆಯನ್ನು ಮುಂದುವರಿಸಲು ಒಪ್ಪಿಕೊಂಡಿದ್ದೇವೆ. ಆದ್ದರಿಂದ ಹೊಣೆಗಾರಿಕೆಯ ಸಮಸ್ಯೆಗಳನ್ನು ಗುರುತಿಸುವಲ್ಲಿ ಪ್ರಗತಿ ಕಾಣಿಸುತ್ತಿದೆ. ಈ ಅಂಶವು ಮೋದಿ ಅವರಿಗೆ ಆಹ್ವಾನ ನೀಡುವಲ್ಲಿ ಪ್ರಮುಖ ವಿಷಯವಾಗಿದೆ” ಎಂದು ಕಾರ್ನಿ ಹೇಳಿಕೊಂಡಿದ್ದಾರೆ. ಇದು ಮೋದಿ ಅವರಿಗೆ ನೀಡಲಾದ ಆಹ್ವಾನದಲ್ಲಿನ ಷರತ್ತುಗಳಲ್ಲಿ ಒಂದಾಗಿದೆ ಎಂದು ‘ದಿ ಟೊರೊಂಟೊ ಸ್ಟಾರ್’ ವರದಿ ಮಾಡಿದೆ
ಆದಾಗ್ಯೂ, ಕಾರ್ನಿ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಮಾತನಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋದಿ ಅವರು ಕಾನೂನು ಜಾರಿ ಮಾತುಕತೆಗೆ ಸಂಬಂಧಿಸಿದ ವಿಷಯದ ಬಗ್ಗೆ ಮಾತನಾಡಿಲ್ಲ.
ಈ ಲೇಖನ ಓದಿದ್ದೀರಾ?: ಇಸ್ರೇಲ್ ಮತ್ತು ಅಮೆರಿಕಾದ ದುಷ್ಕೃತ್ಯ: ಜಗತ್ತನ್ನು ಮೂರನೇ ಮಹಾಯುದ್ಧದತ್ತ ದೂಡುವ ಅಪಾಯ
“ಮೂರು ದಿನಗಳ ಕಾಲ ನಡೆಯಲಿರುವ ಜಿ7 ಶೃಂಗಸಭೆಯು ಶಾಂತಿ ಮತ್ತು ಭದ್ರತೆಯನ್ನು ಬಲಪಡಿಸುವುದು, ವಿದೇಶಿ ಹಸ್ತಕ್ಷೇಪ ಮತ್ತು ಅಂತರರಾಷ್ಟ್ರೀಯ ಅಪರಾಧಗಳನ್ನು ಎದುರಿಸುವುದು ಹಾಗೂ ಕಾಡ್ಗಿಚ್ಚುಗಳನ್ನು ನಿಭಾಯಿಸಲು, ನಿಯಂತ್ರಿಸಲು ಒಂಟಿಯಾಗಿ ಕೆಲಸ ಮಾಡುವ ವಿಚಾರಗಳ ಮೇಲೆ ಚರ್ಚಿಸಲಿದೆ” ಎಂದು ಕಾರ್ನಿ ಹೇಳಿದ್ದಾರೆ. ಅಲ್ಲದೆ, ಅದೇ ಸಭೆಯಲ್ಲಿ ನಿಜಾರ್ ಹತ್ಯೆಯ ಬಳಿಕ ಮೋದಿ ಸರ್ಕಾರದ ಕುರಿತಾಗಿ ಕೆನಡಾದಲ್ಲಿ ವ್ಯಕ್ತವಾಗಿರುವ ಕಳವಳಗಳನ್ನು ನೇರವಾಗಿ ತಿಳಿಸುಲಾಗುತ್ತದೆ ಎಂದೂ ಕಾರ್ನಿ ಹೇಳಿಕೊಂಡಿದ್ದಾರೆ.
ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರು ದಿ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ್ದು, “ಮೋದಿಯವರಿಗೆ ನೀಡಲಾಗಿರುವ ಆಹ್ವಾನವು ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸ್ವತಂತ್ರ ತನಿಖೆಯ ಪ್ರಾಮುಖ್ಯತೆ ಮತ್ತು ಕಾನೂನು ನಿಯಮದ ಪರಿಗಣನೆಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದಿಲ್ಲ. ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧದ ಹೊರತಾಗಿಯೂ, ನಿಜ್ಜರ್ ಪ್ರಕರಣದಲ್ಲಿಭಾರತವು ಹೊಣೆಗಾರಿಕೆ ತೆಗೆದುಕೊಳ್ಳಬೇಕು ಎಂಬ ವಾದದಿಂದ ಕೆನಡಾ ಹಿಂದೆ ಸರಿಯುತ್ತಿಲ್ಲ” ಎಂದು ಒತ್ತಿ ಹೇಳಿದ್ದಾರೆ.
ನಿಜ್ಜರ್ ಹತ್ಯೆಯಲ್ಲಿ ಮೋದಿ ಸರ್ಕಾರದ ಪಾತ್ರವಿದೆ ಎಂದು ಹಲವು ಬಾರಿ ಕೆನಡಾ ಸಾರ್ವಜನಿಕವಾಗಿ ಆರೋಪಿಸಿದೆ. ಆ ಆರೋಪಗಳು ಕೇಳಿಬಂದ ಬಳಿಕ, ಎರಡೂ ದೇಶಗಳ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟಿವೆ. ಭಾರತ ಮತ್ತು ಕೆನಡಾ – ಉಭಯ ರಾಷ್ಟ್ರಗಳು ಪರಸ್ಪರ ರಾಷ್ಟ್ರಗಳ ರಾಯಭಾರಿ, ರಾಜತಾಂತ್ರಿಕರನ್ನು ಹೊರಹಾಕಿವೆ. ಇಂತಹ ಸಮಯದಲ್ಲಿ, ಕಾನೂನು ಜಾರಿಯ ಕುರಿತಾದ ಚರ್ಚೆಗಳನ್ನು ಪುನರಾರಂಭಿಸುವುದು ಎರಡೂ ರಾಷ್ಟ್ರಗಳ ಸಂಬಂಧಗಳನ್ನು ಮತ್ತೆ ಬಲಪಡಿಸಲು ಪ್ರಮುಖ ಹೆಜ್ಜೆಯಾಗಿ ಕಾಣುತ್ತಿದೆ.