ಇತ್ತೀಚೆಗೆ ಅಂತರ್ ಜಾತಿ ಜೋಡಿಯೊಂದು ‘ಮನಸ್ಸಾಕ್ಷಿ ಮದುವೆ’ ಪ್ರಮಾಣವಚನ ಸ್ವೀಕರಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಜೂನ್ 12ರಂದು ಗುರುವಾರ ಹಾಸನದ ಪಾಲಿಕ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಅಂತರ್ಜಾತಿ ಸರಳ ವಿವಾಹ ಸಮಾರಂಭದಲ್ಲಿ ವೀಕ್ಷಿತಾ ಮತ್ತು ಲೋಕಕಿರಣ್ ಇಬ್ಬರೂ ‘ಮನಸ್ಸಾಕ್ಷಿ ಮದುವೆ’ ಪ್ರಮಾಣವಚನ ಸ್ವೀಕರಿಸಿದರು.
ವೀಕ್ಷಿತಾ ಚನ್ನರಾಯಪಟ್ಟಣ ಮೂಲದವರಾಗಿದ್ದು, ಲೋಕಕಿರಣ್ ಹಾಸನದವರಾಗಿದ್ದಾರೆ. ಪರಸ್ಪರ ಪ್ರೇಮಿಸುತ್ತಿದ್ದ ಈ ಜೋಡಿ ಬಾಳ ಸಂಗಾತಿಗಳಾಗಲು ನಿಶ್ಚಯಿಸಿ ಅಂತರ್ ಜಾತಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ತೀರ್ಮಾನಿಸಿದ್ದರು. ಈ ಸರಳ ಮದುವೆ ಸಮಾರಂಭದಲ್ಲಿ ವಧು ವರರಿಬ್ಬರಿಗೂ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ‘ಮನಸ್ಸಾಕ್ಷಿ ಮದುವೆ ಪ್ರಮಾಣ ವಚನ’ ಬೋಧಿಸುವ ಮೂಲಕ ಶುಭ ಹಾರೈಸಿ ಮಾತನಾಡಿದರು.
ಇದನ್ನು ಓದಿದ್ದೀರಾ? ಸಾಂವಿಧಾನಿಕ ಪ್ರತಿಜ್ಞೆಯಡಿ ಮದುವೆ; ಸ್ಥಳೀಯರ ಚಿತ್ತ, ಹೊಸಮನಿ ಕುಟುಂಬದ ಸುತ್ತ
ಸಂಸ್ಕೃತಿ ಚಿಂತಕರಾದ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ, “ಇಂತಹ ಸರಳ ಮದುವೆಗಳು ಎಲ್ಲರಿಗೂ ಮಾದರಿಯಾಗಬೇಕು. ದುಬಾರಿ ವೆಚ್ಚದ ಆಡಂಬರದ ಮದುವೆ ಸಮಾರಂಭಗಳು ಸಮಾಜದಲ್ಲಿ ಅಸಮಾನತೆಗಳನ್ನು ಸೃಷ್ಟಿಸುತ್ತವೆ” ಎಂದರು.
ಇನ್ನು ಅಂತರ್ಜಾತಿ ವಿವಾಹದ ಬಗ್ಗೆ ಮಾತನಾಡಿದ ಸಿಪಿಐ(ಎಂ) ಮುಖಂಡ ಧರ್ಮೇಶ್, “ಸಮಾಜದಲ್ಲಿ ಇಂತಹ ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು. ಪ್ರಜ್ಞಾವಂತರಾದ ನಾವುಗಳು ಮತ್ತು ಸಮಾಜ ಅಂತರ್ಜಾತಿ ಜೋಡಿಗಳ ಬೆಂಬಲಕ್ಕೆ ನಿಂತು ಅವರಲ್ಲಿ ಬದುಕಿನ ಭರವಸೆ ಮೂಡಿಸಬೇಕಿದೆ” ಎಂದು ಹೇಳಿದರು.

“ಸಮಾಜದಲ್ಲಿ ಮಾತ್ರವಲ್ಲದೆ ದಾಂಪತ್ಯದಲ್ಲಿಯೂ ಗಂಡು-ಹೆಣ್ಣು ಮೇಲುಕೀಳು ಭಾವನೆ ಇರದೆ, ಕುಟುಂಬದಲ್ಲಿಯೂ ಪ್ರಜಾಪ್ರಭುತ್ವ ಭಾವನೆ ನೆಲೆಸಬೇಕಿದೆ. ಪ್ರೀತಿಸಿ ಮದುವೆಯಾದವರು ಅತ್ಯಂತ ಜವಾಬ್ದಾರಿಯಿಂದ ಮಾದರಿಯಾಗಿ ಬದುಕಬೇಕು” ಎಂದು ಕಿವಿಮಾತು ಹೇಳಿದರು.
ಅಂತಾರಾಷ್ಟ್ರೀಯ ಚಿತ್ರಕಲಾವಿರಾದ ಕೆ.ಟಿ ಶಿವಪ್ರಸಾದ್, ಮಹದೇವಮ್ಮ ಮತ್ತು ಸರೋಜಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೋಕಕಿರಣ್ ತಂದೆ, ಸಾಹಿತಿಗಳಾದ ಹರೀಶ್ ಕಟ್ಟೆ ಬೆಳಗುಲಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಡಿವೈಎಫ್ಐ ಪೃಥ್ವಿ ಎಂ.ಜಿ ನಿರ್ವಹಿಸಿದರು.

ಸಾಹಿತಿ ಜ.ನಾ ತೇಜಶ್ರೀ, ದಲಿತ ಮುಖಂಡ ಕೃಷ್ಣದಾಸ್, ಎಂ.ಬಿ ಪುಟ್ಟಸ್ವಾಮಿ, ಡಾ. ಸೋಮಣ್ಣ ಸೇರಿದಂತೆ ಅನೇಕರು ವಧು-ವರರಿಗೆ ಶುಭ ಹಾರೈಸಿ ಮಾತನಾಡಿದರು. ಡಾ.ಹಂಪನಹಳ್ಳಿ ತಿಮ್ಮೇಗೌಡ, ಡಾ. ಜಯಶಂಕರ್ ಹಲಗೂರ್, ಎಚ್.ಕೆ ಸಂದೇಶ್, ಟಿ.ಆರ್ ವಿಜಯ್ ಕುಮಾರ್ ಸೇರಿದಂತೆ ಹಲವು ಗಣ್ಯರು, ಸಂಬಂಧಿಕರು ವಿವಾಹಕ್ಕೆ ಸಾಕ್ಷಿಯಾದರು.
