ಇಸ್ರೇಲ್‌ನ ಅಮಾನುಷ ದಾಳಿಗೆ ತುತ್ತಾಗಿರುವ ಗಾಜಾದ ಪರ ನಿಲುವಿನ ಸಾಮಾಜಿಕ ಜಾಲತಾಣ ಪೋಸ್ಟ್ ಗಳಿಗಾಗಿ ಅಮೆರಿಕೆಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಮೆಡಿಸಿನ್ ಪ್ರೊಫೆಸರ್ ರೂಪಾ ಮರ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಅಮಾನತಿನ ಕ್ರಮದಿಂದ ತಮ್ಮ ವಾಕ್ ಸ್ವಾತಂತ್ರ್ಯದ ಹರಣವಾಗಿದೆ ಎಂದು ಭಾರತೀಯ ಮೂಲದ ಪ್ರೊ.ರೂಪಾ ವಿಶ್ವವಿದ್ಯಾಲಯದ ವಿರುದ್ಧ ಕಾನೂನು ದಾವೆ ಹೂಡಿದ್ದಾರೆ.
ಇಸ್ರೇಲ್ ದಾಳಿಗೆ ತುತ್ತಾಗಿರುವ ಗಾಜಾದ ಆಸ್ಪತ್ರೆಗಳು ಮತ್ತು ಆರೋಗ್ಯ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿ ಪ್ರೊ. ರೂಪಾ ಅವರು ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆಸುವ ಮತ್ತು ತಮ್ಮನ್ನು ಕೊಲ್ಲುವ ಹಾಗೂ ನಿರಂತರ ಕಿರುಕುಳದ ಬೆದರಿಕೆಗಳು ಬಂದಿವೆ ಎಂದು ಅವರು ದೂರಿದ್ದಾರೆ.
“ಶ್ರೇಷ್ಠತಾವಾದ ಮತ್ತು ವರ್ಣಭೇದ-ಜನಾಂಗೀಯ ಸಿದ್ಧಾಂತ”ವಾದ ಯಹೂದಿವಾದವು (ಝಿಯೋನಿಸಮ್) ಆರೋಗ್ಯಸೇವೆಗಳ ಮೇಲೆ ಬೀರುವ ಪ್ರಭಾವ ಕುರಿತು ಪ್ರೊ.ರೂಪಾ ಎಕ್ಸ್ ಜಾಲತಾಣದಲ್ಲಿ ಮಾಡಿದ ಟಿಪ್ಪಣಿಗಳಿಗಾಗಿ ಕ್ಯಾಲಿಫೋರ್ನಿಯಾ ಸ್ಯಾನ್ ಫ್ರ್ಯಾನ್ಸಿಸ್ಕೊ ವಿಶ್ವವಿದ್ಯಾಲಯವು ಆಕೆಯನ್ನು 2024ರ ಸೆಪ್ಟಂಬರ್‌ನಲ್ಲಿ ರಜೆಯ ಮೇಲೆ ಇಟ್ಟಿದ್ದಲ್ಲದೆ ಆಕೆಯ ವಿಶೇಷ ಕ್ಲಿನಿಕಲ್ ಹಕ್ಕುಗಳನ್ನು ಅಮಾನತಿನಲ್ಲಿಟ್ಟಿರುವುದಾಗಿ ‘ದಿ ಗಾರ್ಡಿಯನ್’ ವರದಿ ಮಾಡಿತ್ತು.
ತರುವಾಯ ಪ್ರೊ.ರೂಪಾ ಅವರ ಹೆಸರನ್ನು ನಮೂದಿಸದೆ ವಿಶ್ವವಿದ್ಯಾಲಯವು ಹೇಳಿಕೆಯೊಂದನ್ನು ನೀಡಿತ್ತು. ಯಹೂದಿವಾದಿ ವೈದ್ಯರು ಅರಬ್, ಪ್ಯಾಲೆಸ್ತೀನಿಯನ್, ದಕ್ಷಿಣ ಏಷ್ಯನ್ನರು, ಮುಸಲ್ಮಾನರು ಹಾಗೂ ಕಪ್ಪು ವರ್ಣೀಯ ರೋಗಿಗಳ ಪಾಲಿಗೆ ಬೆದರಿಕೆಯಾಗಿ ಪರಿಣಮಿಸಿದ್ದಾರೆ ಎಂಬ ಸಂಚುಕೋರ ಪ್ರಮೇಯವನ್ನು ಕೇಳಿ ಸಾಕಾಗಿದೆ. ಈ ಪ್ರಮೇಯವನ್ನು ಖಂಡಿಸಬೇಕು ಎಂದು ವಿಶ್ವವಿದ್ಯಾಲಯ ತನ್ನ ಹೇಳಿಕೆಯಲ್ಲಿ ವಾದಿಸಿತ್ತು.
ಪ್ರೊ. ರೂಪಾ ಅವರು ಜನಾಂಗೀಯ ಯಹೂದಿದ್ವೇಷಿ ಮತ್ತು ಜನಾಂಗೀಯವಾದಿ ಸಂಚುಕೋರ ಪ್ರಮೇಯಗಳನ್ನು ಪ್ರೋತ್ಸಾಹಿಸುತ್ತಿದ್ದಾರೆಂದು ವಿಶ್ವವಿದ್ಯಾಲಯ ತನ್ನ ಹೇಳಿಕೆಯಲ್ಲಿ ಆರೋಪಿಸಿತ್ತು. ಸಂಭವನೀಯ ಅಪಾಯ ಎಂದು ಆಕೆಯನ್ನು ಬಣ್ಣಿಸಿತು. ಕಳೆದ ತಿಂಗಳು ಆಕೆಯ ವಿವರಣೆಯನ್ನು ಕೂಡ ಆಲಿಸದೆ ಕೆಲಸದಿಂದ ಅಮಾನತುಗೊಳಿಸಲಾಯಿತು. ಈ ಕ್ರಮವು ರೂಪಾ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ. ಇಂತಹುದೇ ಬೆದರಿಕೆಯ ಕತ್ತಿ ನಮ್ಮೆಲ್ಲರ ತಲೆಯ ಮೇಲೆ ನೇತಾಡಿದೆ ಎಂದು ರೂಪಾ ಅವರ ಪರ ನ್ಯಾಯವಾದಿ ಮಾರ್ಕ್ ಕ್ಲೀಮನ್ ಹೇಳಿದ್ದಾರೆ.
ಇದನ್ನೂ ಓದಿ ವಿಮಾನ ದುರಂತ | ಮೃತರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಅಧಿಕಾರಿ ಅಮಾನತು
2007ರಲ್ಲಿ ಇದೇ ವಿಶ್ವವಿದ್ಯಾಲಯದಲ್ಲಿ ಇಂಟರ್ನಲ್ ಮೆಡಿಸಿನ್ ರೆಸಿಡೆನ್ಸಿ ಪೂರ್ಣಗೊಳಿಸಿದ ರೂಪಾ ಅವರಿಗೆ ಅಲ್ಲಿಯೇ ಉದ್ಯೋಗಕ್ಕೆ ಸೇರುವ ಆಹ್ವಾನ ದೊರೆಯಿತು. ವಿವಿಯ ಬೋಧಕ ವರ್ಗವನ್ನು ಸೇರಿಕೊಂಡಿದ್ದರು. ಸರ್ವರಿಗೂ ಆರೋಗ್ಯಕರ ಕ್ಯಾಲಿಫೋರ್ನಿಯಾ ಆಯೋಗಕ್ಕೆ ಅಂದಿನ ಕ್ಯಾಲಿಫೋರ್ನಿಯಾದ ಗವರ್ನರ್ ಗವಿನ್ ನ್ಯೂಸೊಮ್ ಅವರು ಪ್ರೊ.ರೂಪಾ ಅವರನ್ನು ನೇಮಕ ಮಾಡಿದ್ದರು. ನ್ಯೂಸೊಮ್ ಮತ್ತು ಅಮೆರಿಕೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಣ ರಾಜಕೀಯ ಸಂಬಂಧ ಇತ್ತೀಚಿನ ದಿನಗಳಲ್ಲಿ ತೀರಾ ಹದಗೆಟ್ಟಿದೆ.