ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌರಾವಾನ್ವಿತ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ದೂರುದಾರರು ಹಾಗೂ ಆರೋಪಿಯು ಸ್ನೇಹಿತಾರಾಗಿದ್ದು, ಕಳೆದ ಮೊಹರಂ ಹಬ್ಬದ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ದೂರುದಾರ ಉಳಿದ ಸ್ನೇಹಿತರ ಮುಂದೆ ಆರೋಪಿಗೆ ಅವಮಾನ ಮಾಡಿದರೆಂಬ ದ್ವೇಷದಿಂದ, 2022ರ ಅಕ್ಟೋಬರ್ 27ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಚಿಕ್ಕಜಂತಕಲ್ ಗ್ರಾಮದ ಶಾದಿ ಮಹಲ್ ಹತ್ತಿರ ದೂರುದಾರರು ಸ್ನೇಹಿತರೊಂದಿಗೆ ಮಾತನಾಡುತ್ತ ಕುಳಿತಾಗ ಆರೋಪಿಯು ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದನು. ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗಂಗಾವತಿಯ 1ನೇ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಸಾಕ್ಷಿದಾರರು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಗೌರವಾನ್ವಿತ ನ್ಯಾಯಾಧೀಶರು, ಆರೋಪಿತನು ತಪ್ಪಿತಸ್ಥನೆಂದು ತೀರ್ಪು ನೀಡಿ, ಆರೋಪಿತನ ಅಪರಾಧಕ್ಕೆ 7 ವರ್ಷ ಕಾರಾಗೃಹ ವಾಸದ ಶಿಕ್ಷೆ ಹಾಗೂ ₹5000 ದಂಡ, 3 ತಿಂಗಳೊಳಗೆ ದಂಡ ಪಾವತಿಸದಿದ್ದಲ್ಲಿ 3 ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತೀರ್ಪು ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ‘ಮನಸ್ಸಾಕ್ಷಿ ಮದುವೆ’ ಪ್ರಮಾಣವಚನ ಸ್ವೀಕರಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂತರ್ಜಾತಿ ಜೋಡಿ
ಪ್ರಕರಣದಲ್ಲಿ ಅಭಿಯೋಜನಾ ಪರವಾಗಿ ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮೀ ಎಸ್. ಅವರು ವಾದ ಮಂಡಿಸಿದರು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ವೆಂಕಟೇಶ ಮತ್ತು ಮಂಜುನಾಥ ಅವರು ಪ್ರಕರಣದ ವಿಚಾರಣೆ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕಾರ ನೀಡಿದ್ದಾರೆ ಎಂದು ಗಂಗಾವತಿಯ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.