ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಿಜೆಪಿ ಮತ್ತು ಜೆಡಿಎಸ್ ಈಗ ಮಿತ್ರಪಕ್ಷಗಳಾಗಿವೆ. 2024ರ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡಿರುವ ಜೆಡಿಎಸ್ ಬಿಜೆಪಿಯನ್ನು ಹೆಜ್ಜೆ ಹೆಜ್ಜೆಗೂ ಬೆಂಬಲಿಸುತ್ತಿದೆ.
ಜುಲೈ 17 ಮತ್ತು 18ರಂದು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಮಿತ್ರಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಸದಸ್ಯರನ್ನು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಅಮಾನತು ಮಾಡಿದ್ದರು. ಈ ವೇಳೆ ಬಿಜೆಪಿಯನ್ನು ಬೆಂಬಲಿಸಿ ಜೆಡಿಎಸ್ ಕೂಡ ಪ್ರತಿಭಟನೆ ನಡೆಸಿತ್ತು. ಅಲ್ಲದೆ ಬಿಜೆಪಿಯಂತೆ ಜೆಡಿಎಸ್ ಕೂಡ ಅಧಿವೇಶನದಿಂದ ಹೊರಗುಳಿದಿದೆ.
ಅಲ್ಲದೆ, ಗುರುವಾರ ರಾಜಭವನಕ್ಕೆ ಬಿಜೆಪಿ ಜೊತೆಗೆ ಜೆಡಿಎಸ್ ನಾಯಕರೂ ಭೇಟಿ ನೀಡಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಈ ವೇಳೆ ಬಿಜೆಪಿ ಅಧಿಕೃತ ಲೆಟರ್ಹೆಡ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಹಿ ಮಾಡಿ ಕುತೂಹಲ ಮೂಡಿಸಿದ್ದರು. ಇಂದೂ ಕೂಡ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಕಾಂಗ್ರೆಸ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಕಾಂಗ್ರೆಸ್ ಟ್ವೀಟ್ ಮಾಡಿ ಎರಡೂ ಪಕ್ಷಗಳಿಗೆ ಟಾಂಗ್ ನೀಡಿದೆ. “ರಾಜ್ಯದಲ್ಲಿ ಹೊಸ ರಾಜಕೀಯ ಸಮ್ಮಿಶ್ರಣವೊಂದು ತಯಾರಾಗುತ್ತಿದೆ. ಈಗ ನಮಗಿರುವ ಪ್ರಶ್ನೆ, ಜೆಡಿಎಸ್ ಕೋಮುವಾದವನ್ನು ಅಳವಡಿಸಿಕೊಳ್ಳುತ್ತದೆಯೇ ಅಥವಾ ಬಿಜೆಪಿ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳುತ್ತದೆಯೇ” ಎಂದು ಪ್ರಶ್ನಿಸಿದೆ.
“ಬೆಳವಣಿಗೆಗಳನ್ನು ನೋಡುತ್ತಿದ್ದರೆ ಜೆಡಿಎಸ್ ಕೋಮುವಾದ ಸಿದ್ಧಾಂತಕ್ಕೆ ಬದಲಾಗುತ್ತಿರುವುದು ಕಾಣುತ್ತಿದೆ, ಥೇಟ್ ನಾಗವಲ್ಲಿಯ ತರ” ಎಂದು ಸಿನಿಮಾ ಪಾತ್ರ ಒಂದಕ್ಕೆ ಜೆಡಿಎಸ್ ನಡೆಯನ್ನು ಹೋಲಿಸಿ ಕಾಂಗ್ರೆಸ್ ಟೀಕಿಸಿದೆ.
ಈ ಸುದ್ದಿ ಓದಿದ್ದೀರಾ? ಕಲಾಪ ಬಹಿಷ್ಕರಿಸಿ ಸರ್ಕಾರದ ವಿರುದ್ಧ ಮುಂದುವರಿದ ಬಿಜೆಪಿ ಪ್ರತಿಭಟನೆ
ಮನುವಾದವೇ ಬಿಜೆಪಿ ಬೈಲಾ ಆಗಿದೆಯೇ?
“ಬಿಜೆಪಿಗೆ ದಲಿತರ ರಾಜಕೀಯ ಮತ್ತು ಸಾಮಾಜಿಕ ಏಳಿಗೆಯನ್ನು ಸಹಿಸಲಾಗುತ್ತಿಲ್ಲವೇ? ಬಿಜೆಪಿಯು ದಲಿತರ ತಲೆ ಮೇಲೆ ಚಡ್ಡಿ ಹೊರಿಸಿತ್ತು. ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನವನ್ನು ದುರುಪಯೋಗ ಮಾಡಿತ್ತು. ದಲಿತರಿಗೆ ಮಾತ್ರ ಚಪ್ಪಲಿ ಕಾಯುವ ಟೆಂಡರ್ ಮೀಸಲಿಟ್ಟಿತ್ತು. ಸೆಂಟ್ರಲ್ ವಿಸ್ತಾ, ರಾಮಮಂದಿರದ ಕಾರ್ಯಕ್ರಮಕ್ಕೆ ದಲಿತ ಸಮುದಾಯದ ರಾಷ್ಟ್ರಪತಿಗೆ ಆಹ್ವಾನಿಸಲಿಲ್ಲ. ಈಗ ದಲಿತ ಸಮುದಾಯದ ಉಪಸಭಾಪತಿಯ ಮುಖಕ್ಕೆ ಪೇಪರ್ ಎಸೆದು ಅವಮಾನಿಸಿದೆ. ದಲಿತರನ್ನು ಬಿಜೆಪಿ ಏಕಿಷ್ಟು ಕೇವಲವಾಗಿ ಕಾಣುತ್ತಿದೆ? ಮನುವಾದವೇ ಬಿಜೆಪಿಯ ಬೈಲಾ ಆಗಿದೆಯೇ?” ಎಂದು ಕಾಂಗ್ರೆಸ್ ಕಿಡಿಕಾರಿದೆ.