ಕ್ರೇನ್ ಬಳಸಿಕೊಂಡು, ಅದರ ತೊಟ್ಟಿಲಿನಲ್ಲಿ ಮನೆಯ ಸ್ಲಾಬ್ ಸೋರಿಕೆ ಸ್ಥಳವನ್ನು ಪರೀಕ್ಷಿಸಲು ಹೋಗಿದ್ದ ಇರ್ವರು ತೊಟ್ಟಿಲು ವಾಲಿಕೊಂಡಿದರಿಂದ ಇರ್ವರು ನೆಲಕ್ಕುರುಳಿ ಬಿದ್ದಿರುವ ದುರ್ಘಟನೆ ಕೋರ್ಟ್ ಹಿಂಬಾಗ ರಸ್ತೆಯ ಲೋಕೋಪಯೋಗಿ ಇಲಾಖೆ ಕಛೇರಿ ಸನಿಹ ಶನಿವಾರ ನಡೆದಿದೆ.
ಘಟನೆ ತಿಳಿದು ಧಾವಿಸಿ ಬಂದು ಗಂಭೀರ ಸ್ಥಿತಿಯಲ್ಲಿದ್ದ ಇರ್ವರ ಗಾಯಾಳುಗಳನ್ನು ಒಮ್ಮೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಅದಾಗಲೇ ಪರೀಕ್ಷಿಸಿದ ವೈದ್ಯರಿಂದ ಪ್ರಾನ್ಸಿಸ್ ಪಟೊರ್ಡೋ (65 ವ) ಮೃತಪಟ್ಟಿರುವುದು ದೃಢಪಟ್ಟಿತು. ಮೃತರು ಮನೆ ಮಾಲಕರ ಸಹೋದರ ಎಂದು ತಿಳಿದುಬಂದಿದೆ. ಇವರೊಂದಿಗೆ ಕ್ರೇನ್‌ನಲ್ಲಿ ತೆರಳಿದ್ದ ಮನೆ ಕೆಲಸದಾಕೆ ಶಾರದ (35ವ) ಇವರಿಗೆ ಗಂಭೀರ ಗಾಯಗಳಾಗಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಮಲ್ಪೆ ಕಲ್ಮಾಡಿಯವರೆಂದು ಹೇಳಲಾಗಿದೆ. ಬಿದ್ದು ಇರ್ವರು ನರಳಾಡುತ್ತಿದ್ದರೂ, ಕ್ರೇನ್ ಚಾಲಕ ಗಾಯಾಳುಗಳ ರಕ್ಷಣೆಗೆ ಮುಂದೆ ಬಾರದೆ, ಕ್ರೇನೊಂದಿಗೆ ಸ್ಥಳದಿಂದ ಪರಾರಿಯಾಗಿರುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. ದುರಂತದ ಸ್ವಷ್ಟ ವಿವರಗಳು ಇನ್ನಷ್ಟೇ ತಿಳಿದುಬರಬೇಕಾಗಿದೆ.