ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಜರುಗಿದ 4ನೇ ತ್ರೈಮಾಸಿಕ ಕೆ ಡಿ ಪಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ನಿಖಿಲ್ ಕತ್ತಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲಿಸಿ ಶುಕ್ರವಾರ ಮಾತನಾಡಿದರು
ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡಬೇಕು. ಆ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಯ ಮುಖ್ಯಸ್ಥರು ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಅನುಷ್ಟಾನ ಅಧಿಕಾರಿ, ಪಿಡಿಒ ಮತ್ತು ಜನಪ್ರತಿನಿಧಿಗಳಿಗೆ ಶಾಸಕ ನಿಖಿಲ್ ಕತ್ತಿ ಸಲಹೆ ನೀಡಿದರು.
ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಜರಗುತ್ತಿರುವ ಜಲ ಜೀವನ ಮಿಷನ್ (ಜೆ.ಜೆ.ಎಂ) ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಎಇಇ ವಿನಾಯಕ ಪೂಜೇರಿಗೆ ಸೂಚಿಸಿದರು.
ಕೆಡಿಪಿ ನಾಮನಿರ್ದೆಶನ ಸದಸ್ಯ ಬಸವರಾಜ ಕೋಳಿ ಮಾತನಾಡಿ, ಗ್ರಾಮಿಣ ಪ್ರದೇಶದಲ್ಲಿ ಜೆಜೆಎಂ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಪ್ರತಿ ಮನೆಗೆ ಎಂದು ಶುದ್ಧ ಕುಡಿಯುವ ನೀರು ದೊರೆಯುವದು ಎಂದು ಪ್ರಶ್ನಿಸಿದಾಗ, ಎಇಇ ವಿನಾಯಕ ಪೂಜೆರಿ ಮಾತನಾಡಿ, ಈಗಾಗಲೇ ಮೊದಲನೇ ಹಂತದ ಕಾಮಗಾರಿ ಮುಕ್ತಾಯವಾಗಿ, 2ನೇ ಹಂತದಲ್ಲಿವೆ. ಆದರೆ, ಸರ್ಕಾರದಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆಯ ವಿಳಂಬವೇ ಇದಕ್ಕೆ ಕಾರಣ. ಇದರಿಂದ ಕಾಮಗಾರಿಗಳು ನಿಧಾನ ಹಂತದಲ್ಲಿ ಸಾಗಿವೆ ಎಂದರು.
ಶಾಸಕ ಕತ್ತಿ ಮಾತನಾಡಿ, ಗುತ್ತಿಗೆದಾರರಿಗೆ ಹಣ ಸಂದಾಯವಾಗಿಲ್ಲ ಎಂದು ಕಾಮಗಾರಿ ನಿಲ್ಲಬಾರದು. ಗುತ್ತಿಗೆದಾರರು ತಮಗೆ ನೀಡಿದ ಕಾಮಗಾರಿ ಪೂರ್ಣಮಾಡಿ ಆಯಾ ಪಿಡಿಒಗಳಿಗೆ ಹಸ್ತಾಂತರಿಸಬೇಕು. ತಮ್ಮ ಟೆಂಡರ ಹಣದ ಬಗ್ಗೆ ಸರ್ಕಾರ ಮಟ್ಟದಲ್ಲಿ ತಾವು ಚರ್ಚಿಸುವುದಾಗಿ ತಿಳಿಸಿದರು.