ಬಾಲಕಾರ್ಮಿಕ ಪದ್ಧತಿಯು ಅನಿಷ್ಟ ಪದ್ಧತಿಯಾಗಿದ್ದು, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಕೋಶದ ಸ್ನಾತಕ, ಶಿಕ್ಷಣ ಮತ್ತು ಮುಕ್ತ ಘಟಕಗಳ ವತಿಯಿಂದ ಗುರುವಾರ ಆಯೋಜಿಸಿದ್ದ ‘ವಿಶ್ವ ಬಾಲಾಕಾರ್ಮಿಕ ವಿರೋಧಿ ದಿನಾಚರಣೆ’ಯ ಅಂಗವಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಕ್ಕಳು ನಿಯಮಿತವಾಗಿ ಶಾಲೆಗೆ ಹೋಗಿ ಉತ್ತಮ ಶಿಕ್ಷಣ ಪಡೆಯಬೇಕು. ದೇಶದ ಭವಿಷ್ಯ ಇಂದಿನ ಮಕ್ಕಳ ಮೇಲೆ ಅವಲಂಬಿತವಾಗಿದ್ದು, ಅವರು ಶಿಕ್ಷಣದ ಮೂಲಕ ಬೆಳೆಯಬೇಕು. ಪಾಲಕರು ತಮ್ಮ ಮಕ್ಕಳನ್ನು ಯಾವುದೇ ರೀತಿಯ ಕೆಲಸಕ್ಕೆ ತಳ್ಳಬಾರದು. ಹಾಗೆಯೇ ಉದ್ಯೋಗದಾತರು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಅಥವಾ ಶ್ರಮದಾಯಕ ಕೆಲಸಗಳಿಗೆ ನೇಮಿಸಿದರೆ, ಅದು ಅಪರಾಧವಾಗುತ್ತದೆ” ಎಂದರು.
“ಪೋಷಕರಿಗೂ ತಿಳುವಳಿಕೆ ನೀಡಿ, ಮಗುವನ್ನು ಶಾಲೆಗೆ ಸೇರಿಸುವಂತೆ ಪ್ರೇರೇಪಿಸಬೇಕು. ಬಾಲಕಾರ್ಮಿಕರು ಮತ್ತು ಕಿಶೋರ್ ಕಾರ್ಮಿಕರನ್ನು ತೊಡಗಿಸಿಕೊಂಡು ತಯಾರಿಸಲ್ಪಟ್ಟ ಯಾವುದೇ ವಸ್ತುಗಳನ್ನು ನಾವು ಉಪಯೋಗಿಸುವುದಿಲ್ಲ. ಹಾಗೆಯೇ, ಅವರ ಸೇವೆಗಳನ್ನು ಪಡೆದುಕೊಳ್ಳುವುದಿಲ್ಲ ಎಂಬುದನ್ನು ನಾವು ಪ್ರಾಮಾಣಿಕವಾಗಿ ಹಾಗೂ ಅತ್ಮಸಾಕ್ಷಿಯಾಗಿ ಹೇಳುತ್ತ, ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಪ್ರಮಾಣ ವಚನ ಸ್ವೀಕರಿಸುತ್ತೇವೆ” ಎಂದು ವಿದ್ಯಾರ್ಥಿನಿಯರಿಗೆ ಬೋಧಿಸಿದರು.
ಈ ಸುದ್ದಿ ಓದಿದ್ದೀರಾ? ಬೆಲೆ ಏರಿಕೆಯ ಸೃಷ್ಟಿಕರ್ತ ಪ್ರಧಾನಿ ಮೋದಿ : ಸಿಎಂ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಸ್ಥಾನಿಕ ಅಭಿಯಂತರ ಮಾರುತಿ ಕದಂ, ಸಮಾಜ ಕಾರ್ಯ ವಿಭಾಗದ ಸಹ-ಪ್ರಾಧ್ಯಾಪಕ ಡಾ. ರಮೇಶ ಎಂ ಸೋನಕಾಂಬಳೆ, ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಶೇಖರ ಮಠಪತಿ, ಎನ್‌ಎಸ್‌ಎಸ್ ಕೋಶದ ಸಂಯೋಜಕ ಪ್ರೊ. ಅಶೋಕಕುಮಾರ ಸುರಪುರ, ಎನ್‌ಎಸ್‌ಎಸ್ ಘಟಕಗಳ ಕಾರ್ಯಕ್ರಮಾಧಿಕಾರಿ ಡಾ. ಅಮರನಾಥ ಪ್ರಜಾಪತಿ ಹಾಗೂ ಎಲ್ಲ ಎನ್‌ಎಸ್‌ಎಸ್ ಘಟಕಗಳ ಸ್ವಯಂ ಸೇವಕಿಯರು ಇದ್ದರು.
ಕಾರ್ಯಕ್ರಮದಲ್ಲಿ ಪ್ರೊ. ವಿಷ್ಣು ಎಂ ಶಿಂದೆ ಸ್ವಾಗತಿಸಿದರು, ಡಾ. ಕಲಾವತಿ ಎಚ್ ಕಾಂಬಳೆ ನಿರೂಪಿಸಿದರು, ಡಾ. ಗುಲಾಬ ರಾಠೋಡ ವಂದಿಸಿದರು.