ತುಂಗಾಭದ್ರಾ ಜಲಾಶಯದಲ್ಲಿ ಈ ಹಿಂದೆ ಸಂಗ್ರಹಿಸಿದಂತೆ 100 ಟಿಎಂಸಿ ನೀರನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಕೇವಲ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಬಹುದು. ಜಲಾಶಯದಲ್ಲಿ 25-30 ಟಿಎಂಸಿ ನೀರು ಸಂಗ್ರಹವಾದರೆ ಜೂನ್ 25ರೊಳಗೆ ಜಲಾಶಯದ ಮೂರೂ ಕಾಲುವೆಗಳಿಗೆ ನೀರನ್ನು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಆರ್ ಕರೂರು ಮಾಧವ ರೆಡ್ಡಿ ತುಂಗಭದ್ರಾ ಮಂಡಳಿಯ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರು.
ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ರೈತ ಸಂಘಟನೆಗಳೊಂದಿಗೆ ಪತ್ರಿಕಾಗೋಷ್ಟಿ ನಡೆಸಿ, ರೈತರ ಸಂಕಷ್ಟಗಳ ಕುರಿತು ಜಲಾಶಯ ಮಂಡಳ ಹಾಗೂ ಅಧ್ಯಕ್ಷರಿಗೆ ಮನದಟ್ಟು ಮಾಡಿದರು.
ಮಾಧವರೆಡ್ಡಿ ಮಾತನಾಡಿ, “ತುಂಗಭದ್ರಾ ಜಲಾಶಯದ 33 ಗೇಟ್‌ಗಳು ಶಿಥಿಲಗೊಂಡಿದ್ದು, ಅದರಲ್ಲಿ ಕಳೆದ ವರ್ಷ 19ನೇ ಗೇಟ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇದು ಸಂಬಂಧಿಸಿದ ಅಧಿಕಾರಿಗಳಿಗೆ ಗೊತ್ತಿದ್ದರೂ, ಗೇಟನ್ನು ಈವರೆಗೆ ದುರಸ್ತಿ ಮಾಡಿಲ್ಲ, ಹೊಸ ಗೇಟನ್ನೂ ಅಳವಡಿಸಿಲ್ಲ. ಜಲಾಶಯಕ್ಕೆ ಅಂದು ಅಳವಡಿಸಿದ ತಾತ್ಕಾಲಿಕ ಗೇಟ್‌ನ್ನೇ ಇಂದಿಗೂ ಉಳಿಸಿಕೊಂಡು ಹೋಗಲಾಗುತ್ತಿದೆ” ಎಂದರು.
“ತುಂಗಭದ್ರಾ ಜಲಾಶಯದ ಹಾಳಾಗಿರುವ ಗೇಟ್‌ಗಳನ್ನು ಬದಲಾಯಿಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆಯೆಂದು ಮಂಡಳಿಯ ಅಧ್ಯಕ್ಷ ಶಿವರಾಜ್ ತಂಗಡಿಗಿ ತಿಳಿಸಿದ್ದಾರೆ. ಟೆಂಡರ್ ಕರೆದರೂ ಕೂಡಾ ಇಂದಿಗೂ ಗೇಟ್ ಅಳವಡಿಸುವ ಕಾರ್ಯ ಆರಂಭವಾಗಿಲ್ಲ. ಇದರಿಂದ ಜಲಾಶಯದ ಮೂರು ಕಾಲುವೆಗಳ ಮತ್ತು ನದಿ ಪಾತ್ರದ ಜನರು ಕೃಷಿ ಚಟುವಟಿಕೆ ನಡೆಸಲು ಆತಂಕಗೊಂಡಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
“5 ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಬೋರ್ಡ್‌ನ ಅಧ್ಯಕ್ಷರು ಸದಸ್ಯರುಗಳು ಸೇರಿ ಮೂರೂ ಕಾಲುವೆಗಳಿಗೆ ಯಾವಾಗ ನೀರು ಬಿಡಲಾಗುತ್ತದೆ, ಎಲ್ಲಿಯವರೆಗೆ ನೀರು ಬಿಡಲಾಗುತ್ತದೆ? ಎಂಬುದನ್ನು ಖಚಿತಪಡಿಸಬೇಕು. ಇದರಿಂದ ಮೂರು ಕಾಲುವೆಗಳ ಐದು ಜಿಲ್ಲೆಗಳ ರೈತರಿಗೆ, ನೀರು ಲಭ್ಯವಾಗುವ ಆಧಾರದ ಮೇಲೆ ಬೆಳೆಗಳನ್ನು ಬಿತ್ತಲು ಅನುಕೂಲವಾಗುತ್ತದೆ. ತುಂಗಭದ್ರಾ ಜಲಾಶಯದ ಮಂಡಳಿ ಶೀಘ್ರದಲ್ಲೇ ನೀರು ಬಿಡುವ ಮತ್ತು ಬಂದ್ ಮಾಡುವ ದಿನಾಂಕವನ್ನು ರೈತರಿಗೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಬೇಕು” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಏಳು ತಿಂಗಳಿಂದ ಕೈಸೇರದ ವೇತನ; ನ್ಯೂ ಮಿನರ್ವ ಮಿಲ್ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ
“ಕಳೆದ ವರ್ಷ ಈ ಜಲಾಶಯ ಪಾತ್ರದ ರೈತರು 2 ಲಕ್ಷ ಕ್ವಿಂಟಲ್ ಒಣ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದರು. ಆದರೀಗ ಈವರೆಗೂ ಮೆಣಸಿನಕಾಯಿ ಬೀಜವನ್ನು ಖರೀದಿಸಿರುವುದಿಲ್ಲ ಹಾಗೂ ಸಸಿಯನ್ನೂ ಹಾಕಿರುವುದಿಲ್ಲ. ಇದರಿಂದ ರೈತರು ಆತಂಕಗೊಂಡು ಮೆಕ್ಕೆಜೋಳ ಮತ್ತು ಜೋಳವನ್ನು ಬಿತ್ತುವ ಯೋಚನೆಯಲ್ಲಿದ್ದಾರೆ. ದಯವಿಟ್ಟು ಮಂಡಳಿಯ ಅಧಿಕಾರಿಗಳು ಯಾವಾಗ ಕಾಲುವೆಗಳಿಗೆ ನೀರು ಬಿಡಲಾಗುತ್ತದೆ ಹಾಗೂ ಎಲ್ಲಿವರೆಗೂ ಬಿಡಲಾಗುತ್ತದೆ” ಎಂದು ಪತ್ರಿಕಾ ಮಾಧ್ಯಮದಲ್ಲಿ ಪ್ರಕಟಿಸಲು ಒತ್ತಾಯಿಸಿದರು.
ಲೇಪಾಕ್ಷಿ ಪಂಪನಗೌಡ, ಬಸವರಾಜ ಸ್ವಾಮಿ, ಉಮಾಪತಿ ಗೌಡ, ವಿಶ್ವನಾಥ್ ಕೆ ವಿ, ತಿಮ್ಮಾರೆಡ್ಡಿ ಓಂಕಾರಪ್ಪ, ಪಂಪನಗೌಡ, ಸುರೇಂದ್ರ, ಸಂಜೀವ ರೆಡ್ಡಿ ಹಾಗೂ ರೈತರು ಇದ್ದರು.