ಮೃತದೇಹ ಮತ್ತು ಅವರ ಕುಟುಂಬಸ್ಥರನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್, ಪಿಕ್ ಅಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಪುರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ನಡೆದಿದೆ.ಆಂಬ್ಯುಲೆನ್ಸ್‌ನಲ್ಲಿ ಹರಿಯಾಣದಿಂದ ಬಿಹಾರಕ್ಕೆ ಮೃತದೇಹವನ್ನು ಸಾಗಿಸಲಾಗುತ್ತಿತ್ತು. ಆಂಬ್ಯುಲೆನ್ಸ್‌ನಲ್ಲಿ ಇಬ್ಬರು ಚಾಲಕರು ಮತ್ತು ನಾಲ್ವರು ಕುಟುಂಬ ಸದಸ್ಯರು ಇದ್ದರು.
ಆಂಬ್ಯುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿದ್ದು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಜಾರ್ ಶುಕುಲ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಭಿನೇಶ್ ಕುಮಾರ್ ತಿಳಿಸಿದ್ದಾರೆ. ಗಾಯಾಳುಗಳನ್ನು ಬಿಹಾರದ ಸಮಸ್ತಿಪುರ ಜಿಲ್ಲೆಯ ಶಂಭು ರೈ ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶದಲ್ಲಿ ಅಪಘಾತ: 11 ಮಂದಿ ಸಾವು, 10 ಜನರಿಗೆ ಗಾಯ
ಮೃತರನ್ನು ಬಿಹಾರದ ಸಮಸ್ತಿಪುರ ಜಿಲ್ಲೆಯ ನಿವಾಸಿಗಳಾದ ರಾಜ್‌ಕುಮಾರ್ ಶರ್ಮಾ ಅಲಿಯಾಸ್ ಸತೀಶ್ ಶರ್ಮಾ, ರವಿ ಶರ್ಮಾ ಮತ್ತು ಫೂಲೊ ಶರ್ಮಾ ಎಂದು ಗುರುತಿಸಲಾಗಿದೆ. ಸಮಸ್ತಿಪುರದ ರಾಮಭದ್ರಾಪುರ ನಿವಾಸಿ ಅಶೋಕ್ ಶರ್ಮಾ ಅವರ ಮೃತದೇಹವನ್ನು ಸಾಗಿಸಲಾಗುತ್ತಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆಂಬ್ಯುಲೆನ್ಸ್ ಹಿಂದಿನಿಂದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೆಚ್ಚುವರಿ ಎಸ್‌ಪಿ ಹೇಳಿದರು. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀವಹಾನಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
