ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ಕಳ್ಳಳ್ಳ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜೀಪ್ ಚಾಲಕ ಗೋಪಾಲ್ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ, ಮೃತನ ಪತ್ನಿ ನೀಡಿದ ದೂರಿನನ್ವಯ ನಿರ್ಲಕ್ಷ್ಯ, ಕರ್ತವ್ಯ ಲೋಪ ಹಾಗೂ ಅನುಮಾನಾಸ್ಪದ ಹಿನ್ನೆಲೆಯಲ್ಲಿ ವಲಯ ಅರಣ್ಯ ಅಧಿಕಾರಿ ಡಿ. ರಾಜಶೇಖರ್, ಆರ್ ಎಫ್ ಓ ವೇಣುಗೋಪಾಲ್, ಅರಣ್ಯ ಸಿಬ್ಬಂದಿಗಳಾದ ಶಿವು, ಅಭಿ ಹಾಗೂ ಗುತ್ತಿಗೆದಾರ ಪ್ರಕಾಶ್ ಎಂಬುವರ ಮೇಲೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 105, 211, 213, ಅನ್ವಯ ಎಫ್ಐಆರ್ ದಾಖಲಾಗಿದೆ.
ಕಳ್ಳಹಳ್ಳ ಅರಣ್ಯ ವಿಭಾಗದಲ್ಲಿ ಕಳೆದ 25 ವರ್ಷಗಳಿಂದ ಜೀಪ್ ಚಾಲಕರಾಗಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋಪಾಲ ಎಂಬುವರು ಮೇ. 22 ರಂದು ಕರ್ತವ್ಯ ನಿಮಿತ್ತ ಇತರ ಸಿಬ್ಬಂದಿಗಳೊಂದಿಗೆ ತೆರಳುತ್ತಿದ್ದಾಗ ಜೀಪ್ ಕಾಡಿನೊಳಗೆ ಅಪಘಾತವಾಗಿ ಇತರ ಸಿಬ್ಬಂದಿಗಳೊಂದಿಗೆ ಮೈಸೂರು ಆಸ್ಪತ್ರೆಗೆ ಸೇರಿಸಿದ್ದರು. ತೀವ್ರ ಸ್ವರೂಪದ ತಲೆ ಭಾಗಕ್ಕೆ ಪೆಟ್ಟಾಗಿದ್ದು, 72 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸದೆ 23 ರ ಬೆಳಗಿನ ಜಾವ ನಾಗಪುರ ಹಾಡಿಯಲ್ಲಿರುವ ಮನೆಗೆ ಅರಣ್ಯ ಇಲಾಖೆ, ಇತರೆ ಸಿಬ್ಬಂದಿಗಳು ತಂದು ಇಳಿಸಿ ಹೋಗಿದ್ದಾರೆ.
ಪತ್ನಿ ಮೇ. 26 ರಂದು ಆಸ್ಪತ್ರೆಗೆ ಮತ್ತೆ ಸೇರಿಸಿ ಅಗತ್ಯ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ-12-6-25 ರಂದು ಗೋಪಾಲ್ ಮೃತಪಟ್ಟಿದ್ದಾರೆ. ಇಲಾಖೆ ನಿಯಮದಂತೆ ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸದೆ ಇಲಾಖಾ ಅಧಿಕಾರಿಗಳು ಗೋಪಾಲನ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.

ಮೇ. 22 ರಂದು ಅಪಘಾತವಾಗಿದ್ದರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಇಲಾಖೆ ದೂರು ನೀಡಲಿಲ್ಲ. ಹಾಗೆ, ಘಟನೆ ನಡೆದ ನಂತರ ಅವರ ಪತ್ನಿ ಹಾಗೂ ಮಕ್ಕಳಿಗೆ ತಿಳಿಸದೆ, ಇಲಾಖೆಯಿಂದಲೂ ಸೂಕ್ತ ಚಿಕಿತ್ಸೆ ದೊರಕದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪತ್ನಿ ಚಿತ್ರ ರವರು ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಅನ್ವಯ ಶನಿವಾರ ಪ್ರಕರಣ ದಾಖಲಾಗಿದೆ.
ವಿಚಾರ ತಿಳಿದ ಗುತ್ತಿಗೆ ನೌಕರರ ರಾಜ್ಯಾಧ್ಯಕ್ಷರಾದ ಸಂಕೇತ್ ಪೂವಯ್ಯ ಮೃತನ ಮನೆಗೆ ಭೇಟಿ ನೀಡಿ ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದಿಂದ ದೀಪಾ ಬಾಸ್ತಿಯವರಿಗೆ ಸನ್ಮಾನ
ಮೃತ ಗೋಪಾಲನ ಪರವಾಗಿ ವಿರಾಜಪೇಟೆ ಹಿರಿಯ ವಕೀಲರಾದ ಡಿ. ಸಿ. ಧ್ರುವ ಕುಮಾರ್ ಮೃತನ ಕುಟುಂಬಕ್ಕೆ ಸಹಕಾರ ನೀಡಿ ಪ್ರಕರಣ ದಾಖಲಿಸಲು ಸಹಕಾರಿಯಾಗಿದ್ದಾರೆ. ಕಾನೂನಾತ್ಮಕ ಹೋರಾಟದ ಮೂಲಕ ನ್ಯಾಯ ಪಡೆಯಲಿದ್ದೇವೆ. ಈಗಾಗಲೇ ಎಫ್ಐಆರ್ ದಾಖಲಾಗಿದ್ದು ತನಿಖೆಯಿಂದ ಸತ್ಯ ಹೊರಬರಲಿದೆ. ಘನ ನ್ಯಾಯಾಲಯದ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎನ್ನುವ ವಿಶ್ವಾಸವನ್ನು ಸಂಕೇತ್ ಪೂವಯ್ಯ ವ್ಯಕ್ತಪಡಿಸಿದ್ದಾರೆ.