ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧಿಸಿರುವುದನ್ನು ಕಾನೂನುಬದ್ಧಗೊಳಿಸಿರುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಮತ್ತು ಅವರ ಪತ್ನಿ ಸಲ್ಲಿಸಿರುವ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದರೇಶ್ ಅವರನ್ನೊಳಗೊಂಡ ಪೀಠವು ಇಡಿಗೆ ನೋಟಿಸ್ ಜಾರಿಗೊಳಿಸಿ ಜುಲೈ 26ಕ್ಕೆ ವಿಚಾರಣೆ ಮುಂದೂಡಿತು.
ಇಡಿ ತನಿಖೆ ನಡೆಸುತ್ತಿರುವ ಉದ್ಯೋಗಕ್ಕಾಗಿ ನಗದು ಹಗರಣ ಪ್ರಕರಣದಲ್ಲಿ ತನ್ನನ್ನು ಬಿಡುಗಡೆ ಮಾಡಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿ ಸೆಂಥಿಲ್ ಬಾಲಾಜಿ ಮತ್ತು ಅವರ ಪತ್ನಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಮಣಿಪುರ ಘಟನೆ | ದೇಶಾದ್ಯಂತ ಟ್ರೋಲ್ ಆದ ಪ್ರಧಾನಿಯ ‘ಮೊಸಳೆ ಕಣ್ಣೀರು’
ಸೆಂಥಿಲ್ ಬಾಲಾಜಿ ಅವರ ಬಂಧನಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ನಿಶಾ ಬಾನು ಮತ್ತು ಡಿ ಭರತ ಚಕ್ರವರ್ತಿ ಅವರು ವಿಭಿನ್ನ ತೀರ್ಪು ನೀಡಿದ್ದರು. ನ್ಯಾಯಮೂರ್ತಿ ನಿಶಾ ಬಾನು ಅವರು ಬಾಲಾಜಿ ಬಿಡುಗಡೆಗಾಗಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಮನವಿ ಸಮರ್ಥನೀಯವಾಗಿದೆ, ಅವರನ್ನು ಬಿಡುಗಡೆ ಮಾಡಬಹುದು ಎಂದು ಹೇಳಿದ್ದರು. ಆದರೆ ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರು ನ್ಯಾಯಮೂರ್ತಿ ಬಾನು ಅವರ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ, ಎದೆನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಾಜಿ ಆಸ್ಪತ್ರೆಯಲ್ಲಿರುವಷ್ಟು ದಿನ ಇಡಿ ಕಸ್ಟಡಿಯಿಂದ ಹೊರಗಿರಲಿದ್ದಾರೆ. ಅಷ್ಟರೊಳಗೆ ಬಾಲಾಜಿ ಫಿಟ್ ಆಗಿದ್ದರೆ ಹತ್ತು ದಿನಗಳಲ್ಲಿ ಮತ್ತೆ ಇಡಿ ಕಸ್ಟಡಿಗೆ ತೆರಳಬಹುದು ಎಂದು ಹೇಳಿದ್ದರು.
ಜೂನ್ 12ರಂದು ಜಾರಿ ನಿರ್ದೇಶನಾಲಯ ಸಚಿವ ವಿ ಸೆಂಥಿಲ್ ಬಾಲಾಜಿ ಮನೆ ಮತ್ತು ಅವರ ಆಪ್ತರ ಮೇಲೆ ದಾಳಿ ನಡೆಸಿತ್ತು. ನಂತರ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದಾಗ ನಡೆದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು 19 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿದರು.
ಬಂಧನದ ನಂತರವು ಸೆಂಥಿಲ್ ಬಾಲಾಜಿ ತಮಿಳುನಾಡು ಸಚಿವ ಸಂಪುಟದಲ್ಲಿ ಖಾತೆ ರಹಿತ ಸಚಿವರಾಗಿ ಮುಂದುವರಿದಿದ್ದಾರೆ.
ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ರಾಜ್ಯ ಸರ್ಕಾರದೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಸೆಂಥಿಲ್ ಬಾಲಾಜಿ ಅವರನ್ನು ವಜಾಗೊಳಿಸಿದ್ದರು. ಅಸಂವಿಧಾನಿಕ ನಡೆಗೆ ದೇಶಾದ್ಯಂತ ವಿರೋಧ ವ್ಯಕ್ತವಾದಾಗ ಒಂದೇ ದಿನದಲ್ಲಿ ತಮ್ಮ ನಿರ್ಧಾರವನ್ನು ವಾಪಸ್ ಪಡೆದಿದ್ದರು.