ಎರಡು ವಾರಗಳ ನಂತರ ಭಾರತದಲ್ಲಿ ಮುಂಗಾರು ಅಬ್ಬರ ಹೆಚ್ಚಾಗುತ್ತಿದ್ದು, ಈಶಾನ್ಯ ಮತ್ತು ದಕ್ಷಿಣ ಭಾರತದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ -ಐಎಂಡಿ ಎಚ್ಚರಿಕೆ ನೀಡಿದೆ.
“ನೈರುತ್ಯ ಮುಂಗಾರಿನ ಎರಡನೇ ಹಂತವು ಮತ್ತೆ ಸಕ್ರಿಯಗೊಳ್ಳುತ್ತಿದೆ. ಇದರಿಂದಾಗಿ ಕರ್ನಾಟಕ, ಕೇರಳ ಮತ್ತು ಮಾಹೆಯಲ್ಲಿ ಭಾರಿ ಮಳೆಯಾಗಬಹುದು. ಹೆಚ್ಚಾಗಿ ಈಶಾನ್ಯ ರಾಜ್ಯಗಳಲ್ಲಿ ತೀವ್ರ ಹಠಾತ್ ಪ್ರವಾಹದ ಅಪಾಯವಿದೆ. ಈ ಪ್ರದೇಶದಲ್ಲಿ 200 ಮಿಮೀಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ” ಹವಾಮಾನ ಇಲಾಖೆ ತಿಳಿಸಿದೆ.
ಇದನ್ನು ಓದಿದ್ದೀರಾ? ಹವಾಮಾನ | ಉತ್ತರ ಕರ್ನಾಟಕದಲ್ಲಿ ಇಂದು ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ, ಎಚ್ಚರಿಕೆಯಿಂದಿರಲು ಸೂಚನೆ
ಅಸಾಧಾರಣ ಮಳೆಯು ತಗ್ಗು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗಬಹುದು. ಭೂಕುಸಿತವೂ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಕೊಂಕಣ, ಗೋವಾ, ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ರೆಡ್ ಅಲರ್ಟ್ ಮತ್ತು ಈಶಾನ್ಯದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮುಂದಿನ ಎರಡು ದಿನಗಳಲ್ಲಿ ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಹಠಾತ್ ಪ್ರವಾಹ ಉಂಟಾಗುವ ಅಧಿಕ ಅಪಾಯವಿದೆ. ಯಾವುದೇ ಅಪಾಯಕ್ಕೂ ಈಗಲೇ ಸಿದ್ಧತೆ ನಡೆಸುವಂತೆ ಸೂಚಿಸಲಾಗಿದೆ.
ಈ ವರ್ಷ, ನೈಋತ್ಯ ಮುಂಗಾರು ಜೂನ್ 1ಕ್ಕೆ ಎಂಟು ದಿನಗಳ ಮೊದಲು ಕೇರಳ ಕರಾವಳಿಯನ್ನು ತಲುಪಿತು. ಜೂನ್ 2ರವರೆಗೆ ದಕ್ಷಿಣ ಪರ್ಯಾಯ ದ್ವೀಪ, ಮಧ್ಯ ಭಾರತದ ಒಂದು ಭಾಗ ಮತ್ತು ಈಶಾನ್ಯಕ್ಕೆ ಅತಿ ವೇಗವಾಗಿ ಹರಡಿತು. ಈ ನಡುವೆ ಉತ್ತರ ಭಾರತದಲ್ಲಿ ಶುಷ್ಕ ವಾತಾವರಣ ಮತ್ತು ಶಾಖದ ಅಲೆ ಅಪ್ಪಳಿಸಿತು.
