“ಬುದ್ಧ ಪ್ರತಿಪಾದಿಸಿದ ಅಷ್ಟಾಂಗ ಮಾರ್ಗಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ; ಪರಿವರ್ತನೆ ಸಾದ್ಯವಾಗುತ್ತದೆ ಎಂದು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಡಾ. ಸಂಜೀವ ಕುಲಕರ್ಣಿ ಹೇಳಿದರು.
ಧಾರವಾಡ ಪಟ್ಟಣದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
“ಬದುಕಿನಲ್ಲಿ ಕಷ್ಟ ಬರುತ್ತವೆ, ಆ ಕಷ್ಟಗಳಿಗೆ ಕಾರಣಗಳಿರುತ್ತವೆ, ಕಷ್ಟ ಪರಿಹಾರಕ್ಕೆ ಪ್ರಯತ್ನಿಸಿದರೆ ನಿವಾರಣೆ ಆಗುತ್ತದೆ. ಮತ್ತು ಸೂಕ್ತ ಮಾರ್ಗವೂ ಇದೆ’ ಎಂದು ಬುದ್ಧ ನಾಲ್ಕು ಸತ್ಯಗಳನ್ನು ಸಾರಿದ್ದಾರೆ. ಬುದ್ಧನ ಬೋಧನೆಯಲ್ಲಿ ಬರುವ ಸಮ್ಯಕ್ ಪದವು ಯೋಗ್ಯವಾದುದು, ಸರಿಯಾದದ್ದು, ಸೂಕ್ತವಾದದ್ದು ಮತ್ತು ಸಹಜವಾದದ್ದು ಎಂದರ್ಥವನ್ನು ಕೊಡುತ್ತದೆ. ಹಲವು ತಾರತಮ್ಯಗಳನ್ನು ಕೃತಕವಾಗಿ ಸೃಷ್ಟಿ ಮಾಡಿಕೊಂಡು ಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ಅವುಗಳಿಂದ ಹೊರಬಂದು ಸುಂದರ ಬದುಕು ನಿರ್ಮಾಣ ಮಾಡಿಕೊಳ್ಳಲು ಸಮ್ಯಕ್ ಪದದ ಅರ್ಥದಲ್ಲಿ ಸಾಗಬೇಕಿದೆ” ಎಂದರು.
ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, “ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಮನೆ ಮತ್ತು ಮನಗಳಲ್ಲಿ ಅಳವಡಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಮಹನೀಯರು ಹುಟ್ಟಿ ಬರದೇ ಇದ್ದಿದ್ದರೆ, ನಾವಾರೂ ಸಮಾನತೆಯಿಂದ ಬದುಕಲು ಸಾಧ್ಯವಿದ್ದಿದ್ದಿಲ್ಲ. ನಾವೇ ಶ್ರೇಷ್ಠ ಇತರರು ಕನಿಷ್ಠವೆಂಬ ಮನೋಭಾವ ಹೆಚ್ಚಾಗುತ್ತಿದೆ. ನೆರೆಹೊರೆಯ ರಾಷ್ಟ್ರಗಳನ್ನು ಶತ್ರುಗಳಂತೆ ಕಾಣುವ ವಾತಾವರಣ ಸೃಷ್ಟಿಯಾಗಿರುವ ಪರಿಣಾಮ ಸಮಾಜದಲ್ಲಿ ಅಶಾಂತಿ ಹೆಚ್ಚಾಗುತ್ತಿದೆ” ಎಂದರು.
ಉಪನ್ಯಾಸಕಿ ಅನಸೂಯಾ ಕಾಂಬಳೆ ಅವರು ‘ಬುದ್ದ ಬೋಧನೆಯಲ್ಲಿ ಮಹಿಳೆಯರ ಸ್ಥಾನಮಾನ’ ಕುರಿತು ಮಾತನಾಡುತ್ತಾ, “ಬುದ್ಧನ ಬೋಧನೆಗಳಲ್ಲಿ ಧರ್ಮದ ವಿಧಿ ಮತ್ತು ನಿಷೇಧಗಳಿಲ್ಲ. ಅವರ ವಿಚಾರಗಳಲ್ಲಿ ಮಹಿಳೆಯರ ಜೀವನ ಸುಧಾರಣಾ ಮಾರ್ಗಗಳು ಕಾಣುತ್ತವೆ’ ಎಂದರು.

ಶಿಲಾಧರ ಮುಗಳಿ ಮಾತನಾಡಿ, “ಬುದ್ಧ ಅಹಿಂಸಾ ಪರಮೋ ಧರ್ಮವನ್ನು ಪಾಲಿಸಿದರು. ಪ್ರಸ್ತುತ ಸಮಸ್ಯೆಗಳಿಗೆ ಬುದ್ಧನ ವಿಚಾರಗಳಲ್ಲಿ ಪರಿಹಾರವಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಕರ್ತವ್ಯ ಲೋಪ ಎಸಗಿದ್ದಕ್ಕೆ ಪಿಡಿಒ ಅಮಾನತು
ಫೌಂಡೇಶನ್‌ನ ಮುಖ್ಯಸ್ಥ ಮತ್ತು ಸಚಿವ ಸಂತೋಷ್ ಲಾಡ್ ಸಮಾಜದಲ್ಲಿ ಬದಲಾವಣೆ ತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಎನ್. ಎಚ್. ಕೋನರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.
