ಅಫಜಲಪುರ ತಾಲ್ಲೂಕಿನ ದಿಕ್ಸಂಗಾ (ಕೆ) ಗ್ರಾಮದ ರೈತ ಬೀರಣ್ಣ ಪಾಟೀಲ (50) ಸಾಲಬಾಧೆಗೆ ಬೇಸತ್ತು ಭಾನುವಾರ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ರೈತನಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ ಎಂದು ತಿಳಿದು ಬಂದಿದೆ.
ರೈತ ಬೀರಣ್ಣ ಅವರು ಗ್ರಾಮದಲ್ಲಿ 4.8 ಎಕರೆ ಜಮೀನು ಹೊಂದಿದ್ದು, ಮಾಶ್ಯಾಳ ಗ್ರಾಮದ ಬ್ಯಾಂಕ್‌ನಲ್ಲಿ ₹ 4.71 ಲಕ್ಷ ಹಾಗೂ ಖಾಸಗಿಯಾಗಿ ₹ 6 ಲಕ್ಷ ಸಾಲ ಮಾಡಿದ್ದರು. ಸಾಲಕ್ಕೆ ಹೆದರಿ ಮನೆಯಲ್ಲಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ.
ಕೂಡಲೇ ಸ್ಥಳೀಯರ ಸಹಾಯದಿಂದ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.