ಇಸ್ತೇಲ್ ಯೋಜನೆ- ಇರಾನ್ ಮೇಲೆ ನೇರವಾಗಿ ಯುದ್ಧ ಮಾಡುವುದಕ್ಕಿಂತ, ಇರಾನ್ ಮತ್ತು ಅಮೆರಿಕಾವನ್ನು ಪ್ರಚೋದಿಸಿ, ಅಮೆರಿಕಾ ಯುದ್ಧದಲ್ಲಿ ಭಾಗಿಯಾಗುವಂತೆ ಒತ್ತಡ ಹಾಕುವ ಸನ್ನಿವೇಶ ಸೃಷ್ಟಿಸುವುದಾಗಿದೆ.
ಇರಾನ್ ಮೇಲಿನ ಇಸ್ರೇಲ್ನ ದಾಳಿ ಆರಂಭದಲ್ಲಿ ಅದರ ಪರಮಾಣು ಯೋಜನೆಯನ್ನು ತಡೆಯುವ ಗುರಿ ಹೊಂದಿತ್ತು. ಆದರೆ ಈಗ ಅದು ಇರಾನ್ ಸರ್ಕಾರವನ್ನು ಬದಲಿಸುವ ಬಗ್ಗೆ ಮಾತನಾಡುತ್ತಿದೆ. ಇದು ನಿಜಕ್ಕೂ ಅಪಾಯಕಾರಿ ಯೋಜನೆಯಾಗಿ ಬದಲಾಗಿದೆ. ಹಾಗೆಯೇ ಇಸ್ರೇಲ್ ತನ್ನ ಯೋಜನೆಯನ್ನು ಆಗುಮಾಡಲು ಅಮೆರಿಕಾದ ಬೆಂಬಲವನ್ನು ಬಯಸಿದೆ. ಆದರೆ ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಸಮಸ್ಯೆಗಳು ಬೇರೆ ಇವೆ, ಈಗಾಗಲೇ ಅವು ಕಾಣಿಸಿಕೊಳ್ಳತೊಡಗಿವೆ. ಇರಾನ್-ಇಸ್ರೇಲ್ ಸಂಘರ್ಷ, ಇರಾನ್ ಸರ್ಕಾರವನ್ನು ಬದಲಿಸುವ ಬದಲು, ಮಧ್ಯಪ್ರಾಚ್ಯವನ್ನು ಬದಲಾಯಿಸಬಹುದು; ಗಾಜಾ ಮತ್ತು ವೆಸ್ಟ್ ಬ್ಯಾಂಕ್ನ ಪ್ಯಾಲಸ್ತೇನಿಯರಿಗೂ ಹಾನಿ ಮಾಡಬಹುದು ಎನ್ನಲಾಗುತ್ತಿದೆ.
ದೀರ್ಘಕಾಲದ ರಹಸ್ಯ ಸಂಘರ್ಷ
ಇರಾನ್(ತೆಹ್ರಾನ್ನಲ್ಲಿ) ಮತ್ತು ಇಸ್ರೇಲ್(ತೆಲ್ ಅವೀವ್ನಲ್ಲಿ) ಹಲವು ವರ್ಷಗಳಿಂದ ರಹಸ್ಯವಾಗಿ ಹೋರಾಡುತ್ತಿದ್ದವು. ಅವರು ತಮ್ಮ ಯುದ್ಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಕೊಲೆಗಳು, ಸೈಬರ್ ದಾಳಿಗಳು ಮತ್ತು ದಮಾಸ್ಕಸ್ (ಸಿರಿಯಾ) ಹಾಗೂ ರೆಡ್ ಸೀನಂತಹ ಸ್ಥಳಗಳಲ್ಲಿ ಚಿಕ್ಕಪುಟ್ಟ ಸಂಘರ್ಷಗಳ ಮೂಲಕ ಹೋರಾಡುತ್ತಿದ್ದರು. ಇದಕ್ಕೆ ಕೆಲವು ಅಲಿಖಿತ ನಿಯಮಗಳಿದ್ದವು: ಎರಡೂ ಕಡೆಯವರು ದಾಳಿಗಳನ್ನು ಹೆಚ್ಚಿಸುತ್ತಿದ್ದರು. ಆದರೆ ಪೂರ್ಣ ಯುದ್ಧ ಶುರು ಮಾಡುತ್ತಿರಲಿಲ್ಲ. ಆದರೆ ಜೂನ್ 13, 2025 ರಂದು ಇಸ್ರೇಲ್ ಈ ನಿಯಮಗಳನ್ನು ಗಾಳಿಗೆ ತೂರಿ, ಆಪರೇಷನ್ ರೈಸಿಂಗ್ ಲಯನ್ ಎಂಬ ದೊಡ್ಡ ದಾಳಿಯನ್ನು ಇರಾನ್ ಮೇಲೆ ಮಾಡಿತು. ಇರಾನ್ ಆಪರೇಷನ್ ಟ್ರೂ ಪ್ರಾಮಿಸ್ III ಎಂಬ ಪ್ರತಿದಾಳಿ ಮಾಡಿ, ಇಸ್ರೇಲ್ನ ಸೈನಿಕ ನೆಲೆಗಳು ಮತ್ತು ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡಿತು.
ಇಸ್ರೇಲ್ ಗುರಿ: ಸರ್ಕಾರ ಬದಲಿಸುವುದು
ಇಸ್ರೇಲ್ ಯಾವಾಗಲೂ ನಿಖರವಾಗಿ ದಾಳಿ ಮಾಡುವಲ್ಲಿ ನಿಪುಣತೆ ಸಾಧಿಸಿದೆ. ಉದಾಹರಣೆಗೆ ಇರಾನ್ನ ಪರಮಾಣು ವಿಜ್ಞಾನಿಗಳನ್ನು ಕೊಂದಿದೆ ಮತ್ತು ಪರಮಾಣು ಸ್ಥಳಗಳ ಮೇಲೆ ಬಾಂಬ್ ಹಾಕಿದೆ. ಜೂನ್ 13ರಂದು ಅವರು 9 ಪ್ರಮುಖ ಇರಾನ್ ವಿಜ್ಞಾನಿಗಳನ್ನು ಕೊಂದರು ಮತ್ತು ಫೊರ್ಡೊ ಮತ್ತು ಇಸ್ಫಹಾನ್ನ ಪರಮಾಣು ಸ್ಥಳಗಳ ಮೇಲೆ ದಾಳಿ ಮಾಡಿದರು. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಂತೆ ತಡೆಯುವುದು ತಮ್ಮ ಗುರಿ ಎಂದು ಇಸ್ರೇಲ್ ಹೇಳುತ್ತದೆ. ಏಕೆಂದರೆ ಇಸ್ರೇಲ್ಗೆ ಬಹುದೊಡ್ಡ ಬೆದರಿಕೆ ಎಂದು ಅದು ಭಾವಿಸುತ್ತದೆ. ಆದರೆ ಅವರ ನಿಜವಾದ ಯೋಜನೆ ಇದಕ್ಕಿಂತ ದೊಡ್ಡದಾಗಿದೆ: ಇರಾನ್ನ ಪರಮಾಣು ಯೋಜನೆಯನ್ನು ನಾಶ ಮಾಡುವುದು ಮಾತ್ರವಲ್ಲ, ಇರಾನ್ ಸರ್ಕಾರವನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿ ಬದಲಾಯಿಸುವುದು.
ಆದರೆ ಸದ್ಯದ ಸ್ಥಿತಿಯಲ್ಲಿ ಇಸ್ರೇಲ್ ಯೋಜನೆ ಯಶಸ್ವಿಯಾಗಿಲ್ಲ. ಇರಾನ್ನ ಭೂಗತ ಪರಮಾಣು ಸ್ಥಳಗಳು ಇನ್ನೂ ಸುರಕ್ಷಿತವಾಗಿವೆ. ಅಷ್ಟೇ ಅಲ್ಲ, ಜನರು ಮತ್ತು ಸರ್ಕಾರದಿಂದ ಇನ್ನಷ್ಟು ಬೆಂಬಲ ಪಡೆಯುತ್ತಿದೆ. ಇರಾನ್ ಈಗ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬೇಕೇ ಎಂದು ಮತ್ತೊಮ್ಮೆ ಯೋಚಿಸಬಹುದು. ಇಸ್ರೇಲ್ ದಾಳಿಗಳಿಂದ ಇರಾನ್ನ ಸೈನಿಕ ನಾಯಕತ್ವಕ್ಕೆ ಹಾನಿಯಾಗಿರಬಹುದು. ಆದರೆ ಇರಾನ್ ತಕ್ಷಣವೇ ಚೇತರಿಸಿಕೊಂಡು ಇಸ್ರೇಲ್ ಮೇಲೆ 200ಕ್ಕಿಂತ ಹೆಚ್ಚು ಮಿಸೈಲ್ಗಳನ್ನು ಉಡಾಯಿಸಿದೆ. ತೆಲ್ ಅವೀವ್ನಂತಹ ನಗರಗಳು ಮತ್ತು ನೆವತಿಮ್ ಹಾಗೂ ಓವ್ಡಾ ಏರ್ಬೇಸ್ಗಳ ಮೇಲೆ ದಾಳಿ ಆಗಿದೆ. ಇರಾನ್ನ 25% ಮಿಸೈಲ್ಗಳನ್ನು ಇಸ್ರೇಲ್ ತಡೆಯಲಾಗಲಿಲ್ಲ. ಇದು ಇಸ್ರೇಲ್ ಎಷ್ಟು ದುರ್ಬಲವಾಗಿದೆ ಎಂದು ಜಗತ್ತಿಗೆ ತೋರಿಸಿದೆ.
ಅಮೆರಿಕಾವನ್ನು ಯುದ್ಧಕ್ಕೆ ಎಳೆಯುವ ತಂತ್ರ?
ಇರಾನ್ನ ನತಾಂಜ್ ಮತ್ತು ಫೊರ್ಡೊ ಪರಮಾಣು ಸ್ಥಳಗಳನ್ನು ತಾನೊಬ್ಬನೇ ನಾಶ ಮಾಡಲು ಸಾಧ್ಯವಿಲ್ಲ ಎಂಬುದು ಇಸ್ರೇಲ್ಗೆ ಅರಿವಾಗತೊಡಗಿದೆ. ಆದ್ದರಿಂದ, ಅವರು ಒಂದು ಇಕ್ಕಟ್ಟಿನ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದಾರೆ. ಅಮೆರಿಕಾ ಯುದ್ಧಕ್ಕೆ ಭಾಗಿಯಾಗುವಂತೆ ಮಾಡುತ್ತಿದ್ದಾರೆ. ಇದು ಅವರ ನಿಜವಾದ ಯೋಜನೆ. ಇರಾನ್ ಮೇಲೆ ನೇರವಾಗಿ ಯುದ್ಧ ಮಾಡುವುದಕ್ಕಿಂತ, ಇರಾನ್ ಮತ್ತು ಅಮೆರಿಕಾವನ್ನು ಪ್ರಚೋದಿಸಿ, ಅಮೆರಿಕಾ ಯುದ್ಧದಲ್ಲಿ ಭಾಗಿಯಾಗುವಂತೆ ಒತ್ತಡ ಹಾಕುವ ಸನ್ನಿವೇಶ ಸೃಷ್ಟಿಸುವುದಾಗಿದೆ. ಇಸ್ರೇಲ್ ದಾಳಿಗಳು ಚಿಕ್ಕ ಗೆಲುವುಗಳಿಗಾಗಿ ಅಲ್ಲ, ಒತ್ತಡ ಸೃಷ್ಟಿಸಿ ಇರಾನ್ ಮತ್ತು ಅಮೆರಿಕಾ ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಪರೀಕ್ಷಿಸುವುದಕ್ಕಾಗಿ.
ಇದನ್ನು ಓದಿದ್ದೀರಾ?: ಇರಾನ್ ತೈಲ ರಣತಂತ್ರ ಹೆಣೆದರೆ, ಅಮೆರಿಕ ಶಾಂತಿ ಮಂತ್ರ ಜಪಿಸಬೇಕಾದೀತು!
ಅಮೆರಿಕಾ ಈ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳುತ್ತದೆ. ಆದರೆ ಅವರ ಪ್ರಭಾವ ಮತ್ತು ಬೆಂಬಲ ಸ್ಪಷ್ಟವಾಗಿದೆ. ಇಸ್ರೇಲ್ ದಾಳಿಗಳನ್ನು ಹೆಚ್ಚಿಸಿದಾಗ, ಅಮೆರಿಕಾ ಶಾಂತಿ ಬಯಸುವಂತೆ ನಟಿಸುತ್ತದೆ. ಆದರೆ ಇರಾನ್ ಮೇಲೆ ನಿರ್ಬಂಧಗಳು, ಎಚ್ಚರಿಕೆಗಳು ಮತ್ತು ಗಲ್ಫ್ನಲ್ಲಿ ಸೈನಿಕ ಹಡಗುಗಳ ಮೂಲಕ ಒತ್ತಡ ಹಾಕುತ್ತದೆ. ಇದರಿಂದ ಇರಾನ್ ಎಲ್ಲಾ ಕಡೆಯಿಂದ ಆಕ್ರಮಣವಾಗುತ್ತಿದೆ ಎಂದು ಭಾವಿಸುತ್ತದೆ. ಮುಂದಿನ ದಾಳಿ ಎಲ್ಲಿಂದ ಬರುತ್ತದೆ ಎಂದು ಗೊತ್ತಾಗದೆ ಪರದಾಡುತ್ತದೆ. ಇಸ್ರೇಲ್, ಅಮೆರಿಕಾಕ್ಕೆ ಬಲೆ ಬೀಸುತ್ತಿದೆ; ಅಮೆರಿಕಾ, ಇರಾನ್ ವಿರುದ್ಧ ಇಸ್ರೇಲ್ ಯುದ್ಧ ಮಾಡಬೇಕೆಂದು ಬಯಸುತ್ತಿದೆ.

ಟ್ರಂಪ್ಗೆದುರಾದ ಸಮಸ್ಯೆ
ಈ ಯೋಜನೆಯಲ್ಲಿ ಇಸ್ರೇಲ್ ಮತ್ತು ಅಮೆರಿಕಾ ಈಗ ಒಟ್ಟಾಗಿರುವುದಾಗಿ ಕಾಣುತ್ತವೆ. ಆದರೆ ಸಮಸ್ಯೆಗಳು ಅಲ್ಲಿಂದಲೇ ಶುರುವಾಗಿವೆ. ಅಮೆರಿಕಾದ ಕೆಲವು ನಾಯಕರು- ಯುದ್ಧ ಬಯಸುವವರು- ಇರಾನ್ನನ್ನು ದುರ್ಬಲಗೊಳಿಸಿ ಮಧ್ಯಪ್ರಾಚ್ಯದಲ್ಲಿ ಶಕ್ತಿ ಸಮತೋಲನ ಬದಲಾಯಿಸುವ ಅವಕಾಶವೆಂದು ಇದನ್ನು ಭಾವಿಸುತ್ತಾರೆ. ಅಂತಹವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆದರೆ ಇರಾನ್ನೊಂದಿಗೆ ದೊಡ್ಡ ಯುದ್ಧವಾದರೆ, ಅದು ಜಗತ್ತಿನಾದ್ಯಂತ ಸಮಸ್ಯೆ ಉಂಟುಮಾಡಬಹುದೆಂಬ ಭಯವೂ ಕೆಲವರಿಗೆ ಕಾಡುತ್ತಿದೆ. ವ್ಯಾಪಾರ, ತೈಲ ಪೂರೈಕೆ ಮತ್ತು ಪ್ರಮುಖ ಸೌಲಭ್ಯಗಳಿಗೆ ಹಾನಿಯಾಗಬಹುದು; ಇದು ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತವಾಗಬಹುದು; ಇರಾನ್ ವ್ಯಾಪಾರ ಮಾರ್ಗಗಳನ್ನು ಮುಚ್ಚಬಹುದು ಎಂಬ ಭಯವಿದೆ. ಇರಾನ್ ಸ್ನೇಹಿತ ಯಮೆನ್ನ ಅಂಸಾರ್ ಅಲ್ಲಾ ಈಗಾಗಲೇ ಆ ಸೂಚನೆಯನ್ನು ಕೊಟ್ಟಿದೆ.
ಟ್ರಂಪ್ನ ‘ಅಮೆರಿಕಾ ಫಸ್ಟ್’ ಎಂಬ ಯೋಜನೆ- ಅಮೆರಿಕಾದ ಸಮಸ್ಯೆಗಳ ಮೇಲೆ ಗಮನ ಹರಿಸುವುದು ಮತ್ತು ಮಧ್ಯಪ್ರಾಚ್ಯದ ಯುದ್ಧಗಳಲ್ಲಿ ಭಾಗಿಯಾಗದಂತೆ ಇರುವುದು. ಅಮೆರಿಕಾ ಸೈನಿಕರು ವಿದೇಶಗಳಲ್ಲಿ ಸಾಯಬಾರದು. ಇಸ್ರೇಲ್ನಂತಹ ಮಿತ್ರರಿಗೆ ಹಣ ಕೊಡಬಾರದು ಎಂಬುದಾಗಿದೆ. ಅನೇಕ ಅಮೆರಿಕನ್ನರು ಇದನ್ನು ಒಪ್ಪುತ್ತಾರೆ ಕೂಡ. ಅವರು ಜಗತ್ತಿನ ಪೊಲೀಸರಂತೆ ಕೆಲಸ ಮಾಡುವುದರಿಂದ ಸುಸ್ತಾಗಿದ್ದಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಟ್ರಂಪ್ ಯುದ್ಧ ಬೇಡ ಎಂದು ಹೇಳಿದರೂ, ಇಸ್ರೇಲ್ಗೆ ಬೆಂಬಲ ಕೊಡುತ್ತಿದ್ದಾರೆ, ಗಾಜಾದಲ್ಲಿ ಇಸ್ರೇಲ್ನ ದಾಳಿಗಳಿಗೂ ಬೆಂಬಲಿಸುತ್ತಿದ್ದಾರೆ. ಇದು ಟ್ರಂಪ್ ಸಮಸ್ಯೆ: ಯುದ್ಧ ಬೇಡ ಎನ್ನುವುದು, ಅಮೆರಿಕಾ ಯುದ್ಧಗಳಲ್ಲಿ ಭಾಗಿಯಾಗುತ್ತಲೇ ಸಾಗುವುದು.
ಇಷ್ಟೇ ಅಲ್ಲದೆ, ಟ್ರಂಪ್ಗೆ ವೈಯಕ್ತಿಕ ಸಮಸ್ಯೆಯೂ ಇದೆ. ಅದೆಂದರೆ, ಅವರು ಯುದ್ಧದಿಂದ ದೂರ ಇರಬೇಕು ಎಂದು ಹೇಳುತ್ತಾರೆ. ಎಲ್ಲರೂ- ಉದಾಹರಣೆಗೆ ರಷ್ಯಾದ ವ್ಲಾಡಿಮಿರ್ ಪುಟಿನ್ ಅಥವಾ ಇರಾನ್ನ ನಾಯಕ ಅಲಿ ಖಾಮೇನಿ- ತಮ್ಮ ಮಾತು ಕೇಳುವಂತಹ ಬಲವಾದ ನಾಯಕನಾಗಿರಲು ಬಯಸುತ್ತಾರೆ. ಇದನ್ನು ಕಂಡ ಕೆಲವರು, ‘ಟ್ರಂಪ್ ದೊಡ್ಡ ಮಾತುಗಳನ್ನಾಡುತ್ತಾನೆ, ಆದರೆ ಏನೂ ಮಾಡುವುದಿಲ್ಲ’ ಎಂದು ಟೀಕಿಸುವುದೂ ಉಂಟು. ಅವರು ಟ್ರಂಪ್ನನ್ನು ‘TACO’ ಎಂದು ಕರೆಯುತ್ತಾರೆ, ಅಂದರೆ ‘ಟ್ರಂಪ್ ಯಾವಾಗಲೂ ಹಿಂದೆ ಸರಿಯುತ್ತಾನೆ’ ಎನ್ನುತ್ತಾರೆ. ಆ ನಿಟ್ಟಿನಲ್ಲಿ ಇರಾನ್ ಮೇಲಿನ ಇಸ್ರೇಲ್ ದಾಳಿ ಟ್ರಂಪ್ನನ್ನು ಪರೀಕ್ಷಿಸುತ್ತಿದೆ- ಅವನು ಯುದ್ಧಕ್ಕೆ ಸೇರುತ್ತಾನಾ ಅಥವಾ ಹಿಂದೆ ಸರಿಯುತ್ತಾನಾ ಎಂದು.
ಇಸ್ರೇಲ್ನ ಯಶಸ್ಸು ಮತ್ತು ಅಪಾಯಗಳು
ಅಮೆರಿಕಾದಂತಹ ಮಿತ್ರರ ಸಹಾಯದಿಂದ ಇಸ್ರೇಲ್, ಇರಾನ್ಗೆ ದೊಡ್ಡ ಹೊಡೆತ ಕೊಟ್ಟಿತು. ಜೂನ್ 13ರಂದು ಅವರ ದಾಳಿಗಳು ಇರಾನ್ನ ಸೈನಿಕ ನೆಲೆಗಳು, ನಾಯಕತ್ವ ಮತ್ತು ಪರಮಾಣು ಯೋಜನೆಯ ಕೆಲವು ಭಾಗಗಳಿಗೆ ಹಾನಿ ಮಾಡಿತು. ಮೊದಲಿಗೆ ಇಸ್ರೇಲ್ ಜನ ಖುಷಿಯಾದರು. ‘ನೋಡಿ, ನಾವು ಇರಾನ್ನ ಮೇಲೆ ದೊಡ್ಡ ದಾಳಿ ಮಾಡಿದೆವು, ಅವರ ನಾಯಕರನ್ನು ಮತ್ತು ವಿಜ್ಞಾನಿಗಳನ್ನು ಕೊಂದೆವು’ ಎಂದು ಹೇಳಿಕೊಂಡರು. ಅವರಿಗೆ ಇದು ತಮ್ಮ ಶಕ್ತಿಯ ಸಾಬೀತು ಎನಿಸಿತು. ಆದರೆ ಈ ಸಂತೋಷ ಹೆಚ್ಚು ಕಾಲ ಇರಲಿಲ್ಲ. ಇರಾನ್ ತನ್ನ ಸೈನಿಕ ನಾಯಕತ್ವವನ್ನು ಮರಳಿ ಪಡೆದು, ಇಸ್ರೇಲ್ ಮೇಲೆ ಮಿಸೈಲ್ಗಳ ಮೂಲಕ ಪ್ರತಿದಾಳಿ ಮಾಡಿತು. ಇಸ್ರೇಲ್ ನಗರಗಳು ಮತ್ತು ಪ್ರಮುಖ ಸ್ಥಳಗಳು ನಾಶವಾದವು. ಇಸ್ರೇಲ್ ಜನ ಬೆಳಗೆದ್ದು ಕಣ್ಣುಜ್ಜಿಕೊಂಡು ನೋಡುವಷ್ಟರಲ್ಲಿ, ಹಾನಿಯ ದೃಶ್ಯಗಳು ಮತ್ತು ಸುದ್ದಿಗಳು ಮುಖಕ್ಕೆ ರಾಚಿದ್ದವು.
ಇದನ್ನು ಓದಿದ್ದೀರಾ?: ಇಸ್ರೇಲ್ ಮತ್ತು ಅಮೆರಿಕಾದ ದುಷ್ಕೃತ್ಯ: ಜಗತ್ತನ್ನು ಮೂರನೇ ಮಹಾಯುದ್ಧದತ್ತ ದೂಡುವ ಅಪಾಯ
ಇಲ್ಲೊಂದು ವಿಚಿತ್ರವಿದೆ: ಇಸ್ರೇಲ್, ಗಾಜಾದಲ್ಲಿ ಜನರ ಮನೆಗಳು, ನೆನಪುಗಳು ಮತ್ತು ಜೀವನವನ್ನು ಹಾಳುಮಾಡುತ್ತಿದೆ. ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳ ಎಲ್ಲೆ ಮೀರಿದೆ. ಆದರೆ ಇರಾನ್, ಇಸ್ರೇಲ್ ಮೇಲೆ ದಾಳಿ ಮಾಡಿದಾಗ, ‘ನಮ್ಮ ಮೇಲೆ ಅನ್ಯಾಯವಾಯಿತು’ ಎಂದು ಅಳಲು ಶುರು ಮಾಡಿದೆ. ಜಗತ್ತಿನ ಜನರಿಗೆ ಇದು ಕಪಟತನವೆಂದು ಕಾಣುತ್ತದೆ. ಇಸ್ರೇಲ್ ಕಾನೂನುಗಳ ಬಗ್ಗೆ ಮಾತನಾಡುವುದು, ಕೇವಲ ತಾನು ಬಲಿಪಶುವಾದಾಗ ಮಾತ್ರ. ಆದರೆ ತಾನು ದಾಳಿ ಮಾಡುವಾಗ ಅದನ್ನು ಮರೆಯುತ್ತದೆ. ಇಸ್ರೇಲ್ ಬೆಂಬಲಿಗರು ಮಾತ್ರ- ಉದಾಹರಣೆಗೆ ಕೆಲವು ಸೀಯೋನಿಸ್ಟ್ ಗುಂಪುಗಳು ಮತ್ತು ಅಮೆರಿಕಾದಲ್ಲಿ ಕ್ರಿಶ್ಚಿಯನ್ ಸೀಯೋನಿಸ್ಟ್ಗಳು- ಇಸ್ರೇಲ್ನ ಅಳಲನ್ನು ನಂಬುತ್ತಾರೆ. ಅಮೆರಿಕಾದ ರಾಯಭಾರಿ ಮೈಕ್ ಹಕಬೀ ಇದಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ, ಧಾರ್ಮಿಕ ನಂಬಿಕೆಗಳನ್ನು ಸೈನಿಕ ಕ್ರಿಯೆಗಳೊಂದಿಗೆ ಬೆರೆಸುತ್ತಾರೆ.
ಇಸ್ರೇಲ್ ಈ ಯುದ್ಧದ ಪರಿಣಾಮಗಳನ್ನು ಎದುರಿಸಬೇಕಾಗಬಹುದು, ಆದರೆ ಅವರಿಗೆ ಅದರ ಬಗ್ಗೆ ಚಿಂತೆ ಇಲ್ಲ. ಅವರ ಸೈನಿಕ ನಾಯಕರು ಮತ್ತು ಸಮಾಜ ತಮ್ಮ ತಪ್ಪುಗಳ ಬಗ್ಗೆ ಯೋಚಿಸಲು ಇಷ್ಟಪಡುವುದಿಲ್ಲ. ಅವರಿಗೆ ಯಾವುದೇ ಮಿತಿಗಳ ಬಗ್ಗೆ- ಶಕ್ತಿ, ಕಾನೂನು ಅಥವಾ ಪರಿಣಾಮಗಳ ಬಗ್ಗೆ ಯೋಚಿಸುವುದು ಇಷ್ಟವಿಲ್ಲ. ಅವರು ತಾವು ಏನು ಬೇಕಾದರೂ ಮಾಡಬಹುದು ಎಂದು ಭಾವಿಸುತ್ತಾರೆ. ಹಲವು ವರ್ಷಗಳಿಂದ ಇಸ್ರೇಲ್, ಇರಾನ್ನನ್ನು ಅಪಾಯಕಾರಿ ಎಂದು ಕರೆದಿದೆ, ಧಾರ್ಮಿಕ ಬೆದರಿಕೆ ಎಂದು ಚಿತ್ರಿಸಿದೆ. ಆದರೆ ಇಸ್ರೇಲ್ ಏನು? ಅದು ಸಹ ಧಾರ್ಮಿಕ ಆಲೋಚನೆಗಳಿಂದ ನಡೆಯುವ ದೇಶ. ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಮಾರಣಹೋಮ ನಡೆಸುವ ದೇಶ. ಆದರೂ ತಾನು ಸರಿಯಾಗಿದ್ದೇವೆ ಎಂದು ಹೇಳುತ್ತದೆ. ಇದು ಸೋಗಲಾಡಿತನವಲ್ಲವೇ?

ಗಾಜಾದಲ್ಲಿ ಮುಂದುವರೆದ ದಾಳಿ
ಜಗತ್ತು ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಮಾತನಾಡುತ್ತಿದ್ದರೂ, ಇಸ್ರೇಲ್ ಗಾಜಾದಲ್ಲಿ ತನ್ನ ದಾಳಿಗಳನ್ನು ಮುಂದುವರಿಸುತ್ತಿದೆ. ಇಂಟರ್ನೆಟ್ ಕತ್ತರಿಸುತ್ತಿದ್ದಾರೆ, ಬಾಂಬ್ ಹಾಕುತ್ತಿದ್ದಾರೆ, ಉಳಿದಿರುವುದನ್ನು ನಾಶ ಮಾಡುತ್ತಿದ್ದಾರೆ. ಈ ಯುದ್ಧ ಇರಾನ್ಗೆ ಮಾತ್ರವಲ್ಲ, ಗಾಜಾ ಮತ್ತು ವೆಸ್ಟ್ ಬ್ಯಾಂಕ್ನಲ್ಲಿ ಪ್ಯಾಲಸ್ತೇನಿಯರಿಗೂ ಹಾನಿಯುಂಟು ಮಾಡುತ್ತಿದೆ. ಪ್ಯಾಲಸ್ತೇನಿಯರ ಮೇಲಿನ ದಾಳಿ ಇಸ್ರೇಲ್ನ ಕ್ರೌರ್ಯವನ್ನು ತೋರುತ್ತಿದೆ.
ಇಸ್ರೇಲ್ ಯುದ್ಧಕ್ಕೆ ಆಸಕ್ತವಾಗಿದೆ. ಹಾಗೆಯೇ ಪ್ಯಾಲಸ್ತೇನಿಯರನ್ನು ನಾಶ ಮಾಡಲು, ಅಮೆರಿಕಾವನ್ನು ಮಧ್ಯಪ್ರಾಚ್ಯದ ದೊಡ್ಡ ಯುದ್ಧಕ್ಕೆ ಎಳೆಯಲು ಮತ್ತು ಧರ್ಮ ತಮ್ಮನ್ನು ರಕ್ಷಿಸುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ ಒಂದು ಹಳೆಯ ಮಾತಿದೆ: ‘ನೀವು ಯುದ್ಧ ಶುರು ಮಾಡಬಹುದು, ಆದರೆ ಅದು ಹೇಗೆ ಮುಗಿಯುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ.’ ಇರಾನ್ ಸರ್ಕಾರವನ್ನು ಬದಲಾಯಿಸುವ ಬಯಕೆಯುಳ್ಳ ಇಸ್ರೇಲ್ ಯೋಜನೆ ತುಂಬಾ ಅಪಾಯಕಾರಿ. ಇದು ವೆಸ್ಟ್ ಬ್ಯಾಂಕ್ ಪ್ರದೇಶಕ್ಕೆ ಮತ್ತು ಇಸ್ರೇಲ್ಗೆ ಸಹ ಹೆಚ್ಚು ಸಮಸ್ಯೆ ಉಂಟುಮಾಡುತ್ತಿದೆ. ಅನೇಕ ಇಸ್ರೇಲಿಗಳು ತಾವು ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಬಲವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಅವರಿಗೆ ಭಯವಿದೆ. ಆ ಭಯ ನಾಯಕ ಬೆಂಜಮಿನ್ ನೆತನ್ಯಾಹು ಮೇಲೆ ಪೂರ್ಣ ನಂಬಿಕೆ ಇಲ್ಲದಿರುವುದೇ ಆಗಿದೆ.
ಈ ಯುದ್ಧ ಇನ್ನೂ ಮುಂದುವರಿಯುತ್ತಿದೆ. ಇಸ್ರೇಲ್ ಇರಾನ್ ಮೇಲೆ ಇನ್ನಷ್ಟು ದಾಳಿಗಳನ್ನು ಯೋಜಿಸುತ್ತಿದೆ. ಇರಾನ್ ತನ್ನ ಶಸ್ತ್ರಾಸ್ತ್ರಗಳನ್ನು ಬಳಸಿ ಇಸ್ರೇಲ್ನ ರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡಬಹುದಾಗಿದೆ. ಈ ಸಂಘರ್ಷ ಇನ್ನೂ ದೊಡ್ಡದಾಗಿ, ಏನಾಗುತ್ತದೆ ಎಂದು ಜಗತ್ತು ಎದುರು ನೋಡುವಂತಾಗಿದೆ.
ಲೇಖಕ: ಅಬ್ದಲ್ಜವಾದ್ ಒಮರ್
ಕೃಪೆ: https://mondoweiss.net/