ಬೆಂಗಳೂರಿನ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೇರಳದ ದೇವಾಲಯದ ಅರ್ಚಕರ ಸಹಾಯಕನನ್ನು ಬಂಧಿಸಿರುವುದಾಗಿ ಬೆಳ್ಳಂದೂರು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಬಂಧಿತ ವ್ಯಕ್ತಿ ಬಿಎ ಪದವೀಧರ, ಕೇರಳದ ತ್ರಿಶೂರಿನ ಶ್ರೀ ವಿಷ್ಣುಮಾಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರ ಸಹಾಯಕ 40 ವರ್ಷದ ಅರುಣ್ ಟಿಎ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಹರಳೂರಿನ 38 ವರ್ಷದ ಸಂತ್ರಸ್ತೆ ತನ್ನ ಪತಿಯ ಮರಣದ ನಂತರ ತಾನು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೋರಿ ದೇವಾಲಯವನ್ನು ಸಂಪರ್ಕಿಸಿದ್ದಳು. ಮಹಿಳೆಯ ಕುಟುಂಬದ ಮೇಲೆ ಯಾರೋ ಮಾಟಮಂತ್ರ ಮಾಡಿದ್ದಾರೆ ಮತ್ತು ಪರಿಸ್ಥಿತಿ ಗಂಭೀರವಾಗಿದೆ ಎಂದು ಅರುಣ್ ಈ ವೇಳೆ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಅತ್ಯಾಚಾರಕ್ಕೊಳಗಾಗಿ ಸಹಾಯಕ್ಕೆ ಅಂಗಲಾಚುವ 12ರ ಬಾಲಕಿ: ಮಧ್ಯಪ್ರದೇಶದಲ್ಲಿ ಸಿಸಿಟಿವಿಯಲ್ಲಿ ಸೆರೆಯಾದ ಅಮಾನುಷ ದೃಶ್ಯ
ಈ ಬಗ್ಗೆ ಅಧಿಕ ವಿವರ ನೀಡಲು ಮಹಿಳೆಯ ಸಂಪರ್ಕ ವಿವರವನ್ನು ಅರುಣ್ ಪಡೆದುಕೊಂಡಿದ್ದ, ಕರೆಗಾಗಿ ಕಾಯುವಂತೆ ಹೇಳಿದ್ದ. ಆರೋಪಿ ವಿಡಿಯೋ ಕರೆ ಮಾಡಿ ತನ್ನೊಂದಿಗೆ ಅಸಭ್ಯ ಸನ್ನೆಗಳನ್ನು ಮಾಡಿದ್ದಾನೆ. ಜೊತೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಾಟಮಂತ್ರ ಮಾಡುವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಈ ವಿಚಾರದ ಬಗ್ಗೆ ಕುಟುಂಬದೊಂದಿಗೆ ಚರ್ಚಿಸಿದ ಮಹಿಳೆ ಜೂನ್ 13ರಂದು ದೂರು ದಾಖಲಿಸಿದ್ದಾರೆ. ಪೊಲೀಸರು ಶಂಕಿತನ ವಿರುದ್ಧ ಬಿಎನ್ಎಸ್ ಸೆಕ್ಷನ್ 64(ಅತ್ಯಾಚಾರ) ಮತ್ತು 78 (ಹಿಂಬಾಲಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
