ವಚನಯಾನ | ವಚನ ಚಳವಳಿ ಹತ್ತಿಕ್ಕಲು ರಕ್ತಪಾತ ಮಾಡಿದ ಸನಾತನಿಗಳು

Date:

Advertisements

ಸನಾತನ ವೈದಿಕ ಧರ್ಮದ ದಬ್ಬಾಳಿಕೆ ಹಾಗೂ ಶೋಷಣೆಯಿಂದ ಬೇಸತ್ತ ದೇಶದ ಬಹುಜನರು ಜೈನˌ ಬೌದ್ದ ˌ ಲಿಂಗಾಯತ ಮತ್ತು ಸಿಖ್ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಈ ಮತಾಂತರದ ಕ್ರಿಯೆ ಇಂದಿಗೂ ನಡೆಯುತ್ತಿದೆ. ದೈನಂದಿನ ಬದುಕಿನಲ್ಲಿ, ಹಿಂದೂ ಒಂದು ಬದುಕುವ ಮಾರ್ಗ ಮಾತ್ರ ಆಗಿದೆ, ಅದರ ತಾತ್ವಿಕ ಹಾಗೂ ಸಾಂಸ್ಕೃತಿಕ ತಳಹದಿ ಅತ್ಯಂತ ಉನ್ನತವಾಗಿದೆ ಎಂದು ಸನಾತನಿಗಳು ವಾದಿಸುತ್ತಾರೆ. ಆದರೆ ಸಂಪ್ರದಾಯದ ಹೆಸರಿನಲ್ಲಿ ಯುಗಯುಗಾಂತರದಿಂದ ಸನಾತನಿಗಳು ಎಸಗುತ್ತಿರುವ ಸಾಮಾಜಿಕ ಅನ್ಯಾಯ ಇಂದಿಗೂ ಕೊನೆಗೊಂಡಿಲ್ಲ.

ಭಾರತವು ಕ್ರಾಂತಿಯ ನೆಲವೆ ಹೊರತು ಭಕ್ತಿಯ ಬೀಡಲ್ಲ. ಆರ್ಯ ಸನಾತನಿ ವೈದಿಕರು ಈ ನೆಲದ ಮೇಲೆ ಪ್ರಭುತ್ವ ಸ್ಥಾಪಿಸಿದ ಮೇಲೆ ಇಲ್ಲಿನ ಮೂಲನಿವಾಸಿಗಳನ್ನು ಪಶುಗಳಿಗಿಂತ ಹೀನಾಯವಾಗಿ ಶೋಷಿಸಿದರು. ಸನಾತನಿಗಳ ಶೋಷಣೆಯ ವಿರುದ್ಧ ಇಲ್ಲಿ ಅನೇಕ ಚಳುವಳಿಗಳು ಹುಟ್ಟುಪಡೆದಿವೆ. ಆರ್ಯ ಸನಾತನಿಗಳ ಅನಿಷ್ಠ ಹಾಗೂ ಮೌಢ್ಯಾಚರಣೆಗಳ ವಿರುದ್ಧ ಲೋಕಾಯತ/ಚಾರ್ವಾಕ ದರ್ಶನವು ಉದಿಸಿತು. ನಿರೀಶ್ವರವಾದಿಯಾಗಿದ್ದ ಲೋಕಾಯತ/ಚಾರ್ವಾಕ ದರ್ಶನವು ಜನರನ್ನು ಆಕರ್ಷಿಸಲು ಸೋತಿತು. ಈ ಉಪಖಂಡದ ಜನರಲ್ಲಿನ ಆಸ್ತಿಕತೆ ಹಾಗೂ ಸನಾತನಿಗಳ ಅಪಪ್ರಚಾರದಿಂದ ಲೋಕಾಯತ/ಚಾರ್ವಾಕ ದರ್ಶನ ಆರ್ಯ ಸನಾತನಿಗಳಿಗೆ ಪ್ರತಿದ್ವಂದ್ವಿಯಾಗುವಲ್ಲಿ ವಿಫಲವಾಯಿತು. ಆನಂತರ ಭಕ್ತಿ ಮತ್ತು ಅಧ್ಯಾತ್ಮದ ಮುಖವಾಡದಲ್ಲಿ ಜೈನ ಹಾಗೂ ಬೌದ್ದಗಳು ವೈದಿಕತೆಗೆ ವಿರೋಧವಾಗಿ ಹುಟ್ಟಿಕೊಂಡವು. ಮೂರನೇಯದಾಗಿ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಲಿಂಗಾಯತ ಧರ್ಮವು ವಚನ ಚಳವಳಿಯ ಮುಖೇನ ವೈದಿಕರಿಗೆ ಎದುರಾಯಿತು. ಮುಂದೆ ಸಿಖ್ ಧರ್ಮ ಕೂಡ ಸನಾತನ ಧರ್ಮವನ್ನು ತಿರಸ್ಕರಿಸಿ ಹುಟ್ಟು ಪಡೆಯಿತು. ಜೈನ ಧರ್ಮವು ತನ್ನ ಅವೈದಿಕ ಸಿದ್ಧಾಂತಗಳನ್ನು ತಳಮಟ್ಟದಲ್ಲಿ ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ವಿಫಲವಾಯಿತು. ಆ ಕಾರಣದಿಂದ ಅದು ವ್ಯಾಪಕವಾಗಿ ಬೆಳೆಯಲಾಗಲಿಲ್ಲ. ಕಾಲಾನಂತರದಲ್ಲಿ ಅದು ವೈದಿಕತೆ ಮೈಗೂಡಿಸಿಕೊಂಡು ಸನಾತನಿಗಳೊಂದಿಗೆ ರಾಜಿ ಮರ್ಜಿಗೆ ಒಳಗಾಯಿತು.

ಜೈನ ಧರ್ಮವು ಆರಂಭಿಕ ಕಾಲದಲ್ಲಿ ಸನಾತನಿಗಳಿಗೆ ಸವಾಲನ್ನು ಹಾಕಲಿಲ್ಲ. ಅಥವಾ ಅದರ ಸಿಮಿತ ಜನಪ್ರೀಯತೆ ಸನಾತನಿಗಳಿಗೆ ತಲೆ ನೋವು ತರಲಿಲ್ಲ. ಮುಂದೆ ಬಂದ ಬೌದ್ದ ಧರ್ಮವು ಸನಾತನಿಗಳ ಅಸ್ಥಿತ್ವವನ್ನೆ ಅಲ್ಲಾಡಿಸಿತು. ಬೌದ್ದ ಧರ್ಮ ತತ್ವಗಳು ನೇರವಾಗಿ ಸನಾತನ ಧರ್ಮದ ಸಿದ್ಧಾಂತಗಳನ್ನು ಪ್ರಶ್ನಿಸಲಿಲ್ಲ. ಆದರೆ, ವ್ಯಾಪಕ ರಾಜಾಶ್ರಯವು ಆ ಧರ್ಮವನ್ನು ವಿಸ್ತರಿಸಲು ಸಹಕಾರಿಯಾಯಿತು. ಅಖಂಡ ಭಾರತವನ್ನಾಳಿದ ಮೌರ್ಯ ಸಾಮ್ರಾಟ ಅಶೋಕ ಬೌದ್ದ ಧರ್ಮವನ್ನು ಸ್ವೀಕರಿಸಿದ ಮೇಲೆ ಅದರ ವಿಸ್ತರಣೆ ಗುಣಾತ್ಮಕವಾಗಿ ಬೆಳೆಯಿತು. ಮೌರ್ಯರ ಆಡಳಿತಾತ್ಮಕ ನಿರ್ಣಯಗಳಲ್ಲಿ ಪ್ರಾಣಿ ಹತ್ಯೆ ನಿಷೇಧದಂತಹ ಕಾನೂನು ಆರ್ಯ ಸನಾತನಿಗಳು ಆಚರಿಸುತ್ತಿದ್ದ ಯಜ್ಞ, ಯಾಗ, ಹೋಮ, ಹವನಗಳಲ್ಲಿ ಮಾಡಲಾಗುತ್ತಿದ್ದ ಪ್ರಾಣಿಬಲಿ ನಿಂತು ಹೋಯಿತು. ಭಯ ಹಾಗೂ ಹಿಂಸೆಯೆ ಧರ್ಮದ ಜೀವಾಳವಾಗಿಸಿಕೊಂಡಿದ್ದ ಸನಾತನಿಗಳಿಗೆ ಪ್ರತಿದ್ವಂಧ್ವಿಯಾಗಿ ಅಹಿಂಸೆˌ ಕರುಣೆಯನ್ನು ಮೂಲದ್ರವ್ಯವಾಗಿಸಿಕೊಂಡ ಬೌದ್ದ ಧರ್ಮ ಬಲವಾದ ಏಟನ್ನು ಕೊಟ್ಟಿತು. ಇದರಿಂದ ಕಂಗಾಲಾದ ಸನಾತನಿಗಳು “ಬಡ ಬ್ರಾಹ್ಮಣ” ಎಂದು ಹೆಸರಾಗಿದ್ದು ಬೌದ್ದ ಧರ್ಮದ ಉಚ್ಛ್ರಾಯ ಕಾಲದಲ್ಲಿ. ಸನಾತನಿಗಳು ದೇವರು ಹಾಗೂ ಧರ್ಮದ ಹೆಸರಿನಲ್ಲಿ ನಡೆಸುತ್ತಿದ್ದ ವ್ಯಾಪಾರದ ಅಂಗಡಿಗಳು ಬೌದ್ದ ಧರ್ಮಾನುಯಾಯಿ ಅರಸರ ಆಡಳಿತದಲ್ಲಿ ಮುಚ್ಚಲ್ಪಟ್ಟವು. ಸನಾತನಿಗಳು ಅಕ್ಷರಶಃ ಅನಾಥರಾದರು. ಬೌದ್ದ ಧರ್ಮವನ್ನು ನಾಶಗೊಳಿಸಲು ಹಾಗೂ ಈ ನೆಲದಿಂದ ಓಡಿಸಲು ಸನಾತನಿಗಳು ಅವಕಾಶಕ್ಕಾಗಿ ಕಾಯುತ್ತಿದ್ದರು.

Advertisements

ಮುಂದೆ ಹದಿನಾರನೇ ಶತಮಾನದಲ್ಲಿ ಸನಾತನಿಗಳಿಗೆ ಮತ್ತೊಂದು ಮರ್ಮಾಘಾತ ಕಾದಿತ್ತು. ದೇಶದ ಪಶ್ಚಿಮೋತ್ತರ ಭಾಗದಲ್ಲಿ ವೈದಿಕ ಧರ್ಮದ ವಿರುದ್ಧ ದಂಗೆ ಎದ್ದ ಅಲ್ಲಿನ ಜನರು ಗುರುನಾನಕರ ದೇವರ ಮುಖಂಡತ್ವದಲ್ಲಿ ಸಿಖ್ ಧರ್ಮವನ್ನು ಹುಟ್ಟುಹಾಕಿದರು. ಹೀಗೆ ಭಾರತದಲ್ಲಿ ಕ್ರಿಸ್ತಪೂರ್ವದಲ್ಲಿ ಜೈನ ಹಾಗೂ ಬೌದ್ದ ದರ್ಮಗಳು ಉದಯವಾದರೆˌ ಕ್ರಿಸ್ತಶಕದ ಹನ್ನೆರಡು ಮತ್ತು ಹದಿನಾರನೇ ಶತಮಾನದಲ್ಲಿ ಲಿಂಗಾಯತ ಹಾಗೂ ಸಿಖ್ ಧರ್ಮಗಳು ಉದಿಸಿದವು. ಈ ನಾಲ್ಕೂ ಧರ್ಮಗಳು ಸನಾತನ ಬ್ರಾಹ್ಮಣ ಧರ್ಮದ ವಿರುದ್ಧ ಹುಟ್ಟಿರುವುದು ಗಮನಾರ್ಹ. ಈ ನಾಲ್ಕು ಧರ್ಮಗಳಲ್ಲಿ ಸನಾತನ ವೈದಿಕರಿಗೆ ನೇರಾನೇರವಾಗಿ ಸವಾಲು ಹಾಕಿದ್ದು ಲಿಂಗಾಯತ ಧರ್ಮ ಸಿದ್ಧಾಂತಗಳು. ತಳಮೂಲದ ಶ್ರಮಿಕ ವರ್ಗದ ಶರಣರು ಸಂಘಟಿತರಾಗಿ ಪ್ರತ್ಯಕ್ಷವಾಗಿ ಸನಾತನ ಧರ್ಮದ ವೇದ, ಶಾಸ್ತ್ರ, ಆಗಮ, ಪುರಾಣ, ಶೃತಿ, ಸ್ಮೃತಿ, ಆಗಮ, ಉಪನಿಷತ್ತುಗಳ ವಿಶ್ವಾರ್ಹತೆಯನ್ನು ಅವುಗಳಲ್ಲಿನ ಟೊಳ್ಳುತನ, ಜೀವವಿರೋಧಿ ನಿಲುವುಗಳನ್ನು ಪ್ರಶ್ನಿಸುವ, ವಿಡಂಬಿಸುವ, ತಿರಷ್ಕರಿಸುವ, ದಿಕ್ಕರಿಸಿ ಅವುಗಳಿಗೆ ಪರ್ಯಾಯವಾಗಿ ಹೊಸ ಜೀವಪರ ಸಿದ್ಧಾಂತವನ್ನು ಪ್ರತಿಪಾದಿಸಿದರು. ಲಿಂಗಾಯತ ಧರ್ಮಕ್ಕೆ ನಿರೀಕ್ಷಿತ ಮಟ್ಟದ ರಾಜಾಶ್ರಯ ದಕ್ಕಲಿಲ್ಲ ಹಾಗೂ ರಾಜಾಶ್ರಯದ ಹಂಗಿನಲ್ಲಿರಲು ಲಿಂಗಾಯತ ವಿಚಾರಧಾರೆಯು ಬಯಸಲಿಲ್ಲ. ಬೌದ್ದ ಧರ್ಮಕ್ಕಿಂತ ಪ್ರಖರವಾಗಿ ಸನಾತನಿಗಳನ್ನು ವಿರೋಧಿಸಿದ ಲಿಂಗಾಯತ ಧರ್ಮವು ಬೌದ್ದ ಧರ್ಮದಂತೆ ವ್ಯಾಪಕವಾಗಿ ವಿಸ್ತಾರಗೊಳ್ಳಲಿಲ್ಲ. ಹನ್ನೆರಡನೇ ಶತಮಾನವು ಸನಾತನಿಗಳಿಗೆ ಮತ್ತೊಮ್ಮೆ ದುಸ್ವಪ್ನವಾಗಿ ಕಾಡಿತು.

ಸನಾತನ

ಸನಾತನ ವೈದಿಕ ಧರ್ಮದ ದಬ್ಬಾಳಿಕೆ ಹಾಗೂ ಶೋಷಣೆಯಿಂದ ಬೇಸತ್ತ ದೇಶದ ಬಹುಜನರು ಜೈನˌ ಬೌದ್ದ ˌ ಲಿಂಗಾಯತ ಮತ್ತು ಸಿಖ್ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಈ ಮತಾಂತರದ ಕ್ರಿಯೆ ಇಂದಿಗೂ ನಡೆಯುತ್ತಿದೆ. ದೈನಂದಿನ ಬದುಕಿನಲ್ಲಿ, ಹಿಂದೂ ಒಂದು ಬದುಕುವ ಮಾರ್ಗ ಮಾತ್ರ ಆಗಿದೆ, ಅದರ ತಾತ್ವಿಕ ಹಾಗೂ ಸಾಂಸ್ಕೃತಿಕ ತಳಹದಿ ಅತ್ಯಂತ ಉನ್ನತವಾಗಿದೆ ಎಂದು ಸನಾತನಿಗಳು ವಾದಿಸುತ್ತಾರೆ. ಆದರೆ ಸಂಪ್ರದಾಯದ ಹೆಸರಿನಲ್ಲಿ ಯುಗಯುಗಾಂತರದಿಂದ ಸನಾತನಿಗಳು ಎಸಗುತ್ತಿರುವ ಸಾಮಾಜಿಕ ಅನ್ಯಾಯ ಇಂದಿಗೂ ಕೊನೆಗೊಂಡಿಲ್ಲ. ಅದು ಇಡೀ ಸಮಾಜವನ್ನು ಹಲವು ಶ್ರೇಣಿಗಳಲ್ಲಿ ವಿಂಗಡಿಸಿˌ ತಳವರ್ಗದ ಜನರಿಗೆ ಸಾಮಾಜಿಕ ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಹಕ್ಕುಗಳನ್ನು ನಿರಾಕರಿಸಿದ್ದಷ್ಟೆ ಅಲ್ಲದೆ ಆ ವರ್ಗಗಳನ್ನು ಮನುಷ್ಯರಂತೆ ಕಾಣಲಿಲ್ಲ. ಇಂದಿನ ಅಧುನಿಕ ಕಾಲಘಟ್ಟದಲ್ಲಿ ಬದುಕುತ್ತಿರುವ ಸನಾತನಿಗಳ ಸಂತತಿ ತಮ್ಮ ಪೂರ್ವಜರು ಎಸಗಿರುವ ಘೋರ ಅನ್ಯಾಯವನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಸನಾತನ ತತ್ವಗಳಾದ ವೇದ, ಉಪನಿಷತ್ತು ಮೊದಲಾದವುಗಳು ಜಗತ್ತಿನಲ್ಲಿಯೆ ಸರ್ವ ಶ್ರೇಷ್ಠ, ಸನಾತನ ಧರ್ಮದಲ್ಲಿ ವರ್ಣ, ವರ್ಗ, ಜಾತಿ ತಾರತಮ್ಯವಿಲ್ಲ. ಇದೆಲ್ಲವೂ ಬ್ರಿಟಿಷರು ಸೃಷ್ಟಿಸಿದ ಇತಿಹಾಸ ಎಂದು ಬಂಡತನದಿಂದ ವಾದಿಸುತ್ತ ಉಡುಪಿˌ ಶೃಂಗೇರಿ ಮುಂತಾದ ಬ್ರಾಹ್ಮಣ ಮಠಗಳಲ್ಲಿನ ಪಂಕ್ತಿಭೇದ, ಮಡೆಸ್ನಾನ ಮುಂತಾದ ವಿಕೃತಿಗಳನ್ನು ಬ್ರಾಹ್ಮಣ ಸಮಾಜದ ಸಂಪ್ರದಾಯವೆಂದು ಸಮರ್ಥಿಸಲು ಕೊಂಚವೂ ನಾಚಿಕೆಪಟ್ಟುಕೊಳ್ಳುವುದಿಲ್ಲ.

ಸನಾತನ ಬ್ರಾಹ್ಮಣ ಧರ್ಮದ ವಿರುದ್ಧ ಹುಟ್ಟಿದ ಚಾರ್ವಾಕˌ ಜೈನˌ ಬೌದ್ದˌ ಲಿಂಗಾಯತ ಹಾಗೂ ಸಿಖ್ ಧರ್ಮಗಳ ವಿರುದ್ಧ ಸನಾತನಿಗಳು ಮಸಲತ್ತು ಮಾಡುತ್ತಲೆ ಬಂದಿದ್ದಾರೆ. ಆ ಮಸಲತ್ತುಗಳು ಬೇರೆಬೇರೆ ಬಗೆಯಲ್ಲಿ ಅಭಿವ್ಯಕ್ತಿಗೊಂಡಿವೆ. ಆರಂಭದಲ್ಲಿ ಜೈನ ಧರ್ಮದ ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಸನಾತನಿಗಳು ಆನಂತರ ಅದನ್ನು ಸದೆಬಡಿದರು. ಜೈನಪೂರ್ವದಲ್ಲಿ ಈ ನೆಲದಲ್ಲಿದ್ದ ಶೈವ ಧರ್ಮವನ್ನು ಬ್ರಾಹ್ಮಣೀಕರಿಸಿದರು. ಆದರೆ ಬೌದ್ದ ಧರ್ಮದ ವಿರುದ್ದ ಸನಾತನಿಗಳು ರಕ್ತಪಾತವನ್ನೆ ಮಾಡಿದರು. ಪುಷ್ಯಮಿತ್ರ ಶುಂಗನಿಂದ ಆರಂಭಗೊಂಡು ಶಂಕರಾಚಾರ್ಯನವರೆಗೆ ಬೌದ್ದ ಧರ್ಮದ ಮೇಲೆ ಅವ್ಯಾಹತವಾಗಿ ದಾಳಿಗಳಾದವು. ಭಾರತದ ಹೊರಗೆ ವ್ಯಾಪಿಸಿದ ಬೌದ್ದ ಧರ್ಮವು ಅಕ್ಷರಶಃ ಈ ನೆಲದಿಂದ ಕಾಣೆಯಾಗಿತ್ತು. ಬಾಬಾಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ಅವರು ಬೌದ್ದ ಧರ್ಮವನ್ನು ಸ್ವೀಕರಿಸದೆ ಹೋಗಿದ್ದರೆ ಬಹುಶಃ ಭಾರತದಿಂದ ಬೌದ್ದ ಧರ್ಮ ಸಂಪೂರ್ಣವಾಗಿ ಕಣ್ಮರೆಯಾಗುತ್ತಿತ್ತು. ಹಾಗಾಗಿ ಡಾ. ಅಂಬೇಡ್ಕರ್‌ ಅವರನ್ನು ಬೌದ್ದ ಧರ್ಮದ ಪುನಃರುತ್ಥಾನಗೈದ ಮಹಾತ್ಮನೆಂದು ಕರೆಯುವುದು ಸೂಕ್ತವೆನ್ನಿಸುತ್ತದೆ. ಭಾರತದಲ್ಲಿ ಸನಾತನ ಬ್ರಾಹ್ಮಣ ಧರ್ಮದ ವಿರುದ್ಧ ಹುಟ್ಟಿದ ಎಲ್ಲಾ ಕ್ರಾಂತಿಗಳಿಗೆ ಪ್ರತಿಕ್ರಾಂತಿಯ ಮೂಲಕ ಸನಾತನಿಗಳು ಹಣಿದಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಅದನ್ನು ಡಾ. ಅಂಬೇಡ್ಕರ್ ಅವರು “ತಮ್ಮ ಕ್ರಾಂತಿ ಹಾಗೂ ಪ್ರತಿಕ್ರಾಂತಿ” ಎಂಬ ಗ್ರಂಥದಲ್ಲಿ ವಿವರವಾಗಿ ಬರೆದಿದ್ದಾರೆ. ಸಾಲದಕ್ಕೆ ಸನಾತನಿಗಳು ಬುದ್ದನ ಮಹತ್ವವನ್ನು ಕುಗ್ಗಿಸಲು ಆತನನ್ನು ವಿಷ್ಣುವಿನ ಅವತಾರದ ಭಾಗವಾಗಿಸಿದ್ದಾರೆ.

th 4

ಸನಾತನಿಗಳಿಗೆ ತೀವ್ರವಾಗಿ ಕಾಡಿದ್ದು ಹನ್ನೆರಡನೇ ಶತಮಾನದಲ್ಲಿ ನಡೆದ ವಚನ ಚಳವಳಿ. ಅದನ್ನು ಆರಂಭದಿಂದಲೆ ಹಣಿಯಲು ಯತ್ನಿಸಿ ವಿಫಲವಾಗಿದ್ದ ಸನಾತನಿಗಳು ಲಿಂಗಾಯತ ಶರಣ ಹರಳಯ್ಯನ ಮಗಳು ಮತ್ತು ಶರಣ ಮಧುವಯ್ಯನ ಮಗನ ನಡುವೆ ನಡೆದ ಮದುವೆಯಿಂದ ವರ್ಣಸಂಕರವಾಯಿತೆಂದು ಶರಣರ ಹತ್ಯಾಕಾಂಡ ಮಾಡಿಸಿ ಅವರು ಬರೆದ ವಚನಗಳ ಕಟ್ಟುಗಳಿಗೆ ಬೆಂಕಿ ಹಚ್ಚಿ ನಾಶಗೊಳಿಸಿದರು. ಕಲ್ಯಾಣದ ವಚನ ಚಳವಳಿಯು ಜನ ಸಾಮಾನ್ಯರನ್ನು ವೈದಿಕರ ದುಷ್ಟ ಬಾಹುಗಳಿಂದ ವಿಮೋಚನೆಗೊಳಿಸಿ ವೈಚಾರಿಕ ಚಿಂತನೆಗೆ ಹಚ್ಚುವ ಮೂಲಕ ಲಿಂಗಾಯತವೆಂಬ ಹೊಸ ಪರ್ಯಾಯ ಧರ್ಮವನ್ನು ಹುಟ್ಟುಹಾಕುತ್ತದೆ. ಈ ಚಳವಳಿಯ ಚಟುವಟಿಕೆಗಳಿಂದ ಜನ ಜಾಗೃತರಾದ್ದರಿಂದ ಸನಾತನಿಗಳು ವಿಚಲಿತರಾಗಿ ಅರಸ ಬಿಜ್ಜಳನನ್ನು ಇಕ್ಕಟ್ಟಿಗೆ ಸಿಲುಕಿಸಿ ವಣ್ರಾಶ್ರಮ ಧರ್ಮಕ್ಕೆ ಚ್ಯುತಿಯಾಗುತ್ತಿದೆ ಎಂದು ಗುಲ್ಲೆಬ್ಬಿಸುತ್ತಾರೆ. ಕಲ್ಯಾಣ ಹೊತ್ತಿ ಉರಿಯುತ್ತದೆ. ಶರಣರ ನರಮೇಧವಾಗುತ್ತದೆ. ಶರಣರು ಬರೆದ ವಚನಗಳು ವೈದಿಕರು ಹಚ್ಚಿದ ಬೆಂಕಿಗೆ ಆಹುತಿಯಾಗುತ್ತವೆ. ಶರಣ ಹರಳಯ್ಯ ಮತ್ತು ಅವರ ಮಗ ಹಾಗೂ ಶರಣ ಮಧುವಯ್ಯನವರ ಕಣ್ಣುಗಳನ್ನು ಕೀಳಿಸಿˌ ಅವರನ್ನು ಆನೆಯ ಕಾಲಿಗೆ ಕಟ್ಟಿ ಕಲ್ಯಾಣದ ರಥಬೀದಿಯಲ್ಲಿ ಎಳೆಹೂಟೆ ಶಿಕ್ಷೆಗೆ ಗುರಿಮಾಡಿ ಕೊಲ್ಲಲಾಗುತ್ತದೆ. ಶರಣರು ಭಯಭೀತರಾಗಿ ಅಳಿದುಳಿದ ವಚನಗಳನ್ನು ರಕ್ಷಿಸಲು ಕಲ್ಯಾಣ ತೊರೆಯುತ್ತಾರೆ. ಆ ಭಯಾನಕ ಮತ್ತು ಬೀಭತ್ಸಮಯ ವಾತಾವರಣವನ್ನು ಕಟ್ಟಿಕೊಡುವ ಬಸವಣ್ಣನವರ ವಚನ:

“ಬಿತ್ತು ಬೆಳೆಯಿತ್ತು, ಕೆಯ್ಯ ಕೊಯ್ಯಿತ್ತು,
ಗೂಡು ಮುರಿಯಿತ್ತು,
ಕುತ್ತುರಿಯೊಟ್ಟಿತ್ತು, ಒಕ್ಕಿತ್ತು ತೂರಿತ್ತು
ಅಳೆಯಿತ್ತು, ಸಲಗೆ ತುಂಬಿತ್ತು.
ಕೂಡಲಸಂಗಮದೇವಯ್ಯಾಮೇಟಿ ಕಿತ್ತಿತ್ತು,
ಕಣ ಹಾಳಾಯಿತ್ತಯ್ಯಾ”

ಭಾವಾರ್ಥ

ಸಾಮಾನ್ಯವಾಗಿ ಯಾವುದೇ ಹೊಸ ಕೆಲಸ ಆರಂಭಿಸಬೇಕಾದರೆ ಸಾಕಷ್ಟು ಪೂರ್ವಸಿದ್ದತೆ ಮಾಡಿಕೊಳ್ಳಬೇಕಾಗುತ್ತದೆ. ರೈತ ತನ್ನ ಹೊಲದ ಮಣ್ಣಿನಲ್ಲಿ ಬೀಜವನ್ನು ಬಿತ್ತುವ ಮೊದಲು ಭೂಮಿಯನ್ನು ಹದಗೊಳಿಸಬೇಕು. ಆಮೇಲೆ ಬಿತ್ತನೆಯ ಕಾರ್ಯ. ಬೆಳೆ ನಾಟಿದ ಮೇಲೆ ಅದರೊಟ್ಟಿಗೆ ಕಳೆ ಕೂಡ ಎದ್ದು ಬರುತ್ತದೆ. ಕಳೆ ತೆಗೆಯದಿದ್ದರೆ ಬೆಳೆಗೆ ಮಾರಕ. ಹಾಗಾಗಿ ಕಳೆ ತೆಗೆಯುವುದುˌ ಎಡೆ ಹೊಡೆಯುವುದು ಮುಂತಾದ ಪೂರಕ ಕಾರ್ಯಗಳು ಮಾಡಬೇಕು. ಬೆಳೆ ಹುಲುಸಾಗಿ ಬೆಳೆದು ಮಾಗಿದ ಮೇಲೆ ಅದನ್ನು ಕಟಾವು ಮಾಡಿ ಬಣವೆ ಒಟ್ಟಬೇಕು. ಆಮೇಲೆ ರಾಶಿ ಮಾಡಿ ಧಾನ್ಯವನ್ನು ಸಂಗ್ರಹಿಸಬೇಕು. ಅದೇ ರೀತಿ ಬಸವಣ್ಣನವರು ವಚನ ಚಳವಳಿ ಹುಟ್ಟುಹಾಕಲು ಕಲ್ಯಾಣದಲ್ಲಿ ತಾವು ಮಾಡಿಕೊಂಡ ಪೂರ್ವಸಿದ್ಧತೆ ಮತ್ತು ಅದಕ್ಕಾಗಿ ಅವರು ಪಟ್ಟ ಶ್ರಮದ ಕುರಿತು ಹೇಳುತ್ತಾರೆ. ವೈದಿಕ ಆಚರಣೆಗಳನ್ನು ದಿಕ್ಕರಿಸಿ ಪರ್ಯಾಯ ವೈಚಾರಿಕ ವ್ಯವಸ್ಥೆಯನ್ನು ಹುಟ್ಟುಹಾಕಿದ ಬಗ್ಗೆ ಬಸವಣ್ಣನವರು ಸೂಚ್ಯವಾಗಿ ಮತ್ತು ಸಾಂಕೇತಿಕವಾಗಿ ವಿವರಿಸಿದ್ದಾರೆ. ಬಣವೆ ಬಿಚ್ಚಿ ತೆನೆಗಳನ್ನು ಮುರಿದು ಗುಡ್ಡೆ ಹಾಕಿ ರಾಶಿ ಮಾಡಬೇಕೆನ್ನುವಷ್ಟರಲ್ಲಿ ವಿಕೋಪದಿಂದ ರಾಶಿ ಮಾಡುವ ಕಣ ಹಾಳಾಗಿˌ ಮೇಟಿ ಕಿತ್ತಿ ಬಿದ್ದರೆ ರೈತನ ಶ್ರಮವೆಲ್ಲ ವ್ಯರ್ಥವಾಗುತ್ತದೆ. ಇಲ್ಲಿ ಬಸವಣ್ಣನವರು ಅತ್ಯಂತ ಶ್ರಮವಹಿಸಿ ಬೆಳೆಸಿದ ವಚನ ಚಳವಳಿಯ ವೈಚಾರಿಕ ಚಿಂತನೆಗಳನ್ನು ಫಲವಾಗಿ ಮಾರ್ಪಡಿಸಿ ಇನ್ನೇನು ಸಮಾಜಕ್ಕೆ ಹಂಚಲು ಅಣಿಗೊಳಿಸುವಾಗ ಸನಾತನಿಗಳು ವಚನ ಚಳವಳಿಯ ಮೇಲೆ ದಾಳಿಯನ್ನು ಮಾಡಿ ಇಡೀ ಚಳವಳಿ ಚೆಲ್ಲಾಪಿಲ್ಲಿ ಮಾಡುತ್ತಾರೆ.

ಟಿಪ್ಪಣಿ

ಬೌದ್ದ ಚಳವಳಿ ಆರಂಭವಾದಾಗ ಸನಾತನಿಗಳು ಬುದ್ದನನ್ನು ಕಟುವಾಗಿ ವಿರೋಧಿಸಿದರು. ಆದರೆ ಆ ಚಳುವಳಿಯು ಸಾಮೂಹಿಕವಲ್ಲದ್ದರಿಂದ ಸನಾತನಿಗಳು ಹೆಚ್ಚಿಗೆ ವಿಚಲಿತರಾಗಲಿಲ್ಲ. ಬುದ್ದೋತ್ತರ ಕಾಲದಲ್ಲಿ ಮೌರ್ಯ ಆಡಳಿತಾವಧಿಯಲ್ಲಿ ವಿರಾಟರೂಪ ತಾಳಿದ ಬೌದ್ದ ಧರ್ಮವನ್ನು ಸನಾತನಿಗಳು ರಕ್ತಪಾತದ ಮೂಲಕ ಹಣಿದರು. ಬೌದ್ದ ಬಿಕ್ಕುಗಳ ಮಾರಣಹೋಮ ಮಾಡಿದರು. ಬೌದ್ದ ಹಾಹಿತ್ಯಕ್ಕೆ ಬೆಂಕಿ ಹಚ್ಚಲಾಯಿತು. ಇಂದು ಅದೇ ಸನಾತನಿಗಳ ಸಂತತಿ ಬುದ್ದನನ್ನು ಉಪನಿಷತ್ತುಗಳ ಋಷಿ ಎಂದು ಅಪವ್ಯಾಖ್ಯಾನಿಸುವ ಮೂಲಕ ಬುದ್ದನ ಅವೈದಿಕ ಚಿಂತನೆಗಳನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿವೆ. ಕಲ್ಯಾಣದ ವಚನ ಚಳುವಳಿಯು ಸಾಮೂಹಿಕ ರೂಪದಲ್ಲಿ ಸನಾತನಿಗಳ ವಿಕೃತ ಆಚಾರˌ ವಿಚಾರಗಳ ಮೇಲೆ ಸಾಂಘಿಕ ದಾಳಿಯನ್ನು ಮಾಡಿತು. ಇದರಿಂದ ಭಯಭೀತರಾದ ಸನಾತನಿಗಳು ಕುಟಿಲ ಹುನ್ನಾರಗಳ ಮೂಲಕ ವಚನ ಚಳುವಳಿಯನ್ನು ಹುಡಿಗೊಳಿಸಲು ಪ್ರಯತ್ನಿಸಿದರು. ಅದಾಗದಿದ್ದಾಗ ನೇರವಾಗಿ ಅರಸನನ್ನು ಹೆದರಿಸುವ ಮೂಲಕ ಆಟವಾಡಿದರು. ಶರಣರಿಗೆ ಕ್ರೂರವಾದ ಎಳೆಹೂಟೆˌ ಅದರಿಂದ ಉದ್ಭವಿಸಿದ ಪ್ರಕ್ಷುಬ್ದತೆಯನ್ನು ನಿಭಾಯಿಸಲು ಶರಣರ ನರಮೇಧ ಹಾಗೂ ವಚನಗಳ ನಾಶ ರಾಜಸತ್ತೆಯ ಮೂಲಕವೆ ಸನಾತನಿಗಳು ಮಾಡಿಸಿದರು. ಶರಣರಿಗೆ ತಮ್ಮ ಪ್ರಾಣಕ್ಕಿಂದ ವೈದಿಕ ವಿರೋಧಿ ವಚನ ಸಾಹಿತ್ಯದ ರಕ್ಷಣೆ ಪ್ರಥಮ ಆದ್ಯತೆಯಾಗಿತ್ತು. ಅಳಿದುಳಿದ ವಚನರಾಶಿಯನ್ನು ಶರಣರು ಬೆನ್ನಿಗೆ ಕಟ್ಟಿಕೊಂಡು ಕಲ್ಯಾಣವನ್ನು ತ್ಯಜಿಸಿ ದಿಕ್ಕಾಪಾಲಾದರು.

ಸುಮಾರು ಮೂರು ದಶಕಗಳ ಸುದೀರ್ಘ ಅವಧಿಯಲ್ಲಿ ಕಟ್ಟಲಾದ ಕಲ್ಯಾಣದ ವಚನ ಚಳುವಳಿಯನ್ನು ದುಷ್ಟ ಸನಾತನಿಗಳು ನಾಶ ಮಾಡಿದ ಸಂದರ್ಭವನ್ನು ಕುರಿತು ಬಸವಣ್ಣನವರು ಅತ್ಯಂತ ವ್ಯಥೆಯಿಂದ ಮೇಲಿನ ವಚನದಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ. ಸನಾತನಿಗಳ ಪೈಶಾಚಿಕ ದಾಳಿಗೆ ಸಿಲುಚಿ ನಲುಗಿದ ಕಲ್ಯಾಣ ಕ್ರಾಂತಿಯ ದುರಂತ ಅಂತ್ಯವನ್ನು ಬಸವಣ್ಣನವರು ಪ್ರಕೃತಿ ವಿಕೋಪದಿಂದ ರೈತನ ಬೆಳೆ ಹಾನಿಗೆ ಹೋಲಿಸಿ ಅನನ್ಯ ಹಾಗೂ ಅಷ್ಟೇ ದುಃಖಮಯ ರೂಪಕದ ಮೂಲಕ ಅತ್ಯಂತ ನೋವಿನಿಂದ ಮೇಲಿನ ವಚನದಲ್ಲಿ ವಿವರಿಸಿದ್ದಾರೆ. ವಚನ ಚಳುವಳಿಯ ವಿರುದ್ಧ ಸನಾತನಿಗಳು ಮಾಡಿದ ಕುತಂತ್ರದ ಕತೆಗಳು ಬಸವೋತ್ತರ ಕಾಲಘಟ್ಟದಲ್ಲಿ ದಾಖಲಾದವುಗಳಲ್ಲ. ಅವು ಬಸವಾದಿ ಶರಣರ ವಚನಗಳ ಮೂಲಕವೆ ನಮಗೆ ತಿಳಿದುಬರುತ್ತವೆ. ವಚನ ಚಳವಳಿಯ ನಾಶಕ್ಕೆ ಸನಾತನಿಗಳು ಮಾಡಿದ ಪ್ರತಿಯೊಂದು ಕುತಂತ್ರ ಹಾಗೂ ಹುನ್ನಾರಗಳ ಮೇಲೆ ಶರಣರ ವಚನಗಳು ಬೆಳಕು ಚೆಲ್ಲುತ್ತವೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X