“ಸಾಮಾಜಿಕ ನ್ಯಾಯ ಒದಗಿಸಲು ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ತಿಳಿದಿರಬೇಕು. ಅದಕ್ಕಾಗಿ ಮರು ಸಮೀಕ್ಷೆ ಅಗತ್ಯವಿದೆ. ಕೇಂದ್ರ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿಲ್ಲ” ಎಂದು ದಾವಣಗೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮ ನಿಮಿತ್ತ ದಾವಣಗೆರೆಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
“ಕೇಂದ್ರ ಸರ್ಕಾರ ಜನಗಣತಿಯನ್ನು 27 ನೇ ಸಾಲಿನಿಂದ ಕೈಗೊಳ್ಳುತ್ತಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡುವುದಾಗಿ ಎಲ್ಲೂ ಹೇಳಿಲ್ಲ. ನಾವು ಮಾಡುತ್ತಿರುವುದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ. ಅದರ ಜೊತೆ ಜಾತಿ ಗಣತಿಯೂ ಒಳಗೊಂಡಿದೆ” ಎಂದು ಸ್ಪಷ್ಟಪಡಿಸಿದರು.

“ಕೇಂದ್ರ ಸರ್ಕಾರ ಜನಗಣತಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ನಮ್ಮ ಸಮೀಕ್ಷೆಗೂ ಅವರ ಸಮೀಕ್ಷೆಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ವ್ಯತ್ಯಾಸವಿದೆ ಎಂದು ತಿಳಿಸಿದರು.

“ಹಿಂದುಳಿದ ವರ್ಗಗಳ ಆಯೋಗದ ವರದಿಯ ಕುರಿತು ಪ್ರಬಲರು ಹಾಗೂ ದುರ್ಬಲರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ವರ್ಗಗಳ ಕಾಯ್ದೆಯ ಸೆಕ್ಷನ್ 11 (1 )ರ ಪ್ರಕಾರ ವರದಿಗೆ ಹತ್ತು ವರ್ಷಗಳಾದ ಮೇಲೆ ಮರು ಸಮೀಕ್ಷೆಯಾಗಬೇಕು ಎಂದು ತಿಳಿಸಲಾಗಿದೆ. ಅದಕ್ಕಾಗಿ ಸರ್ಕಾರದಿಂದ ಮರುಗಣತಿ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಇಸ್ಲಾಂ ಪ್ರೀತಿಸಿದಂತೆ ಇತರೆ ಧರ್ಮಗಳನ್ನು ಗೌರವಿಸುವ ಮನೋಭಾವ ಇರಬೇಕು; ಜಮಾತೆ ಇಸ್ಲಾಂ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ
ಈ ವೇಳೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಶಾಮನೂರು ಮಲ್ಲಿಕಾರ್ಜುನ್, ಚನ್ನಗಿರಿ ಶಾಸಕರಾದ ಬಸವರಾಜು ಶಿವಗಂಗಾ, ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ, ಶಾಸಕ ಡಿ ಜಿ ಶಾಂತನಗೌಡ, ಸೇರಿದಂತೆ ಇತರರು ಹಾಜರಿದ್ದರು. ಈ ವೇಳೆ ಸಾರ್ವಜನಿಕರು, ಸಂಘಸಂಸ್ಥೆಗಳಿಂದ ಮನವಿ, ಹಕ್ಕೋತ್ತಾಯ ಸ್ವೀಕರಿಸಿದರು.