ದಾವಣಗೆರೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿದ ವೇಳೆ ಮನವಿ ಸ್ವೀಕರಿಸಲು ಪೊಲೀಸರು ಅವಕಾಶ ನೀಡದೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಇತರ ರೈತರು ಕಾರಿಗೆ ಮುತ್ತಿಗೆ ಹಾಕಿ ಘೇರಾವ್ ಹಾಕಿದ ಘಟನೆ ದಾವಣಗೆರೆ ರಾಷ್ಟ್ರೀಯ ಹೆದ್ದಾರಿ ಬಳಿಯ ಪ್ರವಾಸಿ ಮಂದಿರದಲ್ಲಿ ನಡೆದಿದೆ. ಈ ಘಟನೆಯಿಂದ ಮುಖ್ಯಮಂತ್ರಿಗಳು ಕೊಂಚ ವಿಚಲಿತರಾದಂತೆ ಕಂಡುಬಂದಿತು.

ವಿವಿಧ ಕಾರ್ಯಕ್ರಮಗಳ, ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ 95ನೆಯ ಜನ್ಮದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ದಾವಣಗೆರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ ವೇಳೆ ರಾಷ್ಟ್ರೀಯ ಹೆದ್ದಾರಿಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ, ರೈತರ, ಸಂಘ ಸಂಸ್ಥೆಗಳ ಮನವಿ ಅಹವಾಲು ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.
ಈ ವೇಳೆ ಸರ್ಕೀಟ್ ಹೌಸ್ ನಲ್ಲಿ ಮನವಿ ಸಲ್ಲಿಸಲು ಸಾರ್ವಜನಿಕರು, ರೈತರು ತೆರಳುತ್ತಿದ್ದಾಗ ಉಂಟಾದ ನೂಕು ನೂಗ್ಗಲಿನಲ್ಲಿ ಮನವಿ ಸಲ್ಲಿಸಲು ತೆರಳುವ ವೇಳೆ ಪೊಲೀಸ್ ಸಿಬ್ಬಂದಿ ಕಾಲಿನಿಂದ ಒದ್ದಿದ್ದಾರೆ, ಮನವಿ ಸಲ್ಲಿಸಲು ಅವಕಾಶ ನೀಡದೆ ಅಡ್ಡಿಪಡಿಸಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ರೈತ ಮುಖಂಡ ಬಲ್ಲೂರು ರವಿಕುಮಾರ್ ಮುಖ್ಯಮಂತ್ರಿಗಳ ಕಾರಿನ ಮುಂದೆ ಅಡ್ಡಲಾಗಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಇತರ ರೈತರು ಕಾರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ.

ಘಟನೆ ಬಳಿಕ ತಮ್ಮ ಬಳಿ ರೈತರನ್ನು ಕರೆಯಿಸಿಕೊಂಡು ಸಿಎಂ ಸಿದ್ದರಾಮಯ್ಯ ಮನವಿ ಸ್ವೀಕರಿಸಿದರು. ನದಿ, ನಾಲೆಗಳಿಂದ ಕೆರೆ ತುಂಬಿಸುವುದು, ಕೆರೆ ಹೂಳೆತ್ತುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಹಲ್ಲೆ, ದೌರ್ಜನ್ಯ ನಡೆಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಸಿಎಂ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಿಎಂ ತೆರಳಿದ ಬಳಿಕ ರೈತ ಮುಖಂಡ ಬಲ್ಲೂರು ರವಿಕುಮಾರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ
ಪೊಲೀಸ್, ಭದ್ರತಾ ಪಡೆ ಸಿಬ್ಬಂದಿಗೆ ಧಿಕ್ಕಾರ ಕೂಗಿ ಕ್ರಮಕ್ಕೆ ಆಗ್ರಹಿಸಿದರು. ಪೊಲೀಸರ ವಿರುದ್ಧ ರೈತ ಮುಖಂಡ ಬಲ್ಲೂರು ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿ “ಮನವಿ ಸಲ್ಲಿಸಲು ತೆರಳುವ ವೇಳೆ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದಾರೆ. ಪೊಲೀಸರು, ಭದ್ರತಾ ಸಿಬ್ಬಂದಿಗೆ ಮಾನವೀಯತೆ ಇಲ್ಲವಾ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಸಾಮಾಜಿಕ ನ್ಯಾಯಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಮುಖ್ಯ; ಗಣತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ
“ಘಟನೆಯ ತನಿಖೆ, ಪೊಲೀಸ್ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದೇವೆ. ರೈತರು ಉತ್ತಿ ಬಿತ್ತಿ ಬೆಳೆದರೆ ಇವರು ಊಟ ಮಾಡುತ್ತಾರೆ. ಇವರಿಗೆ ಸಂಬಳ ನೀಡುವುದು ಮುಖ್ಯಮಂತ್ರಿಗಳ ಮನೆಯಿಂದಲ್ಲ, ನಾವು ಕಟ್ಟುವ ತೆರಿಗೆಯಿಂದ. ರೈತರು, ಸಾರ್ವಜನಿಕರ ಜೊತೆಗೆ ಸೌಜನ್ಯದಿಂದ ವರ್ತಿಸಬೇಕು” ಎಂದು ಆಗ್ರಹಿಸಿದರು.