ರಾಜ್ಯದಲ್ಲಿ ವಿಳಂಬವಾಗಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಯನ್ನು ನಡೆಸುವ ಸಂಬಂಧ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಯನ್ನು ಸರ್ಕಾರ ತಡೆ ಹಿಡಿದಿದೆ. ಈ ಚುನಾವಣೆಗಳನ್ನು ನಡೆಸಲು ಸರ್ಕಾರ ಮನಸ್ಸು ಮಾಡಬೇಕಿದೆ ಎಂದು ಅವರು ಹೇಳಿದರು.ಶೀಘ್ರವಾಗಿ ಈ ಚುನಾವಣೆಗಳನ್ನು ನಡೆಸಬೇಕು ಎಂಬುದು ನನ್ನ ಮತ್ತು ನಮ್ಮ ಪಕ್ಷದ ಆಗ್ರಹವಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷ ಮುಳುಗುತ್ತಿರುವ ಹಡಗಲ್ಲ. ಸದಾ ಕಾಲ ಜೆಡಿಎಸ್ ಪಕ್ಷದ ಪರವಾಗಿ ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೋರಾಟ ನಡೆಸುತ್ತಾ ಕಾರ್ಯಕರ್ತರು ಹಾಗೂ ರಾಜ್ಯದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ ಸಹ ಶೇ. 20 ರಷ್ಟು ಮತಗಳ ಷೇರನ್ನು ಹೆಚ್ಚಿಸಿಕೊಂಡಿದೆ. ಚುನಾವಣೆಯಲ್ಲಿ ಸೋಲು-ಗೆಲುವುದ ಸರ್ವೇ ಸಾಮಾನ್ಯ. ಇದನ್ನು ಸಮಚಿತ್ತವಾಗಿ ಸ್ವೀಕರಿಸುವ ಮನಸ್ಥಿತಿ ನಮ್ಮ ಪಕ್ಷದವರಿಗಿದೆ ಎಂದರು.
ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಜೆಡಿಎಸ್-ಬಿಜೆಪಿ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ರಾಜ್ಯದ ಹಿತಕ್ಕಾಗಿ ಈ ಹೊಂದಾಣಿಕೆ ಮುಂದುವರೆಯಲಿದೆ ಎಂದು ಅವರು ಹೇಳಿದರು.
ನವೆಂಬರ್-ಡಿಸೆಂಬರ್‌ನಲ್ಲಿ ನಡೆಯುತ್ತೆ ಎಂದು ಹೇಳಲಾಗುತ್ತಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗೂ ಹೊಂದಾಣಿಕೆ ಮುಂದುವರೆಯುತ್ತಾ ಎಂಬ ಪ್ರಶ್ನೆಗೆ ನವೆಂಬರ್ ನಂತರ ಏನು ಬೆಳವಣಿಗೆ ಆಗತ್ತದೆ ಎಂಬುದನ್ನು ನೋಡೋಣ ಎಂದು ಚುಟುಕಾಗಿ ಉತ್ತರಿಸಿದರು.
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಹೇಮಾವತಿ ಜಲಾಶಯದಿಂದ ಮಂಡ್ಯ, ರಾಮನಗರ, ಹಾಸನ, ತುಮಕೂರು ಈ ಎಲ್ಲ ಜಿಲ್ಲೆಗಳ ರೈತರು ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಜಲಸಂಪನ್ಮೂಲ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದುವರೆಗೂ ರೈತರ ಸಭೆ ಕರೆದು ಅವರ ಸಮಸ್ಯೆ ಆಲಿಸಿ ಬಗೆಹರಿಸುವ ಕೆಲಸ ಮಾಡಿಲ್ಲ ಎಂದು ದೂರಿದರು.
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅನುಮೋದನೆ ನೀಡಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ, ಕುಮಾರಣ್ಣನವರ ಕಾಲಘಟ್ಟದಲ್ಲಿ ಈ ರೀತಿ ಘಟನೆ ನಡೆದಿದ್ದರೆ ಅವರು ರೈತರನ್ನು ಕೂರಿಸಿ ಸಮಸ್ಯೆ ಬಗೆಹರಿಸುತ್ತಿದ್ದರು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರು ಮತ್ತು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ ಜೆ.ಪಿ. ಭವನದಲ್ಲಿ ಅಧಿಕೃತವಾಗಿ ರಾಜ್ಯ ಪ್ರವಾಸಕ್ಕೆ ಚಾಲನೆ ಕೊಟ್ಟಿದ್ದಾರೆ. ಹಾಗಾಗಿ ಮುಂದಿನ 60 ದಿನಗಳ ಕಾಲ ರಾಜ್ಯಾದ್ಯಂತ ಪ್ರವಾಸ ನಡೆಸಿ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯ ನಡೆಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಲ್‌ಪಿ ನಾಯಕ ಸಿ.ಬಿ. ಸುರೇಶ್‌ಬಾಬು, ಮಾಜಿ ಶಾಸಕ ಹೆಚ್. ನಿಂಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಟಿ.ಆರ್. ಆಂಜಿನಪ್ಪ, ಟಿ.ಆರ್. ನಾಗರಾಜು, ಶಾಂತಕುಮಾರ್, ಮಾಜಿ ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್, ನರಸಿಂಹಮೂರ್ತಿ, ಶ್ರೀನಿವಾಸ್, ಕುಂಭಣ್ಣ, ದಾಂಡೇಲಿ ಗಂಗಣ್ಣ, ಗಂಗಹನುಮಯ್ಯ, ಲೀಲಾವತಿ, ಮೆಡಿಕಲ್ ಮಧು, ಸೋಲಾರ್ ಕೃಷ್ಣಮೂರ್ತಿ, ದರ್ಶನ್ ಯಾದವ್, ಸುಮ ಜಗನ್ನಾಥ್, ಲೀಲಾವತಿ, ಕುಸುಮ, ತಾಹೇರಾ ಬಾನು ಮತ್ತಿತರರು ಉಪಸ್ಥಿತರಿದ್ದರು.