ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ದಾಳಿ ಪ್ರತಿದಾಳಿ ಮುಂದುವರೆಯುತ್ತಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಇಸ್ರೇಲ್ ವಾಯು ಕಾರ್ಯಾಚರಣೆ ವಿಸ್ತರಿಸುತ್ತಿದ್ದು, ಮಧ್ಯಭಾಗದಲ್ಲಿರುವ ಮೂರು ಲಕ್ಷ ಜನ ಸ್ಥಳಾಂತರಗೊಳ್ಳಿ ಎಂಬ ಎಚ್ಚರಿಕೆಯನ್ನು ಇಸ್ರೇಲ್ ನೀಡಿದೆ.
ಸೋಮವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಟೆಹ್ರಾನ್ ಅನ್ನು ತಕ್ಷಣ ಸ್ಥಳಾಂತರಿಸುವಂತೆ ಕರೆ ನೀಡಿದ್ದಾರೆ. ಇಸ್ರೇಲ್ ಕೂಡಾ ಸ್ಥಳಾಂತರದ ಎಚ್ಚರಿಕೆ ನೀಡಿರುವುದು, ಇಸ್ರೇಲ್ ಟೆಹ್ರಾನ್ ಮೇಲೆ ಅತಿ ದೊಡ್ಡ ದಾಳಿ ನಡೆಸುವ ಸುಳಿವು ನೀಡಿದಂತಿದೆ.
ಇದನ್ನು ಓದಿದ್ದೀರಾ? ಗಾಜಾ ಮೇಲೆ ಇಸ್ರೇಲ್ ದಾಳಿ; ಮಕ್ಕಳು ಸೇರಿ 90 ಮಂದಿ ಸಾವು
ಶುಕ್ರವಾರದಿಂದ ನಡೆಯುತ್ತಿರುವ ಈ ದಾಳಿಗಳಲ್ಲಿ ಈವರೆಗೆ 224ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಒಂದೆಡೆ ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ನಿರ್ಮಿಸುತ್ತಿದೆ, ಅದನ್ನು ತಡೆಯುವ ಅಗತ್ಯವಿದೆ ಎಂದು ಇಸ್ರೇಲ್ ಹೇಳುತ್ತಿದೆ. ಇನ್ನೊಂದೆಡೆ ಇರಾನ್ 2003ರಿಂದ ಟೆಹ್ರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಬಳಸಲು ಯಾವುದೇ ಸಂಘಟಿತ ಪ್ರಯತ್ನವನ್ನು ಮಾಡಿಲ್ಲ ಎಂದು ಹೇಳಿದೆ.
ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಇರಾನ್ ಈಗಾಗಲೇ 370ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳನ್ನು ಉಡಾಯಿಸಿದೆ. ಇಲ್ಲಿಯವರೆಗೆ, ಇಸ್ರೇಲ್‌ನಲ್ಲಿ 24 ಜನರು ಸಾವನ್ನಪ್ಪಿದ್ದಾರೆ ಮತ್ತು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಉಭಯ ದೇಶಗಳಲ್ಲಿ ಸಂಘರ್ಷ ಯುದ್ಧವಾಗಿ ಮಾರ್ಪಾಡಾಗುವ ಕಳವಳ ಹೆಚ್ಚಾಗಿದೆ.
ಇಸ್ರೇಲ್ ಟೆಹ್ರಾನ್‌ನ ಮಧ್ಯಭಾಗದಲ್ಲಿರುವ 330,000 ಜನರಿಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಿದೆ. ಈ ಪ್ರದೇಶದಲ್ಲೇ ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್‌ನ ಒಡೆತನದ ಒಂದು ಆಸ್ಪತ್ರೆ ಸೇರಿದಂತೆ ಮೂರು ದೊಡ್ಡ ಆಸ್ಪತ್ರೆಗಳಿವೆ. ಅತಿದೊಡ್ಡ ನಗರಗಳಲ್ಲಿ ಒಂದಾದ ಟೆಹ್ರಾನ್‌ನಲ್ಲಿ 9.5 ಮಿಲಿಯನ್ ಜನರು ನೆಲೆಸಿದ್ದಾರೆ. ಇನ್ನು ಈ ಹಿಂದೆಯೂ ಇಸ್ರೇಲ್ ತಾನು ದಾಳಿ ನಡೆಸುವುದಕ್ಕೂ ಮುನ್ನ ಗಾಜಾ ಮತ್ತು ಲೆಬನಾನ್‌ನ ಕೆಲವು ಭಾಗಗಳಲ್ಲಿ ನಾಗರಿಕರು ಸ್ಥಳಾಂತಗೊಳ್ಳುವಂತೆ ಎಚ್ಚರಿಕೆ ನೀಡಿತ್ತು. ಆದರೆ ದಾಳಿ ನಡೆಸಿ ಹಲವು ನಾಗರಿಕರ ಬಲಿ ಪಡೆದುಕೊಂಡಿತ್ತು.
