ಹರಿಹರದ ಎ.ಕೆ.ಕಾಲೋನಿಯಲ್ಲಿರುವ ದಸಂಸ ಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪನವರ ಮನೆಯನ್ನು ಸ್ಮಾರಕವಾಗಿಸುವುದು, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ಅಧ್ಯಯನ ಪೀಠ ಆರಂಭಿಸಬೇಕು ಎನ್ನುವುದು ಸೇರಿದಂತೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಘಟಕದಿಂದ ಸಂಚಾಲಕ ಮಹಾಂತೇಶ ಮತ್ತು ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾವಣಗೆರೆಗೆ ಆಗಮಿಸಿದ ವೇಳೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಹರಿಹರ ತಾಲ್ಲೂಕಿನ ಕಡ್ಲೆಗೊಂದಿ ಹಾಗೂ ಭಾನುವಳ್ಳಿ ಗ್ರಾಮದ (SC,ST) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತ್ತು ಹಿಂದುಳಿದ ವರ್ಗದ ವಸತಿರಹಿತರಿಗೆ ವಸತಿಯೋಜನೆ ಜಾರಿ ಮಾಡಬೇಕು. ಹರಿಹರ ತಾಲ್ಲೂಕಿನ ಹರಳಹಳ್ಳಿ, ಗುಳದಹಳ್ಳಿ, ಜಿ.ಬೇವಿನಹಳ್ಳಿ, ಭಾನುವಳ್ಳಿ ಮತ್ತು ಬೆಳ್ಳೂಡಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಬೇಕು. ಹಾಗೂ ಪ್ರೊ.ಕೃಷ್ಣಪ್ಪನವರ ಮನೆಯಲ್ಲಿರುವ ಅವರ ಬಂಧುಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಲಾಗಿದೆ.
ಪ್ರೊ.ಬಿ.ಕೃಷ್ಣಪ್ಪ ಅವರ ಜಯಂತಿಯನ್ನು ಸರ್ಕಾರದಿಂದ ಆಚರಿಸುವುದು. ಒಳ ಮೀಸಲಾತಿಗಾಗಿ ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ನೊಂದಾವಣೆ ಮಾಡಿರುವ ಹಲವು ನಕಲಿ ಬೇಡ ಜಂಗಮರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು. ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಾಲ ಸವಲತ್ತು ಪಡೆಯಲು ಫಲಾನುಭವಿಗಳ ಆಯ್ಕೆಯ ಅಧಿಕಾರವನ್ನು ಶಾಸಕರ ಬದಲಾಗಿ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ನೀಡುವುದು, ಬಡವರಿಗೆ ಅನುಕೂಲಕರವಾಗಿರುವ ಮೊರಾರ್ಜಿ ವಸತಿಯುತ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಹರಿಹರ ನಗರದ ಉದ್ದೇಶಿತ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಾಮಾಜಿಕ ನ್ಯಾಯಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಮುಖ್ಯ; ಗಣತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ
20 ಎಕರೆಗೂ ಹೆಚ್ಚು ಪ್ರದೇಶ ಹೊಂದಿರುವ ಹರಿಹರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸುವುದು. ಹರಿಹರ ನಗರಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡುವುದು. ಹರಿಹರದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ಕಳೆದ ಮೂರುವರೆ ವರ್ಷದಿಂದ ಎಸ್ಸಿ ಎಸ್ಟಿ ಕುಂದುಕೊರತೆ ಸಭೆ ನಡೆಸದೆ ಇದ್ದು, ಕೂಡಲೆ ಈ ಸಭೆಯನ್ನು ಆಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದು. ಅವ್ಯಾಹತ ಹಾಗೂ ಅವೈಜ್ಞಾನಿಕ ಮರಳುಗಾರಿಕೆ ನಡೆಸಿ ಹರಿಹರದ ತುಂಗಭದ್ರ ನದಿಯ ಪರಿಸರದ ಮೇಲೆ ತೀವ್ರ ಹಾನಿಯಾಗಿದ್ದು ಮುಂದಿನ 10 ವರ್ಷಗಳ ಕಾಲ ಈ ಭಾಗದಲ್ಲಿ ಮರಳು ಗಣಿಗಾರಿಕೆ ನಡೆಸದಂತೆ ಆದೇಶಿಸಲು ಮನವಿ ಸಲ್ಲಿಸಲಾಯಿತು.