ಏರ್ ಇಂಡಿಯಾ ವಿಮಾನ ದುರಂತ; ಇಲ್ಲಿವರೆಗೆ ಏನೇನು?

Date:

Advertisements

ಕಳೆದ ಗುರುವಾರ (ಜೂ.12) ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಸಂಖ್ಯೆ AI 171 ದುರಂತ ಭಾರತದ ವಿಮಾನಯಾನ ಇತಿಹಾಸದಲ್ಲಿಯೇ ಒಂದು ಕರಾಳ ಅಧ್ಯಾಯವಾಗಿ ಉಳಿಯಲಿದೆ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಭಾರಿ ಸಾವು-ನೋವುಗಳಾದ ಈ ದುರ್ಘಟನೆಗೆ ವಿವಿಧ ಆಯಾಮಗಳಿಂದ ಕಾರಣ ಕಂಡುಕೊಳ್ಳುವ ಪ್ರಕ್ರಿಯೆ ನಿರಂತರ ಸಾಗಿದೆ.

ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯವು (Ministry of Civil Aviation) ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (AAIB) ನೇತೃತ್ವದಲ್ಲಿ ಈ ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಈ ತನಿಖಾ ಸಮಿತಿಯ ಮೊದಲ ಸಭೆ ನಿನ್ನೆ (ಜೂ.16) ನಡೆದಿದೆ.

ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ವಿಮಾನದ ಫ್ಲೈಟ್‌ ಡೇಟಾ ರೆಕಾರ್ಡರ್‌ (DFDR) ಮತ್ತು ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌ (CVR) ಒಳಗೊಂಡಿರುವ ಬ್ಲ್ಯಾಕ್‌ಬಾಕ್ಸ್‌ಗಳನ್ನು ಅಧಿಕಾರಿಗಳ ಪತ್ತೆಹಚ್ಚಿದ್ದಾರೆ. ಈ ಬಾಕ್ಸ್‌ನಲ್ಲಿರುವ ಮಾಹಿತಿ ವಿಮಾನದ ಕಾರ್ಯಕ್ಷಮತೆ, ಪೈಲಟ್‌ಗಳ ಸಂಭಾಷಣೆ ಮತ್ತು ವಿಮಾನದ ಸ್ಥಿತಿಯ ಬಗ್ಗೆ ಮಹತ್ವದ ಸುಳಿವುಗಳನ್ನು ನೀಡಲಿದೆ.

Advertisements
WhatsApp Image 2025 06 17 at 3.28.23 PM

ಪ್ರಾಥಮಿಕ ವರದಿಗಳ ಪ್ರಕಾರ, ಎರಡೂ ಎಂಜಿನ್‌ಗಳು ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಸ್ಥಗಿತಗೊಂಡಿರುವುದು ದುರಂತಕ್ಕೆ ಮುಖ್ಯ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಇದು ಯಾಂತ್ರಿಕ ದೋಷವೇ, ತಾಂತ್ರಿಕ ವೈಫಲ್ಯವೇ ಅಥವಾ ಇನ್ಯಾವುದಾದರೂ ಬಾಹ್ಯ ಕಾರಣವೇ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ ಎಂದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಈ ತನಿಖೆಯಲ್ಲಿ ಅಮೆರಿಕದ ನ್ಯಾಷನಲ್ ಟ್ರಾನ್ಸ್‌ಪೋರ್ಟೇಷನ್ ಸೇಫ್ಟಿ ಬೋರ್ಡ್ (NTSB) ಮತ್ತು ಯುಕೆ ಯ ಏರ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ರಾಂಚ್ (AAIB) ತಂಡಗಳು ಭಾರತೀಯ ತನಿಖಾಧಿಕಾರಿಗಳಿಗೆ ನೆರವು ನೀಡಲು ಭಾರತಕ್ಕೆ ಆಗಮಿಸಿವೆ. ಬೋಯಿಂಗ್ ಕಂಪನಿಯ ತಜ್ಞರೂ ಸಹ ತನಿಖೆಯಲ್ಲಿ ಭಾಗಿಯಾಗಿದ್ದಾರೆ.

ಏರ್ ಇಂಡಿಯಾ ಹೊಂದಿರುವ ಎಲ್ಲಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಆದೇಶಿಸಿದೆ.

ಹಲವು ದೇಶಗಳ ನಾಯಕರು ಸೇರಿದಂತೆ ಈ ದುರಂತಕ್ಕೆ ವಿಶ್ವವೇ ಸಂತಾಪ ಸೂಚಿಸುತ್ತಿದೆ. ಇನ್ನು ದುರಂತಕ್ಕೀಡಾದ ವಿಮಾನ ಸಂಖ್ಯೆ ʼAI 171ʼ ಅನ್ನು ಭವಿಷ್ಯದಲ್ಲಿ ಯಾವುದೇ ವಿಮಾನಕ್ಕೆ ಬಳಸದಿರಲು ಏರ್‌ ಇಂಡಿಯಾ ನಿರ್ಧರಿಸಿದೆ. ಈ ದುರಂತವು ಭಾರತದ ನಾಗರಿಕ ವಿಮಾನಯಾನ ಸುರಕ್ಷತಾ ಮಾನದಂಡಗಳನ್ನು ಮತ್ತೊಮ್ಮೆ ಪರಿಶೀಲಿಸಲು ಪ್ರೇರೇಪಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮತ್ತು ವಿಮಾನಯಾನ ಸಂಸ್ಥೆಗಳಲ್ಲಿ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸುವ ಕಾರ್ಯವಿಧಾನಗಳನ್ನು ಬಲಪಡಿಸಲು ಹೊಸ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ತಜ್ಞರು ಚಿಂತಿಸುತ್ತಿದ್ದಾರೆ.

ಈವರೆಗೆ 119 ಡಿಎನ್ಎ ಮಾದರಿಗಳು ತಾಳೆಯಾಗಿದ್ದು, ನಿನ್ನೆ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮೃತದೇಹ ಸೇರಿದಂತೆ 76 ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

WhatsApp Image 2025 06 17 at 1.58.52 PM

ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಪಾರ್ಥಿವ ಶರೀರವನ್ನು ಇಂದು (ಜೂ.17) ಮುಂಬೈನ ಪೌವಾಯಿಯ ಜಲ ವಾಯು ವಿಹಾರ್‌ನಲ್ಲಿ ಇರುವ ಅವರ ನಿವಾಸಕ್ಕೆ ತಲುಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 56 ವರ್ಷದ ಸಭರ್ವಾಲ್ ಮುಂಬೈನಲ್ಲಿ ತಮ್ಮ ವೃದ್ಧ ಪೋಷಕರೊಂದಿಗೆ ವಾಸಿಸುತ್ತಿದ್ದರು.

ಈ ವಿಮಾನವನ್ನು ಕ್ಯಾಪ್ಟನ್ ಸಭರ್ವಾಲ್ ಮತ್ತು ಪ್ರಥಮ ಅಧಿಕಾರಿ ಕ್ಲೈವ್ ಕುಂದರ್ ನೇತೃತ್ವ ವಹಿಸಿದ್ದರು. ಸಭರ್ವಾಲ್ ಅವರಿಗೆ 8,200 ಗಂಟೆಗಳ ಹಾರಾಟದ ಅನುಭವವಿದ್ದರೆ, ಕುಂದರ್ ಅವರಿಗೆ 1,100 ಗಂಟೆಗಳ ಅನುಭವವಿತ್ತು ಎಂದು ಡಿಜಿಸಿಎ ತಿಳಿಸಿದೆ.

ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜಿನ ಆವರಣಕ್ಕೆ ಅಪ್ಪಳಿಸಿ, ವಿಮಾನದಲ್ಲಿದ್ದ 241 ಮಂದಿ ಮತ್ತು ವಿಮಾನ ಅಪ್ಪಳಿಸಿದ ಹಾಸ್ಟೆಲ್‌ ಮೆಸ್‌ನಲ್ಲಿದ್ದ ಸುಮಾರು 29 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈವರೆಗೂ ಮೃತರ ಅಧಿಕೃತ ಅಂಕಿಅಂಶ ಬಿಡುಗಡೆಯಾಗಿಲ್ಲ.

ಏತನ್ಮಧ್ಯೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಇಂದು (ಜೂ.17) ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ 159 ಅನ್ನು ರದ್ದುಗೊಳಿಸಲಾಗಿದೆ ಎಂದು ಸಿಎನ್‌ಎನ್ ನ್ಯೂಸ್ 18 ವರದಿ ಮಾಡಿದೆ.

WhatsApp Image 2025 06 17 at 3.08.11 PM

“ನಾನು ಮಧ್ಯಾಹ್ನ 1 ಗಂಟೆಗೆ ಕಾದಿರಿಸಿದ್ದ ಏರ್ ಇಂಡಿಯಾ ವಿಮಾನದಲ್ಲಿ ಲಂಡನ್‌ನ ಗ್ಯಾಟ್ವಿಕ್‌ಗೆ ಹೋಗುವವನಿದ್ದೆ. ಆದರೆ ವಿಮಾನ ರದ್ದಾಗಿದೆ ಎಂದು ನನಗೆ ಈಗಷ್ಟೇ ತಿಳಿಯಿತು. ವಿಮಾನ ರದ್ದತಿಗೆ ಯಾವುದೇ ಕಾರಣ ಅಥವಾ ಶುಲ್ಕ ಮರುಪಾವತಿಯ ವಿವರಗಳನ್ನು ಸಿಬ್ಬಂದಿ ಸದಸ್ಯರು ನೀಡಲು ಸಾಧ್ಯವಾಗಲಿಲ್ಲ” ಎಂದು AI-159 ವಿಮಾನದ ಪ್ರಯಾಣಿಕರೊಬ್ಬರು ANI ಗೆ ತಿಳಿಸಿರುವ ವಿಡಿಯೋ ವೈರಲ್‌ ಆಗಿದೆ.

AI 171 ವಿಮಾನ ದುರಂತವು ಭಾರತದ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ತೀವ್ರ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ. ಈ ಘಟನೆ ತಂತ್ರಜ್ಞಾನ, ನಿರ್ವಹಣಾ ಪ್ರಕ್ರಿಯೆಗಳು ಮತ್ತು ತುರ್ತು ಪ್ರತಿಕ್ರಿಯಾ ಸಾಮರ್ಥ್ಯದ ಪುನರ್ ಪರಿಶೀಲನೆಗೆ ದಾರಿ ಮಾಡಿಕೊಡಬೇಕಾಗಿದೆ. ಅಷ್ಟು ಮಂದಿಯನ್ನು ಹೊತ್ತಿದ್ದ ವಿಮಾನವೊಂದು ಕೆಲವೇ ಕ್ಷಣಗಳಲ್ಲಿ ಪತನಗೊಳ್ಳುವಷ್ಟು ತಾಂತ್ರಿಕವಾಗಿ ದೋಷಪೂರಿತವಾಗಿತ್ತೇ? ಹಾಗಿದ್ದರೂ ವಿಮಾನ ಹಾರಾಟಕ್ಕೆ ಅವಕಾಶ ಕೊಟ್ಟದ್ದಾದರೂ ಯಾಕೆ? ಅಥವಾ ಬಾಹ್ಯ ಕಾರಣಗಳೇನಾದರೂ ಇರುವ ಸಾಧ್ಯತೆ ಇದೆಯೇ?.. ಈ ಪ್ರಶ್ನೆಗಳಿಗೆಲ್ಲ ಉನ್ನತ ಮಟ್ಟದ ತನಿಖಾ ವರದಿಗಳಷ್ಟೇ ಉತ್ತರಿಸಬಹುದು. ಆದರೆ, ಈ ದುರಂತದಿಂದ ಕಲಿತ ಪಾಠಗಳು ಭವಿಷ್ಯದ ವಿಮಾನಯಾನ ವ್ಯವಸ್ಥೆಯನ್ನು ಇನ್ನಷ್ಟು ಸುರಕ್ಷಿತವಾಗಿಸಲು ನೆರವಾಗಲಿ ಎಂಬುದೇ ಆಶಯ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X