ಜಲಮಂಡಳಿ, ವಿದ್ಯುಚ್ಛಕ್ತಿ ಇಲಾಖೆ ಇಲ್ಲವೇ ಖಾಸಗಿ ಕೇಬಲ್ ಕಂಪನಿಗಳು ವರ್ಷವಿಡೀ ಕಾಲುದಾರಿಗಳನ್ನು ತೋಡಿ ಹಾಕಿರುತ್ತವೆ. ಅಲ್ಲಲ್ಲಿ ಚೆನ್ನಾಗಿರುವ ಕಾಲುದಾರಿಗಳನ್ನೂ ಗುತ್ತಿಗೆದಾರರು-ರಾಜಕಾರಣಿಗಳ ಜೇಬು ತುಂಬಿಸಲು ಮತ್ತೆ ಮತ್ತೆ ಅಗೆದು ಅವ್ಯವಸ್ಥೆ ಸೃಷ್ಟಿಸಲಾಗುತ್ತದೆ. ಉಳಿದಂತೆ ಕಾಲುದಾರಿಗಳು ಅತಿಕ್ರಮಣಗಳ ದಾಳಿಗೆ ತುತ್ತಾಗಿ ಕಣ್ಮರೆಯಾಗಿರುತ್ತವೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ರಸ್ತೆಗಳ ಒಟ್ಟು ಉದ್ದ 14 ಸಾವಿರ ಕಿ.ಮೀಟರುಗಳಂತೆ! ಇವುಗಳಲ್ಲಿ ಮುಖ್ಯ ರಸ್ತೆಗಳ ಉದ್ದ 1,700 ಕಿ.ಮೀ.ಗಳು. ಈ ರಸ್ತೆಗಳನ್ನು ಒಂದೇ ಸಾಲಿನಲ್ಲಿ ಜೋಡಿಸಿಟ್ಟರೆ ದೆಹಲಿ ಸನಿಹದ ಆಗ್ರಾ ಪಟ್ಟಣವನ್ನು ತಲುಪುವಷ್ಟು ದೂರದ್ದಾಗುತ್ತದೆ.
ಆದರೆ ನೋಡಿ, ಬೆಂಗಳೂರಿನ ಈ ಪಾಟಿ ರಸ್ತೆಗಳಿರುವುದು ಕೇವಲ ವಾಹನಗಳಿಗಾಗಿ. ಪಾದಚಾರಿಗಳು ಬಳಸಬಹುದಾದ ಸ್ಥಿತಿಯಲ್ಲಿರುವ ಕಾಲುದಾರಿಯ ಉದ್ದ ಕೇವಲ 2.9 ಕಿ.ಮೀ! ವಿಧಾನಸೌಧದಿಂದ ಮೂರು ಕಿ.ಮೀ. ಸುತ್ತಳತೆಯಲ್ಲಿ ಮಾತ್ರ ವ್ಯವಸ್ಥಿತ ಕಾಲುದಾರಿ ಇದೆ. ಅದರ ಉದ್ದ 13.4 ಕಿ.ಮೀ.
ವಿಧಾನಸೌಧದ ಸುತ್ತಮುತ್ತ ಮೂರು ಕಿ.ಮೀ. ಸುತ್ತಳತೆಯನ್ನು ಬಿಟ್ಟರೆ ಬೆಂಗಳೂರು ಮಹಾನಗರದಲ್ಲಿ ಪಾದಚಾರಿಗಳು ಇಲ್ಲವೇನೋ ಎಂಬಂತೆ ಕುರುಡಾಗಿ ನಡೆದುಕೊಂಡಿದೆ ಸರ್ಕಾರ.
ಆಘಾತಕಾರಿ ಸುದ್ದಿ ಇಲ್ಲಿಗೇ ನಿಲ್ಲುವುದಿಲ್ಲ. ಕಾಲುದಾರಿಯ ಕೊರತೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಪ್ಪಿಕೊಂಡಿದೆ. ಕಾಲುದಾರಿಗಳ ಕುರಿತು ಅದರ ಬಳಿ ಅಂಕಿಅಂಶಗಳೇ ಇಲ್ಲ. ಬೆಂಗಳೂರಿನಲ್ಲಿ ಹೊಸದಾಗಿ 272 ಕಿ.ಮೀ.ಗಳಷ್ಟು ರಸ್ತೆಗಳನ್ನು ನಿರ್ಮಿಸುವ ಯೋಜನೆ ಹೊಂದಿದೆ ಮಹಾನಗರ ಪಾಲಿಕೆ. ಈ ರಸ್ತೆಗಳ ಜೊತೆಗೆ ನಿರ್ಮಿಸಬಹುದಾದ ಕಾಲುದಾರಿಯ ಉದ್ದ ಎಷ್ಟೆಂದು ತಿಳಿದರೆ ತಲೆಸುತ್ತು ಬಂದೀತು! ಅದು ಕೇವಲ 594 ಮೀಟರುಗಳು!!
ಪರಿಣಾಮವಾಗಿ ಲಕ್ಷ ಲಕ್ಷಾಂತರ ಜನ ಮೋಟಾರು ವಾಹನಗಳ ಜೊತೆಗೆ ರಸ್ತೆಗಳ ಅಂಚಿನಲ್ಲಿ ನಡೆಯಬೇಕಾದ ದುಸ್ಥಿತಿಯಿದೆ. ಈ ಅಂಕಿಅಂಶಗಳನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವಿಶೇಷ ವರದಿಯೊಂದರಲ್ಲಿ ಪ್ರಕಟಿಸಿದೆ.
ಅಡಚಣೆಗಳಿಲ್ಲದೆ ಸರಾಗವಾಗಿ ನಡೆಯುವುದು, ಅಂಗವಿಕಲಸ್ನೇಹಿ ಪಾದಚಾರಿ ಪಥಗಳು ನಾಗರಿಕರ ಮೂಲಭೂತ ಹಕ್ಕು ಎಂದು ಸಾರಿದೆ ದೇಶದ ಸಂವಿಧಾನ. ಪ್ರಾಣದ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ನೀಡಿರುವ 21ನೆಯ ಅನುಚ್ಛೇದವೇ ಅಡ್ಡಿ ಆತಂಕಗಳಿಲ್ಲದೆ ನಡೆಯುವ ಸ್ವಾತಂತ್ರ್ಯವನ್ನೂ ಕೊಡಮಾಡಿದೆ. ಖುದ್ದು ಸುಪ್ರೀಮ್ ಕೋರ್ಟು ಈ ವ್ಯಾಖ್ಯಾನ ನೀಡಿದೆ.
ಜಲಮಂಡಳಿ, ವಿದ್ಯುಚ್ಛಕ್ತಿ ಇಲಾಖೆ ಇಲ್ಲವೇ ಖಾಸಗಿ ಕೇಬಲ್ ಕಂಪನಿಗಳು ವರ್ಷವಿಡೀ ಕಾಲುದಾರಿಗಳನ್ನು ತೋಡಿ ಹಾಕಿರುತ್ತವೆ. ಅಲ್ಲಲ್ಲಿ ಚೆನ್ನಾಗಿರುವ ಕಾಲುದಾರಿಗಳನ್ನೂ ಗುತ್ತಿಗೆದಾರರು-ರಾಜಕಾರಣಿಗಳ ಜೇಬು ತುಂಬಿಸಲು ಮತ್ತೆ ಮತ್ತೆ ಅಗೆದು ಅವ್ಯವಸ್ಥೆ ಸೃಷ್ಟಿಸಲಾಗುತ್ತದೆ. ಉಳಿದಂತೆ ಕಾಲುದಾರಿಗಳು ಅತಿಕ್ರಮಣಗಳ ದಾಳಿಗೆ ತುತ್ತಾಗಿ ಕಣ್ಮರೆಯಾಗಿರುತ್ತವೆ. ಇಲ್ಲವೇ ಉಬ್ಬು ತಗ್ಗು, ಅಂಕುಡೊಂಕು, ಗುಂಡಿಗಳು, ಒಳಚರಂಡಿಗಳಿಂದು ಎತ್ತಲಾದ ಹೂಳಿನ ರಾಶಿಗಳಿಂದ ತುಂಬಿರುತ್ತವೆ. ನಡೆದಾಡಲು ಜಾಗವೇ ಇಲ್ಲದಂತೆ ವಾಹನಗಳ ಪಾರ್ಕಿಂಗ್ ಮಾಡಲಾಗಿರುತ್ತದೆ. ಇದ್ಯಾವುದೂ ಅಲ್ಲದಿದ್ದರೆ ದುರ್ನಾತ ಬೀರುವ ತಿಪ್ಪೆ ಗುಂಡಿಗಳ ರೂಪ ತಳೆದಿರುವುದೂ ಉಂಟು. ಹೀಗಾಗಿ ಬೆಂಗಳೂರಿನ ಕಾಲುದಾರಿಗಳು ಪಾದಚಾರಿಗಳ ಪಾಲಿನ ದುಃಸ್ವಪ್ನ. ಅಂಗವಿಕಲ ವ್ಯಕ್ತಿಗಳು ರಸ್ತೆಗೆ ಇಳಿಯುವುದೇ ಅಸಾಧ್ಯ.
ಯಾವ ಸರ್ಕಾರಗಳು ಬಂದರೂ ಬೆಂಗಳೂರಿನ ರಸ್ತೆಗಳು ರಿಪೇರಿಯಾಗುವುದಿಲ್ಲ. ಇನ್ನು ಕಾಲುದಾರಿಗಳನ್ನಂತೂ ಕೇಳುವವರೇ ಇಲ್ಲವಾಗಿದೆ. ಬೆಂಗಳೂರಿನ ಅಂದಾಜು ಜನಸಂಖ್ಯೆ 1.20 ಕೋಟಿಯಾದರೆ, ಈ ಮಹಾನಗರದಲ್ಲಿ ನೋಂದಣಿ ಮಾಡಿಸಲಾಗಿರುವ ಒಟ್ಟು ಮೋಟಾರು ವಾಹನಗಳ ಸಂಖ್ಯೆ 1.20 ಕೋಟಿ. ಅನಧಿಕೃತ ವಾಹನಗಳು ಹತ್ತಾರು ಸಾವಿರ ಎನ್ನಲಾಗಿದೆ.
ವಯಸ್ಸಾದವರು, ವಿದ್ಯಾರ್ಥಿಗಳು ಹಾಗೂ ಗತಿಹೀನ ಜನಸಮುದಾಯಗಳು ಬಹುತೇಕ ಅವಲಂಬಿಸುವುದು ಕಾಲ್ನಡಿಗೆಯನ್ನೇ. ಬೆಂಗಳೂರಿನಲ್ಲಿ ಇಂತಹವರ ಸಂಖ್ಯೆ ಲಕ್ಷಾಂತರ. ನಡೆಯಲು ಲಾಯಕ್ಕಾದ ಫುಟ್‌ಪಾತ್ ಗಳಿಲ್ಲದೆ ಪಾದಚಾರಿಗಳು ರಸ್ತೆಗಿಳಿದು ನಡೆಯುತ್ತಿರುವ ಕಾರಣ ಅಪಘಾತಗಳು ಹೆಚ್ಚಿವೆ. ಫುಟ್ ಪಾತುಗಳಿಗೂ ಪಾದಚಾರಿಗಳು ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವುದಕ್ಕೂ ನೇರ ಸಂಬಂಧವಿದೆ. ವರ್ಷಕ್ಕೆ 250ಕ್ಕೂ ಹೆಚ್ಚು ಮಂದಿ ಇಂತಹ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದು ಘನತೆಯ ಸಂಗತಿಯಲ್ಲ.
ಪೇಟೆ ಪಟ್ಟಣಗಳು ಮತ್ತು ಮಹಾನಗರಗಳಲ್ಲಿ ಸರಾಗವಾಗಿ ನಡೆಯಬಲ್ಲ ಕಾಲುದಾರಿಯ ಸೌಲಭ್ಯವು ಮೂಲಭೂತ ನಾಗರಿಕ ಸೌಕರ್ಯವೇ ವಿನಾ ವಿಲಾಸ ವೈಭೋಗವಲ್ಲ. ಭಾರತದ ಕೇವಲ 30ರಷ್ಟು ನಗರಗಳು ಮಾತ್ರವೇ ಪಾದಚಾರಿ ಪಥಗಳನ್ನು ಹೊಂದಿವೆ. ಕಾಲುದಾರಿಗಳು ಸಾರ್ವಜನಿಕರ ಆರೋಗ್ಯವನ್ನು ಹೆಚ್ಚಿಸುತ್ತವಲ್ಲದೆ ವಾಯು ಮಾಲಿನ್ಯವನ್ನು ತಗ್ಗಿಸುತ್ತವೆ. ಅವು ನಗರಯೋಜನೆಗಳ ಅವಿಭಾಜ್ಯ ಅಂಗ. ವಾಹನಸಂದಣಿಯಿಂದ ಪಾದಚಾರಿಗಳನ್ನು ಪಾರು ಮಾಡಲು ಸಿಂಧೂ ಕೊಳ್ಳವೂ ಸೇರಿದಂತೆ ಬಹುತೇಕ ಪ್ರಾಚೀನ ನಾಗರಿಕತೆಗಳು ಕಾಲುದಾರಿಗಳನ್ನು ನಿರ್ಮಿಸಿದ್ದವೆಂಬ ಸಂಗತಿ ಸಿದ್ಧಗೊಂಡಿದೆ.
ಕಾಲುದಾರಿಗಳು ಮೋಟಾರು ವಾಹನಗಳ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತವೆ. ಕಾಲ್ನಡಿಗೆಯ ಹುಮ್ಮಸ್ಸು ಹೆಚ್ಚಿಸಿ ಕಾರ್ಬನ್ ಮಾಲಿನ್ಯವನ್ನು ಕುಂದಿಸುತ್ತವೆ. ವ್ಯಾಪಾರ ವಹಿವಾಟನ್ನು ಹೆಚ್ಚಿಸುತ್ತವೆ.
ಮನುಷ್ಯರು ಸ್ವಭಾವತಃ ಪಾದಚಾರಿಗಳು. ಕಾರುಗಳೇ ಕಾಲುಗಳು ಎನಿಸಿರುವ ಲಾಸ್ ಏಂಜೆಲ್ಸ್ ನಂತಹ ನಗರಗಳಲ್ಲಿಯೂ ಕಾಲುದಾರಿಗಳು ಅನಿವಾರ್ಯ ಎನಿಸಿಕೊಂಡಿವೆ.
2050ರ ವೇಳೆಗೆ ಜಾಗತಿಕ ಜನಸಂಖ್ಯೆಯ ಶೇ.70ರಷ್ಟು ಜನ ನಗರವಾಸಿಗಳಾಗಲಿದ್ದಾರೆ ಎಂಬುದು ವಿಶ್ವಸಂಸ್ಥೆಯ ಅಂದಾಜು. ದಿನನಿತ್ಯದ ಅಗತ್ಯಗಳನ್ನು ಕಾಲ್ನಡಿಗೆಯ ಅಂತರದಲ್ಲೇ ಕಲ್ಪಿಸಬೇಕೆಂಬುದು ‘ಸ್ಮಾರ್ಟ್ ಸಿಟಿ’ ಗಳ ಮೂಲ ಉದ್ದೇಶಗಳಲ್ಲೊಂದು. ನಗರಗಳು ಕೊಳೆತು ಕೊಂಪೆಗಳಾಗುವುದನ್ನು ತಡೆ ಹಿಡಿಯುವ ಮುಖ್ಯ ಅಪಾಯ ಪಾದಚಾರಿ ವಲಯಗಳ ನಿರ್ಮಾಣ.
ಇದನ್ನೂ ಓದಿ ಮುಸ್ಲಿಮ್, ಕ್ರೈಸ್ತರ ಗುಂಪನ್ನು ಕೊಚ್ಚಿ ಹಾಕಿ ಎಂದ ಸ್ವಾಮಿಯ ಬಂಧನ ಯಾಕಿಲ್ಲ?
ನಗರಗಳು, ಮಹಾನಗರಗಳು ಹೆಚ್ಚು ದಟ್ಟವೂ, ಹೆಚ್ಚು ಹಸಿರುಭರಿತವೂ ಆಗಿ, ಹೆಚ್ಚು ಹೆಚ್ಚಾಗಿ ಎಲ್ಲರನ್ನೂ ಒಳಗೊಳ್ಳುವ ವಿನ್ಯಾಸಗಳನ್ನು ಹೊಂದುತ್ತ ನಡೆಯಬೇಕಿದೆ. ಈ ಎಲ್ಲ ಅಂಶಗಳ ಅಡಿಗಲ್ಲು ಪಾದಚಾರಿ ಪಥಗಳು. ಆಧುನಿಕ ಪಾದಚಾರಿ ಪಥಗಳು, ಸೈಕ್ಲಿಂಗ್ ಲೇನ್ ಗಳನ್ನು ಹೊಂದಿರಬೇಕಾಗುತ್ತದೆ.
ನಗರಗಳ ನಿಜವಾದ ಸಂಚಾರಿ ಅಭಿವೃದ್ಧಿಯೆಂದರೆ ಅದರ ಅನುಕೂಲಕರ ಫುಟ್ ಪಾತುಗಳೇ ವಿನಾ ಫ್ಲೈಓವರುಗಳು, ಎಕ್ಸ್ ಪ್ರೆಸ್ ವೇಗಳಲ್ಲ. ಪಾದಚಾರಿ ಪಥಗಳಿಗೆ ಗೌರವ ಮನ್ನಣೆ ಹೆಚ್ಚಬೇಕು. ವಯಸ್ಸಾದವರು, ಮಕ್ಕಳು ರಸ್ತೆಗಳನ್ನು ದಾಟುವುದು ಪ್ರಾಣಕ್ಕೇ ಸಂಚಕಾರವಾಗಿ ಪರಿಣಮಿಸಿದೆ ಬೆಂಗಳೂರಿನಲ್ಲಿ. ದಟ್ಟ ಸಂಚಾರದ ಸಮಯಗಳಲ್ಲಿ ಐದಾರು ನಿಮಿಷ ಕಾಯುವ ಪರಿಸ್ಥಿತಿಯಿದೆ.
