ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶವು ನಿಗದಿತ ಗುರಿ ತಲುಪಬೇಕೆನ್ನುವುದು ಮುಖ್ಯಮಂತ್ರಿಯವರ ಆಶಯವಾಗಿದ್ದು, ಅದರಂತೆ ಬಳ್ಳಾರಿ ಜಿಲ್ಲೆಯೂ ಕೂಡ ಉತ್ತಮ ಫಲಿತಾಂಶ ಪಡೆಯಲು ಅಧಿಕಾರಿಗಳು ಶ್ರಮಿಸಬೇಕು. ಇದೇ ನೀವು ಸರ್ಕಾರಕ್ಕೆ ನೀಡುವ ಕೊಡುಗೆಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು.
ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
“ಉತ್ತಮ ಫಲಿತಾಂಶಕ್ಕಾಗಿ ಅಧಿಕಾರಿಗಳು ಈಗಿನಿಂದಲೇ ಕಾರ್ಯಯೋಜನೆ ರೂಪಿಸಬೇಕು. ಹಂತ-ಹಂತವಾಗಿ ಅದನ್ನು ಕಾರ್ಯರೂಪಕ್ಕೆ ತರಬೇಕು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅಡಿಪಾಯ ಹಾಕಿದಂತಾಗುತ್ತದೆ. ಅದುಬಿಟ್ಟು ಕೊನೆಯ ಸಮಯದಲ್ಲಿ ಗೊಂದಲವಾಗಿ ಅನುಷ್ಠಾನಗೊಳಿಸುವುದಲ್ಲ” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
“ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಅಧಿಕಾರಿಗಳು ಶಾಲೆಗಳನ್ನು ದತ್ತು ರೀತಿಯಲ್ಲಿ ಕಾಳಜಿ ವಹಿಸಬೇಕು. ಇದರಿಂದ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ ಹಾಗೂ ಒಳ್ಳೆಯ ಫಲಿತಾಂಶ ಲಭಿಸುತ್ತದೆ. ಜಿಲ್ಲೆಯ ಎಲ್ಲ ಶಾಲೆಗಳಿಗೂ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಇದರಿಂದ ಕಂಪ್ಯೂಟರ್ ಶಿಕ್ಷಣವೂ ಲಭಿಸುತ್ತಿದೆ. ಸಂಜೆಯ ವೇಳೆಯಲ್ಲಿ ವಿಶೇಷ ತರಗತಿ ನಡೆಸಲು ಅನುಕೂಲವಾಗುತ್ತಿದೆ. ಈ ಕುರಿತು ಸಾಕಷ್ಟು ಪ್ರಚಾರ ಮಾಡಬೇಕು. ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಹೊಂದಲು ಸಹಾಯವಾಗುತ್ತದೆ” ಎಂದರು.
“ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮನೆಗೆ ಹೋಗಿ ಕರೆತರುವ ಕೆಲಸ ಮಾಡಬೇಕು. ಮುಖ್ಯವಾಗಿ ಉನ್ನತ ಅಧಿಕಾರಿಗಳು ಶಾಲೆ ಬಿಟ್ಟ ಮಕ್ಕಳ ಮನೆಗೆ ಭೇಟಿ ನೀಡಿ, ಅವರನ್ನು ತಮ್ಮ ಸರ್ಕಾರಿ ವಾಹನದ ಮೂಲಕ ಕರೆತಂದರೆ ಆ ಮಗುವಿಗೆ ನಾನು ವಿದ್ಯಾಭ್ಯಾಸ ಪಡೆಯಬೇಕೆಂಬ ಹಂಬಲ ಹುಟ್ಟಿಕೊಳ್ಳುತ್ತದೆ. ನಂತರ ಕರೆತಂದ ಅಧಿಕಾರಿಯೂ ಕೂಡ ಆ ಮಗುವಿನ ಮೇಲೆ ಹೆಚ್ವಿನ ಕಾಳಜಿ ಕುರಿತು ವಿಚಾರಿಸ ತೊಡಗುತ್ತಾನೆ. ಇದರಿಂದ ಸುತ್ತ-ಮುತ್ತಲಿನ ಪೋಷಕರು ಕೂಡ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಮುಂದೆ ಬರುತ್ತಾರೆ” ಎಂದು ಹೇಳಿದರು.
“ಶಿಕ್ಷಣ ಇಲಾಖೆಯಲ್ಲಿ 6 ಸಾವಿರಕ್ಕೂ ಅಧಿಕ ಅಧಿಕಾರಿಗಳಿದ್ದು, ಒಬ್ಬೊಬ್ಬರು ಒಂದು ಮಗುವನ್ನು ಸರ್ಕಾರಿ ಶಾಲೆಗೆ ದಾಖಲಿಸಿದರೆ, ದಾಖಲಾತಿ ಪ್ರಮಾಣವೇ ಹೆಚ್ಚಳವಾಗುತ್ತದೆ. ಈ ಕುರಿತು ಅಧಿಕಾರಿಗಳು ಒಮ್ಮೆ ಯೋಚಿಸಬೇಕು” ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
“ಜಿಲ್ಲೆಯ ಗಡಿಭಾಗದ ಗ್ರಾಮಗಳಲ್ಲಿ ಜನರು ಗುಳೆ ಹೋಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿಯೇ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳು ಇವುಗಳ ಪ್ರಯೋಜನ ಪಡೆಯುವಂತರಾಗಬೇಕು. ಇದರಿಂದ ಆ ಕುಟುಂಬದ ಮಕ್ಕಳೂ ಕೂಡ ಶಾಲೆ ತಪ್ಪಿಸುವುದಿಲ್ಲ” ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ್ ಶಂಕರ್ ಮಾತನಾಡಿ, “ಜಿಲ್ಲೆಯಲ್ಲಿ ಈಗಾಗಲೇ ಶೇ.94ರಷ್ಟು ಪಠ್ಯಪುಸ್ತಕ ಸರಬರಾಜು ಮಾಡಲಾಗಿದೆ. ಜಿಲ್ಲೆಯಲ್ಲಿ 9-10ನೇ ತರಗತಿಯ 8 ಸಾವಿರ ವಿದ್ಯಾರ್ಥಿಗಳು ಎನ್ಎಸ್‌ಕ್ಯೂಎಫ್ ಐಟಿ ವಿಷಯ ಓದುತ್ತಿದ್ದಾರೆ” ಎಂದು ಸಭೆಗೆ ತಿಳಿಸಿದರು.
ʼಶಾಲಾ ಆಸ್ತಿ ನೋಂದಣಿಗೆ ಮುತುವರ್ಜಿ ವಹಿಸಿʼ
“ಜಿಲ್ಲೆಯಲ್ಲಿ ಒಟ್ಟು 633 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಕಳೆದ ವರ್ಷ 362 ಶಾಲೆಗಳ ಆಸ್ತಿ ನೋಂದಣಿ ಮಾಡಲಾಗಿದೆ. ಅದರಲ್ಲಿ 265 ಶಾಲಾ ಆಸ್ತಿ ನೋಂದಣಿ ಬಾಕಿ ಇದ್ದು, ಇದಕ್ಕೆ ಡಿಡಿಪಿಐ ಮತ್ತು ಡಿಡಿಪಿಯು ಅಧಿಕಾರಿಗಳು ಹೊಣೆಗಾರಿಕೆ ಹೊಂದಬೇಕು. ಆಯಾ ವ್ಯಾಪ್ತಿಯ ತಹಶೀಲ್ದಾರ್ ಜೊತೆ ಸಹಭಾಗಿತ್ವ ಹೊಂದಿ ನೋಂದಣಿಗೆ ಆದ್ಯತೆ ವಿಷಯವಾಗಿ ಪರಿಗಣಿಸಲು ಸೂಚಿಸಬೇಕು” ಎಂದು ಕೋರಿದರು.
ಸಿಎಸ್‌ಆರ್ ಅನುದಾನ ಬಳಸಿ
“ಮುಖ್ಯಮಂತ್ರಿಯವರ ನಿರ್ದೇಶನದಂತೆ, ಶಿಕ್ಷಣ ಇಲಾಖೆಯನ್ನು ಕೆಡಿಪಿ ಸಭೆಯಲ್ಲಿ ಮುಖ್ಯ ವಿಷಯವಾಗಿ ಚರ್ಚಿಸಬೇಕೆಂದು ಹೇಳಿದ್ದು, ಎಲ್ಲ ಮೂಲಸೌಕರ್ಯಗಳಿಗೆ ಈ ಇಲಾಖೆಗೆ ಸಾಕಷ್ಟು ಅನುದಾನವನ್ನು ಸರ್ಕಾರ ನೀಡುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆ ವಲಯಗಳಿದ್ದು, ಅವುಗಳಿಂದ ಬರುವ ಸಿಎಸ್‌ಆರ್ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ಬಳಸಬೇಕು. ಅವರಿಂದ ಯಾವುದೇ ರೀತಿಯಲ್ಲಾದರೂ ದಾನಪಡೆಯಬೇಕು” ಎಂದರು.
ಡಾ. ಆಕಾಶ್ ಶಂಕರ್ ಮಾತನಾಡಿ, ʼನನ್ನ ಶಾಲೆ-ನನ್ನ ಜವಾಬ್ದಾರಿʼ ಕಾರ್ಯಕ್ರಮದಡಿ ಜಿಲ್ಲೆಯ 719 ಶಾಲೆಗಳಲ್ಲಿ ವಿವಿಧ ಶಾಲೆಗಳು ಸೇರಿ 718 ವಾಟ್ಸ್ಯಾಪ್ ಗುಂಪುಗಳನ್ನು ರಚಿಸಲಾಗಿದೆ. ಅದೇ ರೀತಿಯಾಗಿ ʼನಮ್ಮ ಶಾಲೆ- ನನ್ನ ಕೊಡುಗೆʼ ಕಾರ್ಯಕ್ರಮದಡಿ ಜಿಲ್ಲೆಯ 719 ಶಾಲೆಗಳಲ್ಲಿ 206 ಶಾಲೆಗಳು ಕೊಡುಗೆ ಸ್ವೀಕೃತವಾಗಿವೆ” ಎಂದು ಸಭೆಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಅಂಜನಾದ್ರಿ ದೇವಾಲಯದ ಕಾಮಗಾರಿ ತುರ್ತಾಗಿ ಮುಗಿಯಬೇಕು: ಸಚಿವ ಎಚ್ ಕೆ ಪಾಟೀಲ್ ಸೂಚನೆ
ಪ್ರತಿಕ್ರಿಯಿಸಿದ ಸಚಿವರು, “ಈ ಹಿಂದೆ ಅದೇ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ಶಾಲೆಗಳ ಅಭಿವೃದ್ಧಿಗೆ ದೇಣಿಗೆ ಹಾಗೂ ಕೊಡುಗೆಗಳನ್ನು ಪಡೆಯಬೇಕು” ಎಂದು ಹೇಳಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಬಿ ಉಮಾದೇವಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ ಪಾಲಾಕ್ಷಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮೀ ಕಿರಣ್ ಸೇರಿದಂತೆ ಜಿಲ್ಲೆಯ ಎಲ್ಲಾ ಬಿಇಒ ಅಧಿಕಾರಿಗಳು, ಸಿಆರ್‌ಪಿ, ಬಿಆರ್‌ಪಿ ಅಧಿಕಾರಿಗಳು ಇದ್ದರು.