ಆಲಮಟ್ಟಿ ಜಲಾಶಯದಲ್ಲಿ 519.60 ಮೀಟರ್‌ನಿಂದ 524.256 ಮೀಟರ್‌ಗೆ ನೀರು ಸಂಗ್ರಹಿಸಲು ಗೇಟ್ ಅಳವಡಿಸಬೇಕೆಂದು ಆಗ್ರಹಿಸಿ ಜೂ.30ರಂದು ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಬೃಹತ್ ಹೋರಾಟ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ರೈತ ಸಂಘಟನೆಗಳು ಪ್ರಮುಖರು ಜಂಟಿ ಸುದ್ದಿಗೋಷ್ಠಿ ನಡೆಸಿ, ಆಲಮಟ್ಟಿ ಡ್ಯಾಮ್ ಎತ್ತರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಹೋರಾಟ ಸಮಿತಿ ಮುಖಂಡ ಅರವಿಂದ ಕುಲಕರ್ಣಿ ಹಾಗೂ ವಿಜಯ ಪೂಜಾರಿ ಮಾತನಾಡಿ, “ಆಲಮಟ್ಟಿ ಡ್ಯಾಮ್ ಎತ್ತರಿಸಿದರೆ ಹಿನ್ನೀರಿನಿಂದ ಮಹಾರಾಷ್ಟ್ರದ ಸಾಂಗ್ಲಿ, ಸತಾರಾ, ಮಿರಾಜ್ ಭಾಗದಲ್ಲಿ ಪ್ರವಾಹ ಉಂಟಾಗುತ್ತದೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದು, ಉದ್ದೇಶಪೂರ್ವಕವಾಗಿ ವಿರೋಧಿಸುತ್ತಿದೆ. ಆದರೆ, 2019ನೇ ಸಾಲಿನಲ್ಲಿ ಮಹಾರಾಷ್ಟ್ರದಲ್ಲಿ ಪ್ರವಾಹ ಬಂದಾಗ ಆಲಮಟ್ಟಿ ಡ್ಯಾಂನಲ್ಲಿ 519.60 ಮೀಟರ್‌ಗೆ ನೀರು ನಿಲ್ಲಿಸಿದಾಗ ಹಿನ್ನೀರಿನಿಂದಲೇ ಪ್ರವಾಹ ಉಂಟಾಗಿದೆಯೆಂದು ಬೊಬ್ಬೆ ಹೊಡೆದಿದ್ದರು. ಅದೇ ವೇಳೆ ಮಹಾರಾಷ್ಟ್ರ ಸರ್ಕಾರವೇ ತಜ್ಞರ ಸಮಿತಿಯಿಂದ ಅಧ್ಯಯನ ಮಾಡಿಸಿದ್ದು, ಮಹಾರಾಷ್ಟ್ರದಲ್ಲಿನ ಪ್ರವಾಹಕ್ಕೆ ಆಲಮಟ್ಟಿ ಹಿನ್ನೀರು ಕಾರಣವಲ್ಲವೆಂದು ಸಮಿತಿ ವರದಿ ಸಲ್ಲಿಸಿದೆ. ಆದರೆ ಈಗ ತಕರಾರು ತೆಗೆಯುತ್ತಿದ್ದು, ಅಲ್ಲಿಯ ರೈತರನ್ನು ಎತ್ತಿಕಟ್ಟಿದೆ” ಎಂದು ಆರೋಪಿಸಿದರು.
“ರಾಜ್ಯ ಸರ್ಕಾರವು ಮಹಾರಾಷ್ಟ್ರದ ಕುತಂತ್ರಕ್ಕೆ ಸೊಪ್ಪು ಹಾಕದೆ ಉತ್ತರ ಕರ್ನಾಟಕದ ರೈತರ ಹಿತ ಕಾಪಾಡಲು ನ್ಯಾಯಾಧೀಕರಣ ತೀರ್ಪಿನಂತೆ ಕ್ರಮ ಕೈಗೊಳ್ಳಬೇಕು. ತಕ್ಷಣ ತೀರ್ಪಿನ ಕುರಿತಾಗಿ ಅಂತಿಮ ಅಧಿಸೂಚನೆ ಹೊರಡಿಸಲು ದಿಟ್ಟ ಹೆಜ್ಜೆ ಇಡಬೇಕು” ಎಂದು ಅರವಿಂದ ಕುಲಕರ್ಣಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಗೊಬ್ಬರವನ್ನು ರೈತರಿಗೆ ವಿತರಿಸದೇ ಸ್ವತಃ ಅಧಿಕಾರಿಗಳೇ ಕಳ್ಳತನ ಮಾಡಿದ್ದಾರೆ ರೈತರ ಆರೋಪ
ಇದೇ ಸಂದರ್ಭದಲ್ಲಿ ರೈತ ಮುಖಂಡರು ಆಲಮಟ್ಟಿ ಡ್ಯಾಮ್ ಎತ್ತರದ ಬೇಡಿಕೆ ಆಗುವ ಬೃಹತ್ ಹೋರಾಟದ ಕುರಿತು ಕರಪತ್ರವನ್ನು ಬಿಡುಗಡೆಗೊಳಿಸಿದರು. ರೈತರ ಸಾಲವಾಗಿ ಹೋರಾಟದಲ್ಲಿ ಉತ್ತರ ಕರ್ನಾಟಕದ ಎಲ್ಲ ರೈತಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ಮಠಾಧೀಶರು ಸೇರಿದಂತೆ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಂಕರ ಈರೇಗೌಡರ, ಶಾರದಾ ಕಾಳಮ್ಮನವರ, ಸುಜಾತ ಬಂಡಿವಡ್ಡರ, ಗುಡುಮ ವಾಲಿಕಾರ, ಮಂಜುಳಾ ಅನುಮದ, ನಿಂಗವ್ವ ಸಿಂಗಾನವರ, ಆರ್ ಕೆ ಕಲಬುರಗಿ, ಬಸವರಾಜ ಗೋನಾಳ ಇದ್ದರು.