ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಪೋತ್ನಾಳ ವ್ಯಾಪ್ತಿಯ ಖರಾಬದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಅಕ್ಷರಶಃ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ನಡೆದಾಡಲೂ ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟಿರುವ ಮೈದಾನದಲ್ಲಿ ಆಟವಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಮಕ್ಕಳಿದ್ದಾರೆ.
ಶಾಲೆಯ ಆವರಣದಲ್ಲಿ ನೀರು ಹರಿದು ಕೆಸರು ಮಯವಾಗಿದೆ. ಬಹಳ ವರ್ಷಗಳಿಂದಲೂ ಈ ಸಮಸ್ಯೆಯಿದ್ದು, ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಯಾಗಿದೆ. ವಿದ್ಯಾಭ್ಯಾಸ ಮಾಡುವ ಆವರಣ ಸುಂದರವಾಗಿ ಸ್ವಚ್ಛವಾಗಿರಬೇಕು. ಆದರೆ, ಖರಾಬದಿನ್ನಿ ಶಾಲಾ ಆವರಣ ಮಾತ್ರ ಅಧೋಗತಿಗೆ ತಲುಪಿದೆ.
ನಿರ್ವಹಣೆ ಕೊರತೆಯೇ ಇದಕ್ಕೆ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಇದರೊಂದಿಗೆ ಶಾಲಾ ಮೈದಾನವೂ ಸುರಕ್ಷತೆಯಿಂದ ಕೂಡಿಲ್ಲ. ಆವರಣದಲ್ಲಿ ಎತ್ತ ಕಣ್ಣಾಡಿಸಿದರೂ ಮೈದಾನದ ತುಂಬ ತಗ್ಗು ಗುಂಡಿಗಳೇ ಕಾಣ ಸಿಗುತ್ತವೆ. ಮಳೆಗಾಲದಲ್ಲಂತೂ ಮೈದಾನದ ತುಂಬೆಲ್ಲಾ ನೀರು ತುಂಬಿ, ನೀರಿನಲ್ಲಿ ನಿಂತು ಬೆಳಗಿನ ಪ್ರಾರ್ಥನೆ ಸಲ್ಲಿಸುವ ಪರಿಸ್ಥಿತಿ ಎದುರಾಗುತ್ತದೆ. ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಸುಮಾರು 280 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಶಾಲೆಗೆ ವಿದ್ಯುತ್, ನೀರು ಸೇರಿ ಮೂಲ ಸೌಕರ್ಯಗಳೂ ಸರಿಯಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಗ್ರಾಮದ ನಿವಾಸಿ ಹನುಮಂತ ಮಾತನಾಡಿ, “ಶಾಲೆಯ ಮೈದಾನ ಕೆಸರು ಮೈದಾನವಾಗಿದೆ. ನಿತ್ಯ ಕೆಸರಲ್ಲಿ ಆಟವಾಡುವುದರಿಂದ ಹಲವು ಮಕ್ಕಳಿಗೆ ಜ್ವರ, ಚರ್ಮರೋಗಗಳು ಅಂಟಿಕೊಂಡು ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಅಧಿಕಾರಿಗಳು, ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ವೇಳೆ ಪ್ರತಿಕ್ರಿಯೆ ಕೊಟ್ಟರೂ ಆಶ್ವಾಸನೆಯಲ್ಲೇ ಮುಗಿಸಿಬಿಡುತ್ತಾರೆ. ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮೌನವಾಗಿಬಿಡುತ್ತಾರೆ” ಎಂದು ಆರೋಪಿಸಿದರು.
ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಹಾಗೂ ಗ್ರಾಮದ ನಿವಾಸಿ ಬಸವರಾಜ್ ರೆಡ್ಡಿ ಮಾತನಾಡಿ, “ಸುಮಾರು ವರ್ಷಗಳಿಂದ ಶಾಲೆಯ ಮೈದಾನ ಅಧೋಗತಿಯಲ್ಲಿದೆ. ಇಲ್ಲಿ ಓದುವ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಪೋಷಕರು ದಿನನಿತ್ಯ ಕೂಲಿ ಕೆಲಸ ಮಾಡಿ ʼನಾವು ಶಿಕ್ಷಣದಿಂದ ದೂರವಾಗಿದ್ದೇವೆ, ನಮ್ಮ ಮಕ್ಕಳು ಹೀಗಾಗಬಾರದುʼ ಎಂದು ಶಾಲೆಗೆ ಕಳುಹಿಸುತ್ತಾರೆ. ಆದರೆ ಶಾಲೆಯ ಅವ್ಯವಸ್ಥೆ ಮುಗ್ಧ ಪಾಲಕರ ಕನಸಿಗೆ ಮುಳ್ಳಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಇಂತಹ ಸ್ಥಿತಿಗಳಿಂದಲೇ ರಾಜ್ಯದ ಹಲವು ಸರ್ಕಾರಿ ಶಾಲೆಗಳು ಶೂನ್ಯ ದಾಖಲಾತಿಯಲ್ಲಿವೆ. ಇದಕ್ಕೆ ಹೋಲಿಸಿದರೆ ಖಾಸಗಿ ಶಾಲೆಗಳೇ ಮಕ್ಕಳ ಬೆಳೆವಣಿಗೆಗೆ ಅನುಕೂಲಕರ ವಾತಾವರಣ ಸೃಷ್ಟಿಸಬಲ್ಲವೇನೋ ಎನಿಸುತ್ತದೆ. ಸರ್ಕಾರ ಎಚ್ಚೆತ್ತುಕೊಂಡು ಸರ್ಕಾರಿ ಶಾಲೆಯ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ಸಾವಿರಾರು ಬಡ ಮಕ್ಕಳು ಗುನಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಾರೆ” ಎಂದು ತಿಳಿಸಿದರು.

ಬೆಳಗು ಸಂಸ್ಥೆಯ ಸಂಸ್ಥಾಪಕ ಶರಣು ಮದ್ದಮಗುಡ್ಡಿ ಮಾತನಾಡಿ, “ಕೆಸರಲ್ಲಿ ಶಾಲೆಯಿದೆಯೋ, ಶಾಲೆಯಲ್ಲಿ ಕೆಸರಿದೆಯೋ ಎಂದು ಊಹೆ ಮಾಡೋಕೆ ಗೊತ್ತಾಗುತ್ತಿಲ್ಲ. ಆವರಣ ನೋಡಿದರೆ ಮಕ್ಕಳು ನೀರಿನಲ್ಲಿ ಈಜಿ ತರಗತಿ ಸೇರುವಂತೆ ಕಾಣುತ್ತಿದೆ. ಆದಷ್ಟು ಬೇಗ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ನೀರು ಬೇರೆ ಕಡೆ ಹೋಗುವ ರೀತಿ ವ್ಯವಸ್ಥೆ ಮಾಡಬೇಕು” ಎಂದು ಆಗ್ರಹಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಮಾಧುರಿ ಮಾತನಾಡಿ, “ಶಾಲೆಯ ಸಮಸ್ಯೆಗಳ ಕುರಿತು ಕಳೆದ ವರ್ಷದಿಂದ ಸಾಕಷ್ಟು ಬಾರಿ ಗ್ರಾಮ ಪಂಚಾಯತಿಗೆ ತಿಳಿಸಲಾಗಿದೆ. ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ. ಮನವಿ ಮಾಡಿದ ಪ್ರತಿ ಬಾರಿಯೂ, ʼಮುಂದೆ ಸರಿ ಮಾಡೋಣʼ ಎಂಬ ಆಶ್ವಾಸನೆಯ ಮಾತುಗಳನ್ನೇ ಹೇಳುತ್ತಿದ್ದಾರೆ. ಮಳೆ ಬಂದ ನಂತರದ ಪರಿಸ್ಥಿತಿಯನ್ನು ಛಾಯಾಚಿತ್ರ ಸಮೇತ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಬಾರಿಯಾದರೂ ಮಾತು ಕಾರ್ಯರೂಪಕ್ಕೆ ಬರಬೇಕಾಗಿದೆ, ಬರುವ ನಿರೀಕ್ಷೆಯಿದೆ” ಎಂದರು.

ಮಕ್ಕಳ ಭವಿಷ್ಯ ರೂಪಿಸಬೇಕಾದ, ಬಡ ಪೋಷಕರ ಒಂದೇ ಭರವಸೆಯಾದ ಸರ್ಕಾರಿ ಶಾಲೆಗಳೇ ಹೀಗೆ ಮೂಲ ಸೌಕರ್ಯಗಳಿಲ್ಲದೆ ಬಳಲುತ್ತಿದ್ದರೆ, ಮಕ್ಕಳ ಶೈಕ್ಷಣಿಕ ಚಟುವಟಿಕೆಯ ಕತೆಯೇನಾಗಬೇಕು? ಈಗಾಗಲೇ ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆಗಳ ಮೇಲೆ ಸವಾರಿ ಮಾಡುತ್ತಿವೆ. ಹೀಗಿರುವಾಗ ಸರ್ಕಾರಿ ಶಾಲೆಗಳು ಮತ್ತಷ್ಟು ಅಧೋಗತಿಗೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿ ಬಡ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗುವುದಂತೂ ಖಚಿತ. ಸರ್ಕಾರ ಕೂಡಲೇ ಎಚ್ಚೆತ್ತು ಖರಾಬದಿನ್ನಿ ಶಾಲೆಯ ಮೈದಾನ ಸೇರಿದಂತೆ ಮೂಲ ಸೌಕರ್ಯಗಳನ್ನು ಸುಧಾರಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಆಟ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಕ್ಕಳನ್ನು ಪ್ರೇರೇಪಿಸಲು ಪೂರಕ ವಾತಾವರಣ ಕಲ್ಪಿಸುವತ್ತ ಕೆಲಸ ಮಾಡಬೇಕಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್