ಬೈಕ್ ಟ್ಯಾಕ್ಸಿಗಳನ್ನು ಅವಲಂಬಿಸಿದ್ದ ಜನರಲ್ಲಿ ಅಸಂಘಟಿತ ವಲಯದವರು ಪ್ರಮುಖವಾಗಿದ್ದರು. ನಿರುದ್ಯೋಗಿಗಳಿಗೆ, ಈ ಕೆಲಸವು ತಕ್ಷಣದ ಆದಾಯದ ಮೂಲವಾಗಿತ್ತು. ವಿದ್ಯಾರ್ಥಿಗಳಿಗೆ, ಇದು ತಮ್ಮ ಶಿಕ್ಷಣದ ಜೊತೆಗೆ ಕೆಲಸ ಮಾಡಲು ಸುಲಭವಾದ ಆಯ್ಕೆಯಾಗಿತ್ತು... ಸರ್ಕಾರ ಮತ್ತೊಮ್ಮೆ ಯೋಚಿಸುವುದೊಳಿತು.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಮೇಲಿನ ನಿಷೇಧವು ಜೂನ್ 16, 2025 ರಿಂದ ಜಾರಿಗೆ ಬಂದಿದ್ದು, ಇದು ರಾಜ್ಯದ ಆರ್ಥಿಕ, ಸಾಮಾಜಿಕ ಮತ್ತು ಸಾರಿಗೆ ವ್ಯವಸ್ಥೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಆಧರಿಸಿ ಈ ನಿಷೇಧವನ್ನು ಜಾರಿಗೊಳಿಸಲಾಗಿದೆ, ಇದು ರಾಜ್ಯ ಸರ್ಕಾರವು ಬೈಕ್ ಟ್ಯಾಕ್ಸಿಗಳಿಗೆ ಸ್ಪಷ್ಟ ಕಾನೂನು ಚೌಕಟ್ಟನ್ನು ರೂಪಿಸದ ಹಿನ್ನೆಲೆಯಲ್ಲಿ ತೆಗೆದುಕೊಂಡ ನಿರ್ಧಾರವಾಗಿದೆ. ನಿಷೇಧದಿಂದ ಗಿಗ್ ಕಾರ್ಮಿಕರು, ಪ್ರಯಾಣಿಕರು, ಹೂಡಿಕೆ ಮಾಡಿದ ಕಂಪನಿಗಳು ಮತ್ತು ಸಂಬಂಧಿತ ಅಸಂಘಟಿತ ವಲಯದ ಸಾವಿರಾರು ಮಂದಿಗೆ ತೊಂದರೆಯನ್ನುಂಟು ಮಾಡಿದೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ಇಂದು ಬೈಕ್ ಟ್ಯಾಕ್ಸಿ ಚಾಲನೆ ಮಾಡಿದ ನೂರಕ್ಕೂ ಅಧಿಕ ಬೈಕ್‌ಗಳನ್ನು ಸಾರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದಕ್ಕೆ ಸಮರ್ಥನೆಯನ್ನು ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ”ಕೊರಿಯರ್, ಪಾರ್ಸೆಲ್ ಹೆಸರಿನಲ್ಲಿ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿರುವ ಕಾರಣಕ್ಕೆ ನಮ್ಮ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ” ಎಂದಿದ್ದಾರೆ. ”ಸಾರಿಗೆ ನಿಯಮಗಳ ಬಗ್ಗೆ ಮಾತನಾಡುತ್ತಿರುವ ಸಚಿವರು ನಮ್ಮ ಜೀವನ ವಿರ್ವಹಣೆಯ ಬಗ್ಗೆ ಮಾತನಾಡುತ್ತಿಲ್ಲ” ಎಂದು ಬೈಕ್ ಟ್ಯಾಕ್ಸಿ ಚಾಲಕರು ನೋವು ತೋಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನಂತಹ ನಗರದಲ್ಲಿ, ಬೈಕ್ ಟ್ಯಾಕ್ಸಿಗಳು ಕಡಿಮೆ ವೆಚ್ಚದ, ತ್ವರಿತ ಮತ್ತು ಸುಲಭವಾಗಿ ಲಭ್ಯವಿರುವ ಸಾರಿಗೆ ಸೌಲಭ್ಯವಾಗಿತ್ತು. ಈ ಸೇವೆಯ ಮೂಲಕ ಜೀವನ ಹಾಗೂ ಕುಟುಂಬದ ನಿರ್ವಹಣೆ ಮಾಡಿಕೊಂಡಿದ್ದ ಚಾಲಕರಿಗೆ ಈಗ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಬೆಂಗಳೂರು ನಗರ ಒಂದರಲ್ಲೆ ಸುಮಾರು 1 ಲಕ್ಷಕ್ಕೂ ಅಧಿಕ ಗಿಗ್ ಕಾರ್ಮಿಕರು ಪೂರ್ಣಕಾಲಿಕ ಹಾಗೂ ಅರೆಕಾಲಿಕ ಬೈಕ್ ಟ್ಯಾಕ್ಸಿ ಸೇವೆಯ ಮೇಲೆ ಅವಲಂಬಿತರಾಗಿದ್ದರು. ಈ ಕಾರ್ಮಿಕರು ದಿನಕ್ಕೆ ಸರಾಸರಿ 10-12 ಗಂಟೆ ಕೆಲಸ ಮಾಡಿ, ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಳ್ಳುತ್ತಿದ್ದರು. ಈಗ ಈ ಸೇವೆ ಸ್ಥಗಿತಗೊಂಡಿರುವುದರಿಂದ, ಅವರಿಗೆ ಪರ್ಯಾಯ ಉದ್ಯೋಗಗಳನ್ನು ಹುಡುಕುವುದು ತುರ್ತು ಅಗತ್ಯವಾಗಿದೆ. ಆದರೆ, ಕಡಿಮೆ ಶಿಕ್ಷಣ, ವೃತ್ತಿಪರ ತರಬೇತಿಯ ಕೊರತೆ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಇಂತಹ ಅವಕಾಶಗಳು ಸುಲಭವಾಗಿ ದೊರೆಯುವುದಿಲ್ಲ.
ಗಿಗ್ ಕಾರ್ಮಿಕರ ಮೇಲಿನ ಪರಿಣಾಮವು ಕೇವಲ ಆರ್ಥಿಕವಾಗಿ ಸೀಮಿತವಾಗಿಲ್ಲ. ಈ ಕಾರ್ಮಿಕರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಬಂದವರಾಗಿದ್ದು, ಕುಟುಂಬದ ಏಕೈಕ ಆದಾಯದ ಮೂಲವಾಗಿದ್ದರು. ಬೈಕ್ ಟ್ಯಾಕ್ಸಿ ಚಾಲಕರಿಗೆ ಈ ಉದ್ಯೋಗವು ತಮ್ಮ ಸಮಯವನ್ನು ಸ್ವತಂತ್ರವಾಗಿ ನಿರ್ವಹಿಸಿಕೊಳ್ಳಲು, ಕಡಿಮೆ ಹೂಡಿಕೆಯೊಂದಿಗೆ (ಕೇವಲ ಒಂದು ಬೈಕ್ ಮತ್ತು ಸ್ಮಾರ್ಟ್‌ಫೋನ್) ಆದಾಯ ಗಳಿಸಲು ಅವಕಾಶ ನೀಡಿತ್ತು. ಈಗ ಈ ಅವಕಾಶ ಕಸಿದುಕೊಳ್ಳಲಾಗಿದ್ದು, ಅವರ ಕುಟುಂಬದ ಜೀವನಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರ ಜೊತೆಗೆ, ಈ ಕಾರ್ಮಿಕರಲ್ಲಿ ಕೆಲವರು ತಮ್ಮ ಬೈಕ್ ಖರೀದಿಗೆ ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಂಡಿದ್ದು, ಆದಾಯವಿಲ್ಲದೆ ಸಾಲದ ಕಂತುಗಳನ್ನು ಪಾವತಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲವೂ ಚಾಲಕರಿಗೆ ಮಾನಸಿಕ ಒತ್ತಡ ಮತ್ತು ಆರ್ಥಿಕ ಅಸ್ಥಿರತೆಗೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಮೃತದೇಹ ಪತ್ತೆ ಹಚ್ಚಲು ಡಿಎನ್ಎ ಪ್ರೊಫೈಲಿಂಗ್: ಹಾಗೆಂದರೇನು, ಏನಿದರ ಮಹತ್ವ?
ಬೈಕ್ ಟ್ಯಾಕ್ಸಿಗಳ ಮೇಲಿನ ಅವಲಂಬನೆಯು ಕೇವಲ ಚಾಲಕರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಈ ಸೇವೆಯನ್ನು ಪ್ರಯಾಣಿಕರೂ ವ್ಯಾಪಕವಾಗಿ ಬಳಸುತ್ತಿದ್ದರು. ಬೆಂಗಳೂರಿನಂತಹ ದಟ್ಟ ಜನಸಂಖ್ಯೆಯ ನಗರದಲ್ಲಿ, ಟ್ರಾಫಿಕ್ ಜಾಮ್‌ನಿಂದ ಕೂಡಿದ ರಸ್ತೆಗಳಲ್ಲಿ ಬೈಕ್ ಟ್ಯಾಕ್ಸಿಗಳು ತ್ವರಿತ ಮತ್ತು ಕೈಗೆಟುಕುವ ಸಾರಿಗೆ ಆಯ್ಕೆಯಾಗಿದ್ದವು. ಈ ಸೇವೆಯನ್ನು ವಿದ್ಯಾರ್ಥಿಗಳು, ಕಚೇರಿ ಉದ್ಯೋಗಿಗಳು, ಸಣ್ಣ ವ್ಯಾಪಾರಿಗಳು ಮತ್ತು ದಿನಗೂಲಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ಜನರು ಬಳಸುತ್ತಿದ್ದರು. ವಿದ್ಯಾರ್ಥಿಗಳಿಗೆ, ತಮ್ಮ ಕಾಲೇಜುಗಳಿಗೆ ತೆರಳಲು ಕಡಿಮೆ ವೆಚ್ಚದ ಆಯ್ಕೆಯಾಗಿತ್ತು. ಉದ್ಯೋಗಿಗಳಿಗೆ, ಕಚೇರಿಗೆ ತಡವಾಗದಂತೆ ತಲುಪಲು ಇದು ಸಹಾಯಕವಾಗಿತ್ತು. ಈಗ ಈ ಸೇವೆ ಇಲ್ಲದಿರುವುದರಿಂದ, ಪ್ರಯಾಣಿಕರು ಆಟೋರಿಕ್ಷಾ, ಕ್ಯಾಬ್‌ಗಳು ಅಥವಾ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಬೇಕಾಗಿದೆ, ಇವು ಹೆಚ್ಚು ವೆಚ್ಚದಾಯಕವಾಗಿರುವುದರ ಜೊತೆಗೆ ಸಮಯಕ್ಕೆ ಸರಿಯಾಗಿ ತಲುಪಲು ಆಗದಿರುವುದರಿಂದ ತೊಂದರೆ ಅನುಭವಿಸಬೇಕಾಗಿದೆ.
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಮೇಲೆ ಅವಲಂಬಿತರಾದವರ ಸಂಖ್ಯೆಯನ್ನು ಅಂದಾಜಿಸುವುದು ಕಷ್ಟಕರವಾದರೂ, ಬೆಂಗಳೂರಿನಲ್ಲಿ ಸುಮಾರು 1 ಲಕ್ಷಕ್ಕಿಂತ ಅಧಿಕ ಚಾಲಕರು ಈ ಸೇವೆಯ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ರಾಜ್ಯದ ಇತರ ನಗರಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡದಂತಹ ಕಡೆಗಳಲ್ಲೂ ಈ ಸೇವೆ ಜನಪ್ರಿಯವಾಗಿತ್ತು. ಆದರೆ ಬೆಂಗಳೂರಿನಷ್ಟು ವ್ಯಾಪಕವಾಗಿರಲಿಲ್ಲ. ಪ್ರಯಾಣಿಕರ ಸಂಖ್ಯೆಯನ್ನು ಅಂದಾಜಿಸಲು ನಿಖರವಾದ ಅಂಕಿಅಂಶಗಳು ಲಭ್ಯವಿಲ್ಲ. ಆದರೆ ರಾಪಿಡೊ, ಒಲಾ ಮತ್ತು ಉಬರ್‌ನಂತಹ ಕಂಪನಿಗಳು ದಿನಕ್ಕೆ ಲಕ್ಷಾಂತರ ಪ್ರಯಾಣಗಳನ್ನು ನಿರ್ವಹಿಸುತ್ತಿದ್ದವು. ಈ ಸೇವೆಯಿಂದ ದಿನನಿತ್ಯ ಸಾವಿರಾರು ಜನರು ಕಡಿಮೆ ದೂರ ಮಾತ್ರವಲ್ಲದೆ, ದೂರದ ಪ್ರಯಾಣದ ಪ್ರಯೋಜನ ಪಡೆಯುತ್ತಿದ್ದರು.

ಓಲಾ, ಉಬರ್ ಮತ್ತು ರಾಪಿಡೊ ಕಂಪನಿಗಳು ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನಿರ್ವಹಿಸುತ್ತಿದ್ದವು. ಮತ್ತು ಈ ಸೇವೆಯಿಂದ ಗಣನೀಯ ಆದಾಯವನ್ನು ಗಳಿಸುತ್ತಿದ್ದವು. ಈ ಕಂಪನಿಗಳಿಗೆ ಈಗ ತಮ್ಮ ಬೈಕ್ ಟ್ಯಾಕ್ಸಿ ವಿಭಾಗವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕಾಗಿದ್ದು, ಇದರಿಂದ ಆರ್ಥಿಕ ನಷ್ಟ ಉಂಟಾಗಿದೆ. ಈ ಕಂಪನಿಗಳು ತಮ್ಮ ಚಾಲಕರಿಗೆ ತರಬೇತಿ, ತಾಂತ್ರಿಕ ಬೆಂಬಲ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿದ್ದವು. ಆದರೆ ಈಗ ಈ ಸೌಲಭ್ಯಗಳನ್ನು ರದ್ದು ಮಾಡಬೇಕಾಗಿದೆ. ಇದರ ಜೊತೆಗೆ, ಈ ಕಂಪನಿಗಳ ಸಾಫ್ಟ್‌ವೇರ್ ಡೆವಲಪ್‌ಮೆಂಟ್, ಮಾರ್ಕೆಟಿಂಗ್ ಮತ್ತು ಕಸ್ಟಮರ್ ಸಪೋರ್ಟ್ ತಂಡಗಳಿಗೂ ನಿಷೇಧದಿಂದ ಕೆಲಸದ ಸವಾಲು ಎದುರಾಗಿದೆ. ಅವರೆಲ್ಲರೂ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಬೈಕ್ ಟ್ಯಾಕ್ಸಿ ನಿಷೇಧದಿಂದ ಆಗುವ ಆರ್ಥಿಕ ನಷ್ಟವನ್ನು ನಿಖರವಾಗಿ ಅಂದಾಜಿಸಲು ಕಷ್ಟವಾದರೂ, ಇದು ಕೋಟ್ಯಂತರ ರೂಪಾಯಿಗಳಷ್ಟಿರಬಹುದು ಎಂದು ತಿಳಿಯಲಾಗಿದೆ. ಗಿಗ್ ಕಾರ್ಮಿಕರಿಗೆ ಆದಾಯದ ನಷ್ಟ, ಕಂಪನಿಗಳಿಗೆ ಆದಾಯದ ಕಡಿತ, ಮತ್ತು ಪ್ರಯಾಣಿಕರಿಗೆ ಹೆಚ್ಚಿನ ವೆಚ್ಚದ ಸಾರಿಗೆ ಆಯ್ಕೆಗಳಿಗೆ ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಆಗುವ ನಷ್ಟವನ್ನು ಒಟ್ಟುಗೂಡಿಸಿದರೆ, ರಾಜ್ಯದ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದು. ಇದರ ಜೊತೆಗೆ, ಬೈಕ್ ಟ್ಯಾಕ್ಸಿಗಳು ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಇಂಧನ ಬಳಕೆಯನ್ನು ತಗ್ಗಿಸಲು ಸಹಾಯ ಮಾಡುತ್ತಿದ್ದವು, ಇದೀಗ ಪ್ರಯಾಣಿಕರು ಸಾರಿಗೆ, ಆಟೋ, ಕ್ಯಾಬ್, ಮುಂತಾದ ಸಾರಿಗೆಗಳನ್ನು ಅವಲಂಬಿಸಬೇಕಿರುವುದರಿಂದ ಸಂಚಾರ ದಟ್ಟಣೆ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಬೈಕ್ ಟ್ಯಾಕ್ಸಿಗಳನ್ನು ಅವಲಂಬಿಸಿದ್ದ ಜನರಲ್ಲಿ ಅಸಂಘಟಿತ ವಲಯದವರು ಪ್ರಮುಖವಾಗಿದ್ದರು. ಇವರಲ್ಲಿ ನಿರುದ್ಯೋಗಿಗಳು, ಅರೆಕಾಲಿಕ ಉದ್ಯೋಗಿಗಳು, ವಿದ್ಯಾರ್ಥಿಗಳು, ಗ್ರಾಮೀಣ ವಲಸಿಗರು ಮತ್ತು ಕಡಿಮೆ ಆದಾಯದ ಕುಟುಂಬಗಳ ಸದಸ್ಯರು ಸೇರಿದ್ದರು. ನಿರುದ್ಯೋಗಿಗಳಿಗೆ, ಈ ಕೆಲಸವು ತಕ್ಷಣದ ಆದಾಯದ ಮೂಲವಾಗಿತ್ತು, ಯಾವುದೇ ದೀರ್ಘಕಾಲೀನ ಒಪ್ಪಂದ ಅಥವಾ ತರಬೇತಿಯ ಅಗತ್ಯವಿಲ್ಲದೆ. ವಿದ್ಯಾರ್ಥಿಗಳಿಗೆ, ಇದು ತಮ್ಮ ಶಿಕ್ಷಣದ ಜೊತೆಗೆ ಕೆಲಸ ಮಾಡಲು ಸುಲಭವಾದ ಆಯ್ಕೆಯಾಗಿತ್ತು. ಗ್ರಾಮೀಣ ವಲಸಿಗರಿಗೆ, ಈ ಕೆಲಸವು ನಗರದಲ್ಲಿ ಜೀವನ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಸ್ಥಿರತೆಯನ್ನು ಒದಗಿಸಿತ್ತು. ಈಗ ಈ ಎಲ್ಲ ವರ್ಗದ ಜನರಿಗೆ ಪರ್ಯಾಯ ಉದ್ಯೋಗ ಹುಡುಕುವುದು ದೊಡ್ಡ ಸವಾಲಾಗಿದೆ, ಏಕೆಂದರೆ ಅಸಂಘಟಿತ ವಲಯದಲ್ಲಿ ಕೆಲಸದ ಅವಕಾಶಗಳು ಸೀಮಿತವಾಗಿವೆ.
ಕರ್ನಾಟಕ ಸರ್ಕಾರವು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೆಲವು ನಿಯಮಗಳನ್ನು ರೂಪಿಸಬೇಕಾಗಿದೆ. ಮೊದಲಿಗೆ, ಬೈಕ್ ಟ್ಯಾಕ್ಸಿಗಳಿಗೆ ಸ್ಪಷ್ಟ ಕಾನೂನು ಚೌಕಟ್ಟನ್ನು ರೂಪಿಸಬೇಕು, ಇದರಲ್ಲಿ ಚಾಲಕರಿಗೆ ಪರವಾನಗಿ, ವಾಹನದ ಸುರಕ್ಷತೆ ಮತ್ತು ಗ್ರಾಹಕರ ರಕ್ಷಣೆಗೆ ಸಂಬಂಧಿಸಿದ ನಿಯಮಗಳು ಇರಬೇಕು. ಎಂಟು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಲಾಗಿರುವುದರಿಂದ, ಕರ್ನಾಟಕವೂ ಇದೇ ಮಾದರಿಯನ್ನು ಅನುಸರಿಸಬಹುದು. ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಸಲುವಾಗಿ ನಿಯಮ ರೂಪಿಸಿರುವ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ಚಾಲಕರಿಗೂ ಮಾನದಂಡ ತರಬೇಕಿದೆ. ಹಾಗೆಯೇ ಆರೋಗ್ಯ ವಿಮೆ, ಪಿಂಚಣಿ ಯೋಜನೆ ಮತ್ತು ಆರ್ಥಿಕ ಸಹಾಯ, ಚಾಲಕರಿಗೆ ಪರ್ಯಾಯ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಬೇಕಿದೆ.

ಗಿಗ್ ಕಾರ್ಮಿಕರಿಗೆ ಸಂಬಂಧಿಸಿದಂತೆ, ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಗಿಗ್ ಆರ್ಥಿಕತೆಗೆ ತಕ್ಕಂತೆ ಪರಿಷ್ಕರಿಸಬೇಕಿದೆ. ಈ ಕಾರ್ಮಿಕರಿಗೆ ಕನಿಷ್ಠ ವೇತನ, ಕೆಲಸದ ಸುರಕ್ಷತೆ ಮತ್ತು ದೂರು ಪರಿಹಾರ ವ್ಯವಸ್ಥೆಯನ್ನು ಒದಗಿಸುವ ನಿಯಮಗಳು ಬೇಕಾಗಿವೆ. ಇದರ ಜೊತೆಗೆ, ಕಂಪನಿಗಳಾದ ಓಲಾ, ಉಬರ್, ರ್‍ಯಾಪಿಡೊ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ, ಚಾಲಕರ ಹಿತಾಸಕ್ತಿಗಳನ್ನು ರಕ್ಷಿಸುವ ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ಪ್ರಯಾಣಿಕರಿಗೆ ಸಂಬಂಧಿಸಿದಂತೆ, ಸರ್ಕಾರವು ಸಾರಿಗೆ ದರಗಳನ್ನು ನಿಯಂತ್ರಿಸುವ ಮತ್ತು ಸುರಕ್ಷಿತ ಸಾರಿಗೆ ಒದಗಿಸುವ ನೀತಿಗಳನ್ನು ರೂಪಿಸಬೇಕು. ಉದಾಹರಣೆಗೆ, ಬೈಕ್ ಟ್ಯಾಕ್ಸಿಗಳಿಗೆ ಜಿಪಿಎಸ್ ಟ್ರ್ಯಾಕಿಂಗ್, ಚಾಲಕರ ಗುರುತಿನ ಪರಿಶೀಲನೆ ಮತ್ತು ತುರ್ತು ಸಹಾಯ ಗುಂಡಿಯಂತಹ ಸೌಲಭ್ಯಗಳನ್ನು ಕಡ್ಡಾಯಗೊಳಿಸಬೇಕಿದೆ.
ಈ ನಿಷೇಧವು ಕರ್ನಾಟಕದ ಗಿಗ್ ಆರ್ಥಿಕತೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು. ಗಿಗ್ ಆರ್ಥಿಕತೆಯು ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಆದರೆ ಈ ರೀತಿಯ ನಿಷೇಧಗಳು ಈ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾಗಬಹುದು. ಸರ್ಕಾರವು ಈ ಸಮಸ್ಯೆಗೆ ಸಮತೋಲನದ ಪರಿಹಾರವನ್ನು ಕಂಡುಕೊಳ್ಳದಿದ್ದರೆ, ಗಿಗ್ ಕಾರ್ಮಿಕರು ಮತ್ತು ಪ್ರಯಾಣಿಕರಿಗೆ ತೊಂದರೆಯ ಜೊತೆಗೆ, ರಾಜ್ಯದ ಆರ್ಥಿಕತೆ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ, ಎಲ್ಲ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ, ಸುಸ್ಥಿರ ಮತ್ತು ಸಮಗ್ರ ನೀತಿಯನ್ನು ರೂಪಿಸುವುದು ಸರ್ಕಾರದ ಮುಂದಿರುವ ತುರ್ತು ಕರ್ತವ್ಯವಾಗಿದೆ.
ಸರ್ಕಾರ ನಮ್ಮನ್ನು ಕಡೆಗಣಿಸಿದೆ
ಬ್ಯಾಕ್ ಟ್ಯಾಕ್ಸಿ ಮೂಲಕ ಜೀವನ ನಿರ್ವಹಿಸುತ್ತಿದ್ದ ಸಾವಿರಾರು ಜನರನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ನಾವು ಯಾರ ಬೆಂಬಲವಿಲ್ಲದೆ ನಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದೆವು. ಈಗ ಹೈಕೋರ್ಟ್ ತೀರ್ಪು ನಮ್ಮನ್ನೆಲ್ಲ ಮತ್ತೆ ನಿರುದ್ಯೋಗಿಗಳನ್ನಾಗಿ ಮಾಡಿದೆ ಎಂದು ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘಟನೆಯ ಮುಖಂಡರಾದ ಮಂಜುನಾಥ್ ನೋವು ತೋಡಿಕೊಂಡಿದ್ದಾರೆ.
‘ಈದಿನ ಡಾಟ್ ಕಾಂ’ನೊಂದಿಗೆ ಮಾತನಾಡಿದ ಅವರು, ”ನಾವು ಈ ಮೊದಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೂ ಮನವಿ ಮಾಡಿದ್ದೇವೆ. ಹೈಕೋರ್ಟ್ ಕೂಡ ಬೈಕ್ ಟ್ಯಾಕ್ಸಿ ಚಾಲಕರಿಗೆ ಕಾನೂನು ಚೌಕಟ್ಟಿನಲ್ಲಿ ಎರಡು ತಿಂಗಳುಗಳಲ್ಲಿ ಮಾರ್ಗಸೂಚಿಗಳನ್ನು ನೀಡಿ ಎಂದು ಸರ್ಕಾರಕ್ಕೆ ಮೊದಲೇ ಸೂಚನೆ ನೀಡಿತ್ತು. ಆದರೆ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ಸರ್ಕಾರ ಈ ಕ್ರಮ ಕೈಗೊಂಡಿದ್ದರೆ ನಿಷೇಧ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ನಾವು ಜಿಎಸ್‌ಟಿ ಹೊರತುಪಡಿಸಿ ಸರ್ಕಾರಕ್ಕೆ ಬೇರೆ ತೆರಿಗೆ ಪಾವತಿಸುತ್ತಿಲ್ಲ. ತೆರಿಗೆ ವಿಧಿಸಿದರೂ ನಾವು ಪಾವತಿಸಲು ಸಿದ್ದರಿದ್ದೇವೆ. ಆದರೆ ಸರ್ಕಾರಕ್ಕೆ ನಮ್ಮ ಬಗ್ಗೆ ಕಾಳಜಿಯಿಲ್ಲ.”

”ಆಳುವವರಿಗೆ ನಮ್ಮ ಬಡತನ ಕಾಣಿಸುತ್ತಿಲ್ಲ. ಸರ್ಕಾರ ಮಾರ್ಗಸೂಚಿ ವಿಧಿಸಿದರೆ ನಾವು ಅದಕ್ಕೂ ನಾವು ತಯಾರಿದ್ದೇವೆ. ಬೈಕ್ ಟ್ಯಾಕ್ಸಿಯಿಂದ ಕಳೆದ ಹತ್ತು ವರ್ಷದಿಂದ ನಿರುದ್ಯೋಗ ಕೂಡ ಕಡಿಮೆಯಾಗಿದೆ. ಸಾವಿರಾರು ಮಂದಿ ತಮ್ಮ ಜೀವನ ಕಟ್ಟಿಕೊಂಡಿದ್ದರು. ಅವಿದ್ಯಾವಂತರು, ಮಹಿಳೆಯರು ಉದ್ಯೋಗ ಪಡೆದುಕೊಂಡಿದ್ದರು. ತಿಂಗಳಿಗೆ 15, 20 ಸಾವಿರ ರೂಪಾಯಿ ದುಡಿಯುತ್ತಿದ್ದ ಬಡವರು, ಮಧ್ಯಮ ವರ್ಗದವರಿಗೂ ಕೈಗೆಟಕುವ, ಬೇಗ ತಲುಪುವ ಬೈಕ್ ಟ್ಯಾಕ್ಸಿ ಸೇವೆ ಆರ್ಥಿಕವಾಗಿ ವರದಾನವಾಗಿತ್ತು. ಅವರಿಗೂ ಈಗ ಕಷ್ಟವಾಗಿದೆ. ಇವೆಲ್ಲ ತೊಂದರೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಲು ಶೀಘ್ರದಲ್ಲೇ ಬೈಕ್ ಟ್ಯಾಕ್ಸಿ ಚಾಲಕರು ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ” ಎಂದು ಮಂಜುನಾಥ್ ಹೇಳಿದರು.
ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ
My name is Gangadhar hn I am ready to strike
I’m also supported to you
Definitely government has to think for this ban and make rules of bike taxi