“ಜನರು ಆಸ್ಪತ್ರೆಗಳು ಹಾಗೂ ನ್ಯಾಯಾಲಯಗಳಿಗೆ ತಮ್ಮ ನೋವು, ಸಮಸ್ಯೆಗಳ ನಿವಾರಣೆಗೆಂದೇ ಬರುತ್ತಾರೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯವಾದಿಗಳು ಮತ್ತು ನ್ಯಾಯಾಧೀಶರು ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ. ಹೀಗಾಗಿ ನ್ಯಾಯವಾದಿಗಳು ಸಂವಿಧಾನದ ರಾಯಭಾರಿಗಳು. ನಾಗರೀಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಯೋಧರು” ಎಂದು ದಾವಣಗೆರೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ವಿಶ್ಲೇಷಿಸಿದರು.

ದಾವಣಗೆರೆ ಜಿಲ್ಲಾ ವಕೀಲರ ಸಂಘವು ದಾವಣಗೆರೆ ನ್ಯಾಯಾಲಯ ಆವರಣದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಆಯೋಜಿಸಿದ್ದ “ಪ್ರಜಾಪ್ರಭುತ್ವದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ” ಉಪನ್ಯಾಸ ಮತ್ತು ಸಂಜೆಗೊಂದು ನುಡಿ ಚಿಂತನ-365 ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಜನತೆ ಗೌರವದಿಂದ ಘನತೆಯಿಂದ ಬಾಳಬೇಕು ಎಂಬುದು ನಮ್ಮ ಸಂವಿಧಾನದ ಸದಾಶಯ. ಸದೃಢವಾದ ನ್ಯಾಯಾಂಗ ವ್ಯವಸ್ಥೆಯ ಮುಂದೆ ಶಕ್ತಿಯಿರುವವನ ನಿಲುವೇ ಸರಿ ಎಂಬುದು ನಡೆಯುವುದಿಲ್ಲ. ಜನರ ವಿಶ್ವಾಸವೇ ನ್ಯಾಯಾಂಗದ ಬಲವಾದ ಶಕ್ತಿ” ಎಂದು ಅವರು ಪ್ರತಿಪಾದಿಸಿದರು.

“ಕಾನೂನಿನ ಒಟ್ಟಾರೆ ಆಶಯವನ್ನು ಅರ್ಥ ಮಾಡಿಕೊಂಡು ನ್ಯಾಯ ನಿರ್ಣಯ ಮಾಡಬೇಕೇ ವಿನಃ ತಾಂತ್ರಿಕ ಕಾರಣಗಳಿಂದ ನ್ಯಾಯ ನಿರಾಕರಿಸುವುದು ಸಲ್ಲದು. ಧರ್ಮದಿಂದ ದಯೆ, ಮನುಷ್ಯನಿಂದ ಮಾನವೀಯತೆ ದೂರವಾದರೆ ತೀರ್ಪು ಅರ್ಥ ಕಳೆದುಕೊಳ್ಳುತ್ತದೆ” ಎಂದು ತಾವು ನೀಡಿದ ಒಂದು ತೀರ್ಪನ್ನು ಉದಾಹರಿಸಿ ವಿಷದೀಕರಿಸಿದರು.
“ಯುವ ವಕೀಲರಲ್ಲಿ ಪ್ರತಿಭೆಯಿರುತ್ತದೆ. ನ್ಯಾಯಾಧೀಶರು ಅವರಿಗೆ ಅವಕಾಶ ನೀಡಿ, ಸಮಾಧಾನದಿಂದ ಅವರ ವಾದವನ್ನು ಆಲಿಸಿ, ಪ್ರೋತ್ಸಾಹಿಸಬೇಕೆಂದು ನ್ಯಾಯಾಧೀಶರಿಗೆ ಕಿವಿಮಾತು ಹೇಳಿದರು. ವಕೀಲರು ಬಡವರಿಗೆ ಮಾನವೀಯ ನೆಲೆಯಲ್ಲಿ ಕೇಸು ನಡೆಸಿಕೊಟ್ಟಾಗ ಅವರು ಮಾಡುವ ಆಶೀರ್ವಾದ, ಪ್ರಾರ್ಥನೆ ವಕೀಲರನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ ಎನ್ನಲು ನನ್ನ ಬದುಕೇ ಸಾಕ್ಷಿ. ವಕೀಲರು ತಮ್ಮ ಜ್ಞಾನ ಹಾಗೂ ಅನುಭವದಿಂದ ಸದೃಢ ಮತ್ತು ಸಮೃದ್ಧ ಭಾರತವನ್ನು ಕಟ್ಟಲು ಸಾಧ್ಯ” ಎಂಬ ಆಶಯವನ್ನು ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಶಿವರಾಜ ಪಾಟೀಲ್ ರಚಿಸಿರುವ “ಸಂಜೆಗೊಂದು ನುಡಿ ಚಿಂತನ-365” ಪುಸ್ತಕವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ವೇಲಾ ಡಿ.ಕೆ. ಇವರು ಬಿಡುಗಡೆ ಮಾಡಿ ಮಾತನಾಡಿದರು.
“ನ್ಯಾಯಮೂರ್ತಿಗಳು ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳಾಗಿದ್ದ ಸಂದರ್ಭದಲ್ಲಿ ತಾವು ಅವರ ಪೀಠದ ಮುಂದೆ ಪ್ರಕರಣವೊಂದನ್ನು ಯುವ ವಕೀಲೆಯಾಗಿ ವಾದಿಸಿದ್ದೇನೆ. ಸರಳತೆ ಮತ್ತು ಸಜ್ಜನಿಕೆಗೆ ಹೆಸರಾದ ನ್ಯಾ.ಪಾಟೀಲರು ರಚಿಸಿರುವ ಡಿವೈನ್ ಗ್ರೇಸ್ ಪುಸ್ತಕ ತಮ್ಮ ಮೇಲೆ ಬೀರಿದ ಪ್ರಭಾವವನ್ನು ಬೀರಿತು” ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವೇಲಾ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್‌ರವರು ಮಾತನಾಡಿ, “ನ್ಯಾಯಮೂರ್ತಿ ಶಿವರಾಜ ಪಾಟೀಲರು ಗ್ರಾಮೀಣ ಹಿನ್ನೆಲೆಯಿಂದ ಬಂದು 28 ವರ್ಷಗಳ ಕಾಲ ವಕೀಲರಾಗಿ ಹಾಗೂ 15 ವರ್ಷ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ನಿರ್ವಹಿಸಿದ ಮಹತ್ತರ ಕಾರ್ಯಗಳು ಇಂದಿನ ಯುವಕರಿಗೆ ದಾರಿದೀಪವಾಗಿವೆ. ನ್ಯಾಯಮೂರ್ತಿಗಳು ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಇದುವರೆಗೂ 14 ಗ್ರಂಥಗಳನ್ನು ರಚಿಸಿದ್ದು, ಅವುಗಳಲ್ಲಿ ಕೆಲವು ಬೇರೆ ಭಾಷೆಗಳಲ್ಲಿ ಅನುವಾದಗೊಂಡಿವೆ. ಅವರು ವಿಶೇಷವಾಗಿ ಗ್ರಾಮೀಣ ಭಾಗಗಳಿಂದ ಬಂದ ವಕೀಲರಿಗೆ ಆದರ್ಶಪ್ರಾಯರಾಗಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಅವರು ಅಭಿನಂದನಾ ನುಡಿಗಳನ್ನಾಡಿದರು. ನ್ಯಾಯಮೂರ್ತಿ ಪಾಟೀಲರನ್ನು ವಕೀಲರ ಸಂಘದಿಂದ ಹಾಗೂ ವಕೀಲರ ಸಹಕಾರ ಸಂಘದಿಂದ ಸನ್ಮಾನಿಸಿ, ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್.ಎನ್.. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಎಸ್.ಟಿಎಫ್‌ಸಿ-01 ದಾವಣಗೆರೆಯ ಶ್ರೀರಾಮನಾರಾಯಣ ಹೆಗಡೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಶ್ರೀಮತಿ ರೇಷ್ಮಾ ಹೆಚ್.ಕೆ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಆಗಮಿಸಿದ್ದರು.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಅಡ್ಡ ಮಲಗಿ ಘೇರಾವ್ ಹಾಕಿದ ರೈತರು; ಅಹವಾಲು ಸಲ್ಲಿಸುವ ವೇಳೆ ಘಟನೆ
ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್, ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಎಸ್. ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್, ಬಿ.ಬಿ. ಸಿದ್ದೇಶ್‌ರವರು ಕಾರ್ಯಕಾರಿ ಸಮಿತಿ ಸದಸ್ಯರಾದ ಅಜ್ಜಯ್ಯ ಬಿ., ಶ್ರೀಮತಿ ಭಾಗ್ಯಲಕ್ಷ್ಮಿ ಆರ್., ಚೌಡಪ್ಪ ಎಂ., ಮಧುಸೂದನ್ ಟಿ.ಹೆಚ್., ನಾಗರಾಜ್ ಎಲ್., ನೀಲಕಂಠಯ್ಯ ಕೆ.ಎಂ., ರಾಘವೇಂದ್ರ ಎಂ., ಸಂತೋಷ್ ಕುಮಾರ್ ಜಿ.ಜೆ., ವಾಗೀಶ್ ಕಟಗಿಹಳ್ಳಿ, ಹಾಗೂ ಜಿಲ್ಲಾ ವಕೀಲರ ಸಂಘದ ಸರ್ವಸದಸ್ಯರು ಭಾಗವಹಿಸಿದ್ದರು.