ನಮ್ಮ ಮಾತೃಭಾಷೆ ಕನ್ನಡ ಇತಿಹಾಸ ಬಗ್ಗೆ ಜಾಗೃತಿ ಜೊತೆಗೆ ನೆಲ ಜಲ ಭಾಷೆ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿ ನಮ್ಮ ಭಾಷೆಯ ಮೇಲಿನ ಅಭಿಮಾನ ಗೌರವ ಹೆಚ್ಚಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಗುಬ್ಬಿ ತಾಲ್ಲೂಕಿನಲ್ಲೂ ಎಲ್ಲಾ ಪದಾಧಿಕಾರಿಗಳು ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಕರೆ ನೀಡಿದರು.
ಗುಬ್ಬಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕಸಾಪ ತಾಲ್ಲೂಕು ಘಟಕ ಆಯೋಜಿಸಿದ್ದ ಆಜೀವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ಗುಬ್ಬಿ ತಾಲ್ಲೂಕು ಶರಣರ ವಚನ ಸಾಹಿತ್ಯ ಸೇರಿದಂತೆ ಅನೇಕ ಧಾರ್ಮಿಕ ಕ್ಷೇತ್ರಗಳು, ಸಾಹಿತ್ಯ ಕೃಷಿ ನಡೆಸಿದ ಸಾಹಿತಿಗಳು ಕಲಾವಿದರು ಹುಟ್ಟಿ ಬೆಳೆದ ಬಗ್ಗೆ ಬರವಣಿಗೆ ಮೂಲಕ ಭವಿಷ್ಯದ ಸಾಹಿತ್ಯ ಪ್ರೇಮಿಗಳಿಗೆ ತಿಳಿಸಬೇಕಿದೆ ಎಂದರು.
ವಿದೇಶದಲ್ಲಿ ನೆಲೆಸಿದ ಕನ್ನಡಿಗರು ಮಾತೃಭಾಷೆ ವ್ಯಾಮೋಹ ಪ್ರೇಮ ಮೆರೆಯುತ್ತಾರೆ. ಆದರೆ ಇಲ್ಲೇ ನೆಲೆಸಿದ ಕನ್ನಡಿಗರಲ್ಲಿ ಈ ಪ್ರೇಮ ಕಡಿಮೆ ಆಗುತ್ತಿರುವುದು ವಿಪರ್ಯಾಸ. ನಮ್ಮ ಭಾಷಾಭಿಮಾನ ಇಂದಿನ ಮಕ್ಕಳಲ್ಲಿ ವ್ಯಾಪಕವಾಗಿ ಬೆಳೆಸಬೇಕು. ಗಡಿ ಭಾಗದ ಭಾಷೆಯ ತಿಕ್ಕಾಟಕ್ಕೆ ಇತಿಶ್ರೀ ಹಾಡಬೇಕಿದೆ. ಈಗಾಗಲೇ ಮರಾಠಿಗರು ಕನ್ನಡಿಗರ ಮೇಲೆ ಕೆಂಡಕಾರಿದ್ದು ಎಲ್ಲರಿಗೂ ತಿಳಿದ ವಿಚಾರ. ಈ ನಿಟ್ಟಿನಲ್ಲಿ ಕನ್ನಡಾಭಿಮಾನ ಎಲ್ಲರಲ್ಲೂ ಮೂಡಬೇಕು ಎಂದು ತಿಳಿಸಿದ ಅವರು ಶಾಸ್ತ್ರೀಯ ಸ್ಥಾನಮಾನ ಪಡೆದ ಕನ್ನಡವನ್ನು ತಮಿಳು ಭಾಷೆಯಿಂದ ಬಂತು ಎಂದ ನಟ ಕಮಲಹಾಸನ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಆಧಾರ ರಹಿತ ಹೇಳಿಕೆ ಅದು ಪ್ರಚಾರಕ್ಕೆ ನೀಡಿ ಕನ್ನಡಿಗರನ್ನು ಕೆಣಕಿದ್ದು ಸರಿಯಲ್ಲ. ಶಾಂತಿ ಪ್ರಿಯ ಕನ್ನಡಿಗರನ್ನು ಕೆರಳಿಸುವುದು ಯಾವ ಸಾಧನೆಗೆ ಅರ್ಥ ಆಗುತ್ತಿಲ್ಲ ಎಂದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಸಣ್ಣಹೊನ್ನಲಿಂಗಯ್ಯ ಮಾತನಾಡಿ ಇಂಗ್ಲೀಷ್ ಹಾವಳಿಗೆ ಕನ್ನಡ ಮರೆಯಾಗುತ್ತಿರುವುದು ನಗರ ಪ್ರದೇಶದಲ್ಲಿ ಕಾಣಬಹುದಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಕನ್ನಡ ಭಾಷೆ ಹಳ್ಳಿ ಸೊಗಡಿನಲ್ಲಿ ರಾರಾಜಿಸುತ್ತಿದೆ. ಹಳ್ಳಿಗಾಡಿನ ಸಾಹಿತ್ಯ, ಜನಪದ ಹಾಡು, ನೃತ್ಯ, ಕಲೆಗಳನ್ನು ಉಳಿಸಿ ಬೆಳೆಸಲು ಕಸಾಪ ಬದ್ಧವಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಪರಿಷತ್ತು ಕೆಲಸ ಮಾಡಲಿ ಎಂದು ಆಶಿಸಿದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಚಟುವಟಿಕೆಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಸಹಕಾರ ಇದೆ. ಸಾಹಿತ್ಯ ಸಮ್ಮೇಳನ ತಾಲ್ಲೂಕಿನಲ್ಲಿ ನಡೆಯಬೇಕಿದೆ. ಎಲ್ಲಾ ಕನ್ನಡಿಭಿಮಾನಿಗಳು ಕೈ ಜೋಡಿಸಿ ಸಮ್ಮೇಳನ ನಡೆಸೋಣ. ಎಲ್ಲಾ ರೀತಿಯ ಸಹಕಾರ ಅಗತ್ಯ ಇರುವ ಕಾರಣ ಒಂದು ಕಚೇರಿ ಮಾಡುವ ನಿಟ್ಟಿನಲ್ಲಿ ನಿವೇಶನ ಕೋರಿದ್ದಾರೆ. ಪಟ್ಟಣ ಪಂಚಾಯತಿ ಮೂಲಕ ನಿವೇಶನ ಒದಗಿಸುವ ಭರವಸೆ ನೀಡಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎಚ್.ಸಿ.ಯತೀಶ್ ಮಾತನಾಡಿ ಗುಬ್ಬಿ ತಾಲ್ಲೂಕಿನಲ್ಲಿ ಆಜೀವ ಸದಸ್ಯರ ಒಗ್ಗೂಡಿಸಿ ಪರಿಷತ್ತಿನ ಮುಂದಿನ ಕೆಲಸ ಬಗ್ಗೆ ಚರ್ಚೆ ನಡೆಸಬೇಕಿದೆ. ಸಾಹಿತ್ಯ ಚಟುವಟಿಕೆಗೆ ಮುಂದಿನ ರೂಪುರೇಷೆ ರಚಿಸಬೇಕಿದೆ. ಈ ಜೊತೆಗೆ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಲ್ಲೂಕು ಮಟ್ಟದಲ್ಲಿ ನಡೆಸಲು ಪೂರ್ವಭಾವಿ ಸಭೆ ನಡೆಸಲು ಕಸಾಪ ಸಜ್ಜಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತೇಜಸ್ವಿ, ನಿವೃತ್ತ ಡಿಡಿಪಿಐ ಎಚ್.ಕೆ.ನರಸಿಂಹಮೂರ್ತಿ, ಡಾ.ಮುರಳೀಧರ್, ಕಸಾಪ ತಾಲ್ಲೂಕು ಕಾರ್ಯದರ್ಶಿ ಕುಮಾರಸ್ವಾಮಿ, ಖಜಾಂಚಿ ಸುಬ್ರಹ್ಮಣ್ಯ, ಪದಾಧಿಕಾರಿಗಳಾದ ಕೆ.ಎಂ.ರವೀಶ್, ಜಯಪ್ರಕಾಶ್, ದಿವ್ಯಪ್ರಕಾಶ್, ಪಾಪಣ್ಣ, ಶಿವಣ್ಣ, ದಯಾನಂದ್, ಸುರೇಶಯ್ಯ, ಗುರುಪ್ರಸಾದ್, ಕೆ.ವಿ.ದಯಾನಂದ್, ಸೋಮಣ್ಣ, ಚನ್ನಬಸವಯ್ಯ, ಲಯನ್ಸ್ ಕ್ಲಬ್ ಜ್ಞಾನದೇವ್, ವಿವೇಕಾನಂದ ಆಚಾರ್ಯ, ರವೀಶ್, ಶಿವಗಂಗಮ್ಮ, ಕೋಟೆ ಗಂಗಾಧರಸ್ವಾಮಿ, ಕುಮಾರ ಕವಿಗಳಾದ ಅಂಜನಕುಮಾರ್, ಅರುಣ್ ರಾಜ್, ಸಿಂಧು ಇತರರು ಇದ್ದರು.