ʼವಿಪಕ್ಷಗಳ ಒಕ್ಕೂಟ ಐಎನ್‌ಡಿಐಎ(ಇಂಡಿಯಾ) ಒಂದು ಪೈಲಟ್ ಇಲ್ಲದ ವಿಮಾನʼ ಎಂದು ಪ್ರಮೋದ್ ಮಧ್ವರಾಜ್ ಲೇವಡಿ ಮಾಡಿದ್ದನ್ನು ಕೆಪಿಸಿಸಿ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ ತೀವ್ರವಾಗಿ ಖಂಡಿಸಿದ್ದಾರೆ.
“ಪ್ರಮೋದ್ ಲೋಕಸಭೆ ಚುನಾವಣೆಯ ಬಗ್ಗೆ ಮತ್ತೆ ಮಾತಾಡಲಿ, ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಎಂಬ ವಿಮಾನಕ್ಕೆ ಪೈಲಟ್ ಯಾರು ಎಂದು ಸೂಚಿಸಲಿ. ಪ್ರಧಾನಿ ಮೋದಿಯವರ ದುರಾಡಳಿತಕ್ಕೆ ಒಂದು ಅಂತ್ಯ ಕಾಣಿಸಬೇಕೆಂಬ ಉದ್ದೇಶದಿಂದ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ದೇಶದ ಬಹುತೇಕ ಪ್ರಬಲ ರಾಜಕೀಯ ಪಕ್ಷಗಳು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕಾಂಗ್ರೆಸ್ ಜತೆ ಸೇರಿ ಒಕ್ಕೂಟ ರಚಿಸಿರುವುದು ಸದಾ ʼಮೋದಿʼ ಭಜನೆ ಮಾಡುತ್ತಿರುವ ಪ್ರಮೋದ್ ಮಧ್ವರಾಜ್ ಅವರ ನಿದ್ದೆಗೆಡಿಸಿದೆ” ಎಂದು ತಿರುಗೇಟು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಣಿಪುರ ಹಿಂಸಾಚಾರ – ಮೋದಿ ಮೌನ ಖಂಡಿಸಿ ಪ್ರತಿಭಟನೆ
“ಪ್ರಮೋದ್ ಮಧ್ವರಾಜ್ ಮಾತೆತ್ತಿದರೆ ʼತಾನು ಮೋದಿಯವರನ್ನು ನೋಡಿ ಬಿಜೆಪಿ ಸೇರಿದ್ದೇನೆʼ ಅನ್ನುತ್ತಾ ಕಾಂಗ್ರೆಸ್ ಟೀಕೆ ಮಾಡುತ್ತಿರುತ್ತಾರೆ. ಅವರು ಮೋದಿ ನೇತೃತ್ವದ ಎನ್‌ಡಿಎ ಸೋಲುವುದನ್ನೂ ಮುಂದಿನ ವರ್ಷ ನೋಡಲಿದ್ದಾರೆ” ಎಂದು ಶೆಣೈಯವರು ತಿಳಿಸಿದ್ದು, ಪತ್ರಿಕೆ ಹೇಳಿಕೆ ನೀಡಿದ್ದಾರೆ.