ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರದ ಮೇಲೆ ಒತ್ತಡ ತರುವ ದಿಸೆಯಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ಸಂಘಟಿಸಲು ಕನ್ನಡ ಸಂರಕ್ಷಣಾ ಸಮಿತಿಯ ಬೀದರ್ ಜಿಲ್ಲಾ ಘಟಕದ ನಿಯೋಗವು ಬೆಂಗಳೂರಿನಲ್ಲಿ ಸೋಮವಾರ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಭೇಟಿ ಮಾಡಿತು.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ ಜೋಶಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ರಾಜ್ಯ ಅಧ್ಯಕ್ಷ ಪ್ರವೀಣಶೆಟ್ಟಿ, ನಮ್ಮ ಕರ್ನಾಟಕ ಸೇನೆಯ ರಾಜ್ಯ ಅಧ್ಯಕ್ಷ ಬಸವರಾಜ ಅವರನ್ನು ನಿಯೋಗದ ಸದಸ್ಯರು ಭೇಟಿ ಮಾಡಿ ಗಡಿ ಜಿಲ್ಲೆ ಬೀದರ್ ಸೇರಿದಂತೆ ರಾಜ್ಯದಲ್ಲಿ ಕನ್ನಡ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿದರು.

ʼರಾಜ್ಯ ಸರ್ಕಾರದ ಕಠಿಣ ನಿಯಮಗಳಿಂದಾಗಿ ರಾಜ್ಯದಲ್ಲಿ 10 ವರ್ಷಗಳ ಅವಧಿಯಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿವೆ. ರಾಜ್ಯ ಸರ್ಕಾರವೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸುತ್ತಿದೆ. ಗೋಕಾಕ್ ಚಳವಳಿ ಮಾದರಿಯಲ್ಲಿ ಹೋರಾಟ ನಡೆಸದಿದ್ದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಉಳಿಗಾಲವಿಲ್ಲʼ ಎಂದು ಗಮನ ಸೆಳೆದರು.
ಸಮಿತಿಯ ಬೀದರ್ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ʼಕನ್ನಡ ಶಾಲೆಗಳ ಸಮಸ್ಯೆಗಳನ್ನು ಕನ್ನಡ ಪರ ಸಂಘಟನೆಗಳ ಪ್ರಮುಖರ ಗಮನಕ್ಕೆ ತರಲಾಗಿದೆ. ಕನ್ನಡ ಶಾಲೆಗಳ ಉಳಿವಿಗೆ ನಡೆಸುವ ಎಲ್ಲ ಪ್ರಯತ್ನಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಕನ್ನಡ ಶಾಲೆಗಳ ಉಳಿವಿಗೆ ರಾಜ್ಯದಾದ್ಯಂತ ಹೋರಾಟ ನಡೆಸುವ ನಿಟ್ಟಿನಲ್ಲಿ ಸಿದ್ಧತೆ ನಡೆದಿದೆʼ ಎಂದರು.
ʼಕನ್ನಡ ಶಾಲೆ ಆರಂಭಿಸುವ ಹಾಗೂ ಮಾನ್ಯತೆ ನವೀಕರಿಸುವ ಪ್ರಕ್ರಿಯೆ ಸರಳೀಕರಿಸಬೇಕು. ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಬೇಕು. ಅರ್ಹ ಖಾಸಗಿ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದ್ದ ಆರ್‍ಟಿಇ ಮರು ಜಾರಿಗೊಳಿಸಬೇಕು. ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆ ಜಾರಿಗೊಳಿಸಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆಗಳಾಗಿವೆʼ ಎಂದು ತಿಳಿಸಿದ್ದಾರೆ.

ನಿಯೋಗ ಇನ್ನೂ ಅನೇಕ ಮುಖಂಡರು ಹಾಗೂ ಕನ್ನಡ ಪರ ಹೋರಾಟಗಾರರನ್ನು ಭೇಟಿ ಮಾಡಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೀದರ್ | ಆನ್‍ಲೈನ್ ಗೇಮಿಂಗ್ ನಿಷೇಧಕ್ಕೆ ನಮ್ಮ ಕರ್ನಾಟಕ ಸೇನೆ ಒತ್ತಾಯ
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಕನ್ನಡ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಸೋಮನಾಥ ಮುದ್ದಾ, ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಮಣಗೇರಿ, ಕಾರ್ಯದರ್ಶಿ ಗುರುನಾಥ ರೆಡ್ಡಿ, ಪ್ರಮುಖರಾದ ಗುರುನಾಥ ದೇಶಮುಖ, ಸೈಯದ್ ಅಹಮ್ಮದ್, ಮಾಣಿಕಪ್ಪ ಗೋರನಾಳೆ, ರಮೇಶ ಧಬಾಲೆ, ಸಂತೋಷ್ ಕೃಷ್ಣಮೂರ್ತಿ, ಸಂಜುಕುಮಾರ ಬಿರಾದಾರ ನಿಯೋಗದಲ್ಲಿ ಇದ್ದಾರೆ.
ನಿಮ್ಮ ಊರು, ಸಮುದಾಯದ ಕುಂದು-ಕೊರತೆಗಳನ್ನು ʼಈದಿನ ಬೀದರ್ ಸಹಾಯವಾಣಿʼ ನಂಬರ್‌ಗೆ ವಾಟ್ಸಪ್ ಮಾಡಿ : 9035053805