ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಪ್ರಮಾಣ ಪತ್ರ ನೀಡಲು ₹1 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದಡಿ ಕಾಳಗಿ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆಯ ಸಹಾಯಕ (ಎಸ್‌ಡಿಎ) ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಾಳಗಿ ತಹಶೀಲ್ದಾರ್ ಕಚೇರಿಯ ದೇವಸ್ಥಾನ ಶಾಖೆಯ ಎಸ್‌ಡಿಎ ಶರಣಪ್ಪ ಲಂಚ ಪಡೆದ ಆರೋಪಿ. ಕಲಬುರಗಿಯ ಗುತ್ತಿಗೆದಾರ ಅಣಿವೀರಯ್ಯ ಹಿರೇಮಠ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾಳಗಿಯ ಅಣಿವೀರಭದ್ರೇಶ್ವರ ದೇವಸ್ಥಾನ ಸಮೀಪದ ಸಿ.ಸಿ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರು. ಬಿಲ್ ಪಾವತಿಗೆ ಕಾಮಗಾರಿ ಪೂರ್ಣಗೊಳಿಸಿದ ಸಂಬಂಧ ದೇವಸ್ಥಾನ ಶಾಖೆಯಿಂದ ಪ್ರಮಾಣ ಪತ್ರದ ಅವಶ್ಯವಿತ್ತು. ಪ್ರಮಾಣ ಪತ್ರವನ್ನು ನೀಡದೆ ಅಣಿವೀರಯ್ಯ ಅವರನ್ನು ಶರಣಪ್ಪ ಸಾಕಷ್ಟು ಬಾರಿ ಕಚೇರಿಗೆ ಅಲೆದಾಡಿಸಿದ್ದರು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
₹1 ಲಕ್ಷ ಲಂಚ ಕೊಟ್ಟರೆ ಪ್ರಮಾಣ ಪತ್ರಕ್ಕೆ ಸಹಿ ಮಾಡಿ ಕೊಡುವುದಾಗಿ ಬೇಡಿಕೆ ಇಟ್ಟಿದ್ದರು. ಅಣಿವೀರಯ್ಯ ಅವರು ಮಂಗಳವಾರ ಸಂಜೆ ₹1 ಲಕ್ಷದೊಂದಿಗೆ ಬಸ್‌ನಲ್ಲಿ ಬಂದು ಕಲಬುರಗಿಯ ಖರ್ಗೆ ಪೆಟ್ರೋಲ್ ಬಂಕ್ ಸಮೀಪದಲ್ಲಿ ಇಳಿದರು. ಅಲ್ಲಿಯೇ ನಿಂತಿದ್ದ ಶರಣಪ್ಪ ಲಂಚದ ಹಣ ಪಡೆಯುತ್ತಿದ್ದಂತೆ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿಚಾರಣೆಯೂ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಲೋಕಾಯುಕ್ತ ಎಸ್ಪಿ ಬಿ.ಕೆ.ಉಮೇಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಗೀತಾ ಬೇನಾಳ, ಶೀಲವಂತ ಹೊಸಮನಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ರಾಜಶೇಖರ ಹಳಗೋಧಿ, ಅರುಣಕುಮಾರ್, ಸಿಬ್ಬಂದಿ ಮಲ್ಲಿನಾಥ, ಪ್ರಮೋದ, ಬಸವರಾಜ, ರಾಣೋಜಿ, ಪವಾಡಪ್ಪ ಅವರಿದ್ದ ತಂಡ ದಾಳಿ ನಡೆಸಿದೆ.
ಇದನ್ನೂ ಓದಿ : ಕೊಪ್ಪಳ ಜಿಲ್ಲಾಧಿಕಾರಿ ವರ್ಗಾವಣೆ : ಸುರೇಶ ಹಿಟ್ನಾಳ್ ನೂತನ ಡಿಸಿ; ಕೆಕೆಆರ್‌ಡಿಬಿ ಕಾರ್ಯದರ್ಶಿಯಾಗಿ ನಳಿನಿ ಅತುಲ್ ನೇಮಕ