ಇಸ್ರೇಲ್- ಇರಾನ್ ನಡುವಿನ ಸಂಘರ್ಷಕ್ಕೆ ಅಮೆರಿಕ ಅಧಿಕೃತ ಪ್ರವೇಶ ಪಡೆದಂತೆ ಕಾಣುತ್ತಿದೆ. ಜಿ7 ದೇಶಗಳ ಶೃಂಗಸಭೆ ವೇಳೆ ಅರ್ಧಕ್ಕೆ ಹೊರ ಬಂದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿ, ಅಲಿ ಖಮೇನಿಗೆ ಶರಣಾಗುವಂತೆ ಸೂಚಿಸಿದ್ದಾರೆ.
ಇರಾನ್ನ ಸುಪ್ರೀಂ ಲೀಡರ್ ಎಂದು ಕರೆಯಲ್ಪಡುವ ಅಲಿ ಖಮೇನಿ ವ್ಯಕ್ತಿ ಎಲ್ಲಿ ಅಡಗಿದ್ದಾನೆ ಎನ್ನುವುದು ನಮಗೆ ನಿಖರವಾಗಿ ತಿಳಿದಿದೆ. ಆದರೆ, ಆತನನ್ನು ನಾವು ಹತ್ಯೆ ಮಾಡುವುದಿಲ್ಲ. ನಾಗರಿಕರು ಅಥವಾ ಅಮೇರಿಕನ್ ಸೈನಿಕರ ಮೇಲೆ ಕ್ಷಿಪಣಿಗಳು ಹಾರಿಸುವುದನ್ನು ನಾವು ಬಯಸುವುದಿಲ್ಲ. ನಮ್ಮ ಸಹನೆಯನ್ನು ಪರೀಕ್ಷೆ ಮಾಡುವುದು ಬೇಡ. ಬದಲಾಗಿ ಅಲಿ ಖಮೇನಿ ಶರಣಾಗಬೇಕು” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
“ಇರಾನ್ ಶರಣಾಗತಿ ಘೋಷಿಸಿ ಪರಮಾಣು ಒಪ್ಪಂದ ಮಾತುಕತೆಗೆ ಮುಂದಾಗಬೇಕು ಎಂಬುದು ನಮ್ಮ ಬಯಕೆ. ಈ ಗುರಿಯನ್ನು ಸಾಧಿಸಲು ನಾವು ಜಂಟಿ ಪ್ರಯತ್ನಗಳನ್ನು ಮುಂದುವರೆಸುತ್ತೇವೆ. ಇರಾನ್ ಇಷ್ಟೊತ್ತಿಗೆ ಪರಮಾಣು ಒಪ್ಪಂದ ಮಾತುಕತೆಗೆ ಸಿದ್ಧವಾಗಬೇಕಿತ್ತು. ನಾನು ಹಲವಾರು ಬಾರಿ ಈ ಕುರಿತು ಇರಾನ್ ಉನ್ನತ ರಾಜಕೀಯ ನಾಯಕತ್ವಕ್ಕೆ ಮನವಿ ಮಾಡಿದ್ದೇನೆ. ಆದರೆ, ಆಗೆಲ್ಲಾ ಏರು ಧ್ವನಿಯಲ್ಲಿ ಗುಡುಗುತ್ತಿದ್ದ ಇರಾನ್ ನಾಯಕರು, ಈಗ ಆತ್ಮರಕ್ಷಣೆಗಾಗಿ ಬಂಕರ್ನಲ್ಲಿ ಅಡಗಿ ಕುಳಿತಿದ್ದಾರೆ. ನಮ್ಮ ತಾಳ್ಮೆ ಕ್ಷೀಣಿಸುತ್ತಿದೆ” ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇರಾನ್-ಇಸ್ರೇಲ್ ಸಂಘರ್ಷ | ಈವರೆಗೂ 224 ಮಂದಿ ಮೃತ, 1,277ಕ್ಕೂ ಹೆಚ್ಚು ಜನರಿಗೆ ಗಾಯ
ಇರಾನ್ ರಾಜಧಾನಿ ಟೆಹರಾನ್ ತೊರೆಯುವಂತೆ ಅಲ್ಲಿನ ನಿವಾಸಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ ಬಳಿಕ ಇರಾನ್ ಮೇಲೆ ಇಸ್ರೇಲ್ ದಾಳಿ ತೀವ್ರಗೊಂಡಿದೆ. ಟೆಹ್ರಾನ್ ನಿವಾಸಿಗಳು ಗುಂಪು ಗುಂಪಾಗಿ ಮನೆಗಳನ್ನು ತೊರೆದಿದ್ದಾರೆ.
ಸತತ 5 ದಿನಗಳಿಂದ ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಇರಾನ್ ನ ಪರಮಾಣು ಯೋಜನೆಗಳ ವಿವಿಧ ಘಟಕಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಆದರೆ, ಫೋರ್ಡೋ ಯುರೇನಿಯಂ ಸಂವರ್ಧನ ಘಟಕದ ಮೇಲೆ ಮಾತ್ರ ದಾಳಿ ನಡೆಸಲು ಇಸ್ರೇಲ್ಗೆ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಫೋರ್ಡೋ ಘಟಕವು ಭೂಮಿಯ ಆಳದಲ್ಲಿದೆ (ಸುಮಾರು 300 ಅಡಿ). ಅದನ್ನು ನಾಶ ಮಾಡಲು ಇಸ್ರೇಲ್ಗೆ ಬರೋಬ್ಬರಿ 14 ಸಾವಿರ ಕೆ.ಜಿ. ಜಿಬಿಯು-57 ಬೃಹತ್ ಆರ್ಡನನ್ಸ್ ಪೆನೆಟ್ರೇಟರ್ನ ಅಗತ್ಯವಿದೆ.
ಭೂಮಿಯನ್ನು ಸೀಳಿ ಆಳದಲ್ಲಿರುವ ಗುರಿಯನ್ನು ತಲುಪಬಲ್ಲಂಥ ಬಾಂಬ್ ಅಥವಾ ಕ್ಷಿಪಣಿಯ ಭಾಗವನ್ನು ಆರ್ಡನನ್ಸ್ ಪೆನೆಟ್ರೇಟರ್ ಎನ್ನುತ್ತಾರೆ. ಎಂತಹ ಸುರಕ್ಷಿತ ಜಾಗದಲ್ಲಿದ್ದರೂ ಅದನ್ನು ತಲುಪಿ ಗುರಿಯನ್ನು ಧ್ವಂಸಗೊಳಿಸುವ ಸಾಮರ್ಥ್ಯ ಇದಕ್ಕಿರುತ್ತದೆ. ಇದು ಉಕ್ಕು-ಮಿಶ್ರಲೋಹದ ಕವಚವನ್ನು ಹೊಂದಿರುತ್ತದೆ. ಈ ಪೆನೆಟ್ರೇಟರ್ ಅನ್ನು ಬಿ-2 ಸ್ಟೆಲ್ತ್ ಬಾಂಬರ್ ಮೂಲಕ ರವಾನಿಸಲಾಗುತ್ತದೆ. ಯಾವುದೇ ರೇಡಾರ್ ಅಥವಾ ಇತರ ಸೆನ್ಸರ್ಗಳ ಕಣ್ಣು ತಪ್ಪಿಸಿ ಸಾಗುವ ಸಾಮರ್ಥ್ಯ ಈ ನ್ವೆಲ್ತ್ ಬಾಂಬರ್ಗಿದೆ. ಈ ಬಾಂಬ್ ಅಮೆರಿಕದ ಬಳಿ ಮಾತ್ರವೇ ಇದೆ.