ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನಗಳಲ್ಲಿ ಯಾವುದೇ ಗಂಭೀರ ದೋಷಗಳು ಕಂಡುಬಂದಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಮಂಗಳವಾರ ತಿಳಿಸಿದೆ. ಗುಜರಾತ್ ವಿಮಾನ ದುರಂತದ ಬಳಿಕ ಬೋಯಿಂಗ್ 787 ದೋಷಗಳ ಬಗ್ಗೆ ಕಳವಳ ಉಂಟಾಗಿದೆ. ಈ ನಿಟ್ಟಿನಲ್ಲಿ ವಾಯುಯಾನ ಸಂಸ್ಥೆ ಬೋಯಿಂಗ್ 787 ವಿಮಾನಗಳ ಪರಿಶೀಲನೆ ಮಾಡಿದೆ.
ಪರಿಶೀಲನೆ ಬಳಿಕ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರ್ಗಗಳಲ್ಲಿ 1,000ಕ್ಕೂ ಹೆಚ್ಚು ದೈನಂದಿನ ವಿಮಾನಗಳನ್ನು ನಿರ್ವಹಿಸುವ ಏರ್ ಇಂಡಿಯಾ ಲಿಮಿಟೆಡ್ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಹಿರಿಯ ಅಧಿಕಾರಿಗಳೊಂದಿಗೆ ಡಿಜಿಸಿಎ ಉನ್ನತ ಮಟ್ಟದ ಸಭೆಯನ್ನು ನಡೆಸಿದೆ. ಬಳಿಕ ಬೋಯಿಂಗ್ 787 ವಿಮಾನದಲ್ಲಿ ಗಂಭೀರ ಸಮಸ್ಯೆಗಳಿಲ್ಲ ಎಂದು ಹೇಳಿಕೆ ನೀಡಿದೆ.
ಇದನ್ನು ಓದಿದ್ದೀರಾ? ಬೋಯಿಂಗ್ 787 ವಿಮಾನಗಳ ತಾಂತ್ರಿಕ ದೋಷಗಳ ಬಗ್ಗೆ ಎಚ್ಚರಿಸಿದ್ದ ಎಂಜಿನಿಯರ್ ನಿಗೂಢ ಸಾವು; ಮತ್ತೆ ಮುನ್ನೆಲೆಗೆ
ಜೂನ್ 12ರಂದು ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾದ AI 171 ಬೋಯಿಂಗ್ 787-8 ಬೋಯಿಂಗ್ ವಿಮಾನ ಅಪಘಾತಗೊಂಡಿದ್ದು, 270ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದಾದ ಬಳಿಕ ಈ ವಿಮಾಗಳಲ್ಲಿ ಈ ಹಿಂದೆಯೂ ಕಂಡುಬಂದಿದ್ದ ದೋಷಗಳ ಬಗ್ಗೆ ಚರ್ಚೆ ಹೆಚ್ಚಾಗಿದೆ.
ಬೋಯಿಂಗ್ 787 ವಿಮಾನಗಳ ತಾಂತ್ರಿಕ ದೋಷಗಳ ಬಗ್ಗೆ ಎಚ್ಚರಿಸಿದ್ದ ಎಂಜಿನಿಯರ್ ಜಾನ್ ಬರ್ನೆಟ್ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣ ಕೂಡಾ ಮುನ್ನೆಲೆಗೆ ಬಂದಿದೆ. ಇವೆಲ್ಲವುದರ ನಡುವೆ ಟಾಟಾ ಒಡೆತನದ ಏರ್ ಇಂಡಿಯಾದ ಎಲ್ಲಾ ಬೋಯಿಂಗ್ 787 ವಿಮಾನಗಳ ಪರಿಶೀಲನೆ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಅಹಮದಾಬಾದ್-ಲಂಡನ್, ದೆಹಲಿ-ಪ್ಯಾರಿಸ್ ಏರ್ ಇಂಡಿಯಾ ವಿಮಾನ ರದ್ದು
ಈ ನಡುವೆ ಮಂಗಳವಾರ ಏರ್ ಇಂಡಿಯಾ ಒಟ್ಟು 7 ಅಂತಾರಾಷ್ಟ್ರೀಯ ವಿಮಾಗಳನ್ನು ರದ್ದುಗೊಳಿಸಿದೆ. ತಾಂತ್ರಿಕ ಸಮಸ್ಯೆ, ವಿಮಾನ ಲಭ್ಯತೆ ಸೇರಿದಂತೆ ವಿವಿಧ ಕಾರಣಗಳಿಂದ ವಿಮಾನಗಳನ್ನು ರದ್ದುಗೊಳಿಸಲಾಗಿದೆ. AI915 (ದೆಹಲಿಯಿಂದ ದುಬೈ – B788), AI153 (ದೆಹಲಿಯಿಂದ ವಿಯೆನ್ನಾ – B788), AI143 (ದೆಹಲಿಯಿಂದ ಪ್ಯಾರಿಸ್ – B788), AI159 (ಅಹಮದಾಬಾದ್ ನಿಂದ ಲಂಡನ್ – B788), AI170 (ಲಂಡನ್‌ನಿಂದ ಅಮೃತಸರ – B788), AI133 (ಬೆಂಗಳೂರಿನಿಂದ ಲಂಡನ್ – B788), AI179 (ಮುಂಬೈನಿಂದ ಸ್ಯಾನ್ ಫ್ರಾನ್ಸಿಸ್ಕೋ – B777) ವಿಮಾನಗಳನ್ನು ಮಂಗಳವಾರ ರದ್ದುಗೊಳಿಸಲಾಗಿದೆ.
ಪ್ರತಿ ದಿನ ವಿಮಾಗಳನ್ನು ರದ್ದುಗೊಳಿಸಲಾಗುತ್ತಿದ್ದು, ಪ್ರಯಾಣಿಕರು ಏರ್ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ರದ್ದು ಮಾಡಬಹುದು ಅಥವಾ ಟಿಕೆಟ್ ಅನ್ನು ಬೇರೆ ದಿನಕ್ಕೆ ವರ್ಗಾಯಿಸಬಹುದು. ಏನೇ ಮಾಡಿದರೂ ಮರುಪಾವತಿ ಮಾಡಲಾಗುತ್ತದೆ. ಬೇರೆ ದಿನಕ್ಕೆ ಟಿಕೆಟ್ ವರ್ಗಾಯಿಸುವವರು ಉಚಿತವಾಗಿ ಪ್ರಯಾಣಿಸಬಹುದು ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
