ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ಟಣ ಅರಣ್ಯ ವಲಯ ದಸೂಡಿ ವ್ಯಾಪ್ತಿಯಲ್ಲಿ ಗಸ್ತು ಅರಣ್ಯ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನವೀನ್ ಕುಮಾರ್ ಎಸ್ ಆರ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಲೆನಾಡು ಭಾಗದ ಯಸಳೂರು ಅರಣ್ಯ ಇಲಾಖೆಯಲ್ಲಿ ಐದು ವರ್ಷಗಳ ಕಾಲ ಕಾಡಾನೆ ಕಾರ್ಯಪಡೆ ಮತ್ತು ಗಸ್ತು ಅರಣ್ಯ ಫಾಲಕ(Beat Forester)ರಾಗಿ ಉತ್ತಮ ಕಾರ್ಯ ನಿರ್ವಹಿಸಿ ಜನಮನ್ನಣೆಗೆ ಪಾತ್ರರಾಗಿದ್ದರು. ಪ್ರಸ್ತುತ ತುಮಕೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದರು.

ಸರ್ಕಾರಿ ಹುದ್ದೆಗೆ ಸೇರುವ ಮೊದಲು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಯಾವಾಗಲೂ ತುಂಬಾ ಚಟುವಟಿಕೆಗಳಿಂದ ಇರುತ್ತಿದ್ದ ಹಸನ್ಮುಖಿಯಾದ ಇವರು ಇಂದು ದೈವಾಧೀನರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಗಳೂರಿನಲ್ಲಿ ಭೂಕುಸಿತ; ನಾಲ್ಕು ಮನೆಗಳಿಗೆ ಹಾನಿ
ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸಿಂಗಟಗೆರೆಯವರಾದ ನವೀನ್ ಕುಮಾರ್ ಎಸ್ ಆರ್(31) ಅವರು ಹೆಂಡತಿ, ಇಬ್ಬರು ಪುಟ್ಟ ಮಕ್ಕಳು ಹಾಗೂ ತಾಯಿ ಸೇರಿದಂತೆ ಅಪಾರ ಬಂಧು-ಬಳಗ, ಮಿತ್ರರನ್ನು ಅಗಲಿದ್ದಾರೆ. ತಮ್ಮ ಸ್ವಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.