ಸುತ್ತಲೂ ಹಚ್ಚಹಸಿರಿನಿಂದ ಕೂಡಿರುವ ಪರಿಸರ, ವಿಶಾಲವಾದ ಅಟದ ಮೈದಾನ, ಹತ್ತಾರು ಕೋಣೆಗಳು, ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಆ ವಿದ್ಯಾರ್ಥಿಗಳಿಗೆ ಓಡಾಡಲು ಶಾಲಾ ವಾಹನ ವ್ಯವಸ್ಥೆ ಇದು ಯಾವುದೋ ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲ, ಇದೊಂದು ಸರ್ಕಾರಿ ಶಾಲೆ ಎಂದರೆ ನೀವು ನಂಬಲೇ ಬೇಕು. ಹೌದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಹೊನ್ನಾಳ ಎಂಬು ಪುಟ್ಟ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ. ಇತ್ತೀಚೆಗೆ ಎಲ್ಲೆಲ್ಲೂ ಸರ್ಕಾರ ಶಾಲೆ ಉಳಿಸಬೇಕು ಎಂಬ ಘೋಷಣೆ ಹೆಚ್ಚಾಗುತ್ತಿದೆ ಆದರೆ ಇಲ್ಲೊಂದು ಕಡೆ ಈ ಘೋಷಣೆಯನ್ನು ಆ ಊರಿನ ಗ್ರಾಮಸ್ಥರು ಕಾರ್ಯರೂಪಕ್ಕೆ ತರುವ ಮೂಲಕ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಯನ್ನು ಊರಿನ ಗ್ರಾಮಸ್ಥರು ಉಳಿಸಿಕೊಂಡು ಅದನ್ನೊಂದು ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ.

ಈ ಶಾಲೆ ಅಂತಿಂತಹ ಶಾಲೆಯಲ್ಲ ಶತಮಾನವನ್ನು ಪೂರೈಸಿದ ಶಾಲೆ ಆದರೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿ ಮುಚ್ಚಲು ನಿರ್ಧರಿಸಿದಾಗ, ಸಪೋರ್ಟ್ ಉರ್ದು ಶಾಲೆ ಎಂಬ ವಾಟ್ಸಪ್ ಗ್ರೂಪ್ ಮೂಲಕ ಗ್ರಾಮದ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು, ದಾನಿಗಳು ಮತ್ತು ಇದೇ ಶಾಲೆಯಲ್ಲಿ ಕಲಿತು ಈಗ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಹಳೆ ವಿದ್ಯಾರ್ಥಿಗಳನ್ನೊಳಗೊಂಡ ದಾನಿಗಳ ಸಹಾಯದಿಂದ ಈ ಶಾಲೆಗೆ ಒಂದು ಹೊಸ ರೂಪು ರೇಷ ನೀಡಲು ಆರಂಭಿಸಲಾಯಿತು ಈ ಶಾಲೆಯ ಯಶಸ್ಸಿಗೆ ದುಡಿದರವರು ಊರಾರು ಜನ ಅದರಲ್ಲಿ ಶಾಲೆಯ ಮುಖ್ಯ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಇಮಾಮ್ ಸಾಹೇಬ್ ತೆಂಕಸಾಲಿಯಬರನ್ನು ಈ ಸಂದರ್ಭದಲ್ಲಿ ನೆನೆಯಲೇ ಬೇಕು ಎನ್ನುತ್ತಾರೆ ಶಾಲೆ ಹಳೆ ವಿದ್ಯಾರ್ಥಿ ಹಾಗೂ ಎಸ್ ಡಿಎಂಸಿ ಸದಸ್ಯ ಸುಭಾನ್ ಹೊನ್ನಾಳ.
ಈ ದಿನ.ಕಾಮ್ ಜೊತೆ ಮಾತನಾಡಿದ ಶಾಲೆಯ ಎಸ್ ಡಿ ಎಂಸಿ ಉಪಾಧ್ಯಕ್ಷ ಹಾಗೂ ಶಾಲೆಯ ಹಳೇ ವಿದ್ಯಾರ್ಥಿ ಮಹಮ್ಮದ್ ಇಮ್ತಿಯಾಝ್, ಈ ಶಾಲೆಯಲ್ಲಿ ಎಲ್ ಕೆಜಿ ಯು ಕೆಯಿಂದಲೂ ಶಾಲೆ ನಡೆಯುತ್ತಿದೆ ಪೂರ್ಣ ಪ್ರಮಾಣದ ಆಂಗ್ಲ ಮಾಧ್ಯಮ ಶಾಲೆ ನಡೆಸಲು ಅನುಮತಿ ಇಲ್ಲದಿದ್ದರೂ ಪ್ರಸ್ತುತ ಒಂದು ಮತ್ತು ಎರಡನೇ ತರಗತಿ ಹಾಗೂ ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿಯೇ ತರಗತಿಯನ್ನು ನಡೆಸುತ್ತಿದ್ದೇವೆ. ಈ ಶಾಲೆಗೆ ಉರ್ದು ಮುಖ್ಯ ಶಿಕ್ಷಕರ ಅವಶ್ಯಕತೆ ಇದೆ ಸರ್ಕಾರ ಈ ಬೇಡಿಕೆಯನ್ನು ಆದಷ್ಟು ಬೇಗ ಪೂರೈಸುವಂತೆ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಶಾಲೆಯ ಹಳೆಯ ವಿದ್ಯಾರ್ಥಿ ಸುರೇಶ್ ಪೂಜಾರಿ, ಇದು ಹೆಸರಿಗೆ ಉರ್ದು ಶಾಲೆ ಇರಬಹುದು ಆದರೆ ಇಲ್ಲಿ ಕನ್ನಡ, ಇಂಗ್ಲಿಷ್ ಭಾಷೆಗಳಲ್ಲೂ ಕೂಡ ಭೋದನೆ ನಡೆಯುತ್ತದೆ ಎಂದು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಇಲ್ಲಿನ ಮಕ್ಕಳು ಕೂಡ ಶಾಲೆಯಲ್ಲಿ ದೊರಕುವ ಶಿಕ್ಷಣದ ಬಗ್ಗೆ ಬಹಳ ಸಂತೋಷದಿಂದಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಸುನ್ನಿ ಸ್ಟೂಡೆಂಟ್ ಫೆಡರೇಶನ್ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಈ ಶಾಲೆಯ ವಿದ್ಯಾರ್ಥಿಗಳಿಗೆ ನೂಟ್ ಬುಕ್ ಗಳನ್ನು ಉಚಿತವಾಗಿ ನೀಡುತ್ತಾ ಬಂದಿದ್ದಾರೆ.
ಒಟ್ಟಿನಲ್ಲಿ ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರೂ ಒಂದು ಸೆಲ್ಯೂಟ್ ಹೊಡೆಯಲೇ ಬೇಕು ಇಂತಹ ಸಾವಿರಾರು ಸರಕಾರಿ ಶಾಲೆಗಳು ಬಾಗಿಲು ಮುಚ್ಚಲು ತಯಾರಾಗಿ ನಿಂತಿದೆ, ಅಂತಹ ಗ್ರಾಮಗಳಲ್ಲಿಯೂ ಸಹ ಇದೇ ರೀತಿ ಸವಾಲು ಸ್ವೀಕರಿಸಿ ದಾನಿಗಳ ಸಹಾಯ ಮತ್ತು ಸರಕಾರ ಮೇಲೆ ಒತ್ತಡ ತರುವ ಮೂಲಕ ಸರಕಾರಿ ಶಾಲೆಗಳನ್ನು ಉಳಿಸಿ ಬೆಳಸಬೇಕಾಗಿದೆ.

