ವರ್ತಮಾನದ ಉರಿಗೆ ಹೊರಗೆ ಓಡಿದವರು: ಪ್ರೊ. ಎಸ್.ಜಿ ಸಿದ್ದರಾಮಯ್ಯ ಬರೆಹ

Date:

Advertisements
ದೇಶಕ್ಕೆ ಸಂಕಷ್ಟ ಎದುರಾದಾಗ ಅದನ್ನು ಎದುರಿಸಿ ಸಂಕಷ್ಟದಿಂದ ದೇಶವನ್ನು ಜನತೆಯನ್ನು ಪಾರುಮಾಡುವುದು ಪ್ರಜ್ಞಾವಂತರ ಸಾಮಾಜಿಕ ಹೊಣೆಗಾರಿಕೆ. ದೇಶದಲ್ಲಿ ವಿನಾಶಕಾರಿ ಬೆಳವಣಿಗೆ ತಲೆದೋರಿದಾಗ ಆದರ ವಿರುದ್ಧ ಕವಿ ಲೇಖಕ ಕಲಾವಿದ ದನಿ ಎತ್ತಬೇಕಲ್ಲವೇ?

ಹೊರಿಸಿಕೊಂಡು ಹೋದ ನಾಯಿ
ಮೊಲವನೇನ ಹಿಡಿವುದಯ್ಯಾ? ಅರಿಯದ ವೀರ
ಇಲ್ಲದ ಸೋಗು ಹೇಳುವುದೆ ನಾಚಿಕೆ
ಆನು ಭಕ್ತನೆಂತೆಂಬೆನಯ್ಯಾ ಕೂಡಲ ಸಂಗಮದೇವಾ?

ಇದು ಬಸವಣ್ಣನವರು ತಮ್ಮ ಭಕ್ತಿಯ ಬಗ್ಗೆ ತಾವೇ ಕಟು ವಿಮರ್ಶೆ ಮಾಡಿಕೊಂಡಂತೆ ಆಡಿರುವ ವಚನ. ಆತ್ಮವಿಮರ್ಶೆ ಇಲ್ಲದ ಯಾವುದೇ ವ್ಯಕ್ತಿ ನಿಜವಾದ ಮನುಷ್ಯನಾಗಲಾರ.

ಯಾವುದೇ ಬಗೆಯ ಸಮಾವೇಶಗಳಿಗೆ ದುಡ್ಡುಕೊಟ್ಟು ಕರೆಸಿಕೊಳ್ಳುವ ಜನರನ್ನು ಕಂಡಾಗ ಈ ಮೇಲಿನ ವಚನ ನೆನಪಾಗುತ್ತದೆ. ಉದ್ದೇಶ ಸಾಧನೆಗಾಗಿ ಉಮೇದಿನಿಂದ ಜನ ಸಂಘಟಿತವಾದಾಗ ಅದಕ್ಕೆ ಹೋರಾಟದ ಶಕ್ತಿ ಇರುತ್ತದೆ. ಹೋರಾಟವೆಂಬುದು ಮಾರಾಟದ ಸರಕಲ್ಲ; ಅದು ಬದ್ಧತೆಯ ಬದುಕು. ಅರಿವಿನ ನೆಲೆಯಲ್ಲಿ ಕ್ರಿಯೆಯಾಗಿ ಅರಳುವ ಪ್ರಜ್ಞಾರೂಪಿ, ಹೀಗಾಗಿ ಹೋರಾಟಕ್ಕೆ ತೊಡಗಿಸಿಕೊಳ್ಳುವ ಯಾವುದೇ ವ್ಯಕ್ತಿಗೆ ಹೋರಾಟದ ಹಿಂದಿನ ತಾತ್ವಿಕತೆ ಅರಗಿದ ಅನ್ನವಾಗಿರುತ್ತದೆ. ಅರಿವಾಗಿರುತ್ತದೆ. ಕ್ರಿಯೆ ಇಲ್ಲದ ಅರಿವು ಹೀನವಪ್ಪುದು ಎಂಬ ಎಚ್ಚರ ಪ್ರಜ್ಞೆಯಲ್ಲಿ ವ್ಯಕ್ತಿ ಸಂಘಟನೆಯ ಭಾಗವಾಗಿರುತ್ತಾನೆ. ಹೋರಾಟದ ಶಕ್ತಿಯೇ ಆಗುತ್ತಾನೆ. ಇಂಥ ಸಂಘಟನಾಶಕ್ತಿಯಾದ ಹೋರಾಟಗಾರನಿಗೆ ನಿದ್ದೆ ಎಚ್ಚರಗಳಲ್ಲಿಯೂ ತನ್ನ ಉದ್ದೇಶಿತ ಕಾರ್ಯ ಸಾಧನೆಯು ಪ್ರಜ್ಞಾವಿಶೇಷವಾದ ಬದ್ಧತೆಯಾಗಿರುತ್ತದೆ, ಹೋರಾಟದ ಮೂಲ ಗುಣವೇ ಬದ್ಧತೆ, ಕಾಯ ವಾಚಾ ಮನಸಾ ಕಾರ್ಯಸಾಧನೆಗೆ ತೊಡಗಿಸಿಕೊಳ್ಳುವ ಬದ್ಧತೆ.

Advertisements

ಚಳವಳಿಗಳನ್ನು ಕ್ರಾಂತಿಗಳನ್ನು ಅಧ್ಯಯನ ಮಾಡಿದಾಗ ಅವುಗಳಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬ ಹೋರಾಟಗಾರರೂ ತಾತ್ವಿಕ ಅರಿವಿನ ಕ್ರಿಯಾರೂಪ ಬದ್ಧತೆಯಿಂದ ಕೂಡಿದ ಜೀವಶಕ್ತಿಯಾಗಿರುತ್ತಾರೆ. ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನೇ ನೋಡಿದಾಗ ಅದರಲ್ಲಿ ಬದ್ಧತೆಯಿಂದ ತೊಡಗಿದ್ದವರೆಲ್ಲ ತ್ಯಾಗ ಬಲಿದಾನಗಳ ವ್ಯಕ್ತಿ ಶಕ್ತಿಗಳು, ಪ್ರಾಣದ ಹಂಗನ್ನು ತೊರೆದು ಕೆಚ್ಚನ್ನು ತೋರಿದ ಸ್ವಾತಂತ್ರ್ಯವೀರರು, ಆಸೆ ಆಮಿಷಗಳಿಗೆ ಬಲಿಯಾಗದವರು, ಏಳು ಎದ್ದೇಳು ಗುರಿಮುಟ್ಟುವವರೆಗೂ ನಿಲ್ಲದಿರು ಎಂಬ ಧ್ಯೇಯ ವಾಕ್ಯಕ್ಕೆ ಎರವಾಗದಂತೆ ಹೋರಾಟ ನಡೆಸಿದವರು.

ದೇಶಕ್ಕೆ ಸಂಕಷ್ಟ ಎದುರಾದಾಗ ಅದನ್ನು ಎದುರಿಸಿ ಸಂಕಷ್ಟದಿಂದ ದೇಶವನ್ನು ಜನತೆಯನ್ನು ಪಾರುಮಾಡುವುದು ಪ್ರಜ್ಞಾವಂತರ ಸಾಮಾಜಿಕ ಹೊಣೆಗಾರಿಕೆ. ಇಂಥ ಹೊಣೆಗಾರಿಕೆಯಿಂದ ವಿಮುಖರಾದವರ ಬಗ್ಗೆ ಪಾಕೀಸ್ಥಾನಿ ಕವಿ ಘನಶ್ಯಾಂ ಅಗರವಾಲ ಅವರು ಹೀಗೆ ಹೇಳಿದ್ದಾರೆ.

ಈತ ರಾಜಕಾರಣಿ
ಈತ ಬಾಂಬ್ ಸೃಷ್ಟಿಸಿದ
ಈತನಿಗೆ ಹತ್ತು ಬಾರುಕೋಲಿನಿಂದ ಬಾರಿಸಿರಿ.

ಈತ ಧರ್ಮಗುರು
ಈತ ಬಾಂಬಿಗೆ ಧರ್ಮದ ಬಣ್ಣ ನೀಡಿದ
ಈತನಿಗೆ ಇಪ್ಪತ್ತು ಬಾರುಕೋಲಿನಿಂದ ಬಾರಿಸಿರಿ.

ಈತ ಕವಿ ಲೇಖಕ ಕಲಾವಿದ
ಈತನಿದ್ದೂ ಬಾಂಬ್ ಸೃಷ್ಟಿಯಾಯಿತು
ಈತನಿಗೆ ನೂರು ಬಾರುಕೋಲಿನಿಂದ ಬಾರಿಸಿ.

ದೇಶದಲ್ಲಿ ವಿನಾಶಕಾರಿ ಬೆಳವಣಿಗೆ ತಲೆದೋರಿದಾಗ ಆದರ ವಿರುದ್ಧ ದನಿ ಎತ್ತುವುದು ನೈತಿಕ ಎಚ್ಚರದ ಸಾಮಾಜಿಕ ಹೊಣೆಗಾರಿಕೆ ಎಂಬುದನ್ನು ಈ ಕವಿತೆ ನಿಷ್ಠುರವಾಗಿ ಸಾರುತ್ತಿದೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಮತ್ತೆ ಮತ್ತೆ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸನ್ನಿವೇಶಗಳು ಎದುರಾಗಿವೆ. ಆಗೆಲ್ಲ ಪ್ರಜ್ಞಾವಂತರು ಎಚ್ಚೆತ್ತುಕೊಂಡು ಸಂಘಟಿತವಾಗಿ ಸರ್ವಾಧಿಕಾರಿ ಶಕ್ತಿಯ ವಿರುದ್ಧವಾಗಿ ಹೋರಾಡಿದ್ದಾರೆ. ಆದು ತುರ್ತು ಪರಿಸ್ಥಿತಿಯಿರಬಹುದು, ಆ ನಂತರದಲ್ಲಿ ಈಗ ಅನುಭವಿಸುತ್ತಿರುವ ಅಘೋಷಿತ ತುರ್ತು ಪರಿಸ್ಥಿತಿಯ ಕರಾಳ ಸನ್ನಿವೇಶಗಳಿರಬಹುದು. ಇಂಥ ಸನ್ನಿವೇಶಗಳಲ್ಲಿ ಪ್ರಜ್ಞಾವಂತಿಕೆಯೆಂಬುದು ಬದ್ಧತೆಯಿಂದ ಸಂಘಟಿತವಾಗಿದೆ. ಹೋರಾಟಕ್ಕಿಳಿದಿದೆ. ಬದುಕಿನ ಎಲ್ಲ ವಲಯಗಳ ಪ್ರಜ್ಞಾವಂತರೂ ಸ್ವ-ಇಚ್ಛೆಯಿಂದ ಹೋರಾಟಕ್ಕಿಳಿದಂತೆ ಜನಾಭಿಪ್ರಾಯ ಭಾಗವಾಗಿ ಪ್ರತಿಭಟನೆ ತೋರಿದ್ದಾರೆ. ಇದು ಚರಿತ್ರೆ ಇದು ವರ್ತಮಾನ. ಇದು ಹೊರಿಸಿಕೊಂಡು ಹೋದ ಬೇಟೆ ನಾಯಿಯ ಕತೆಯಲ್ಲ; ಬದ್ಧತೆಯಿಂದ ಹೋರಾಟಕ್ಕಿಳಿದವರ ಬದುಕಿನ ಸಂಕಥನ. ನಿಜವಾದ ಹೋರಾಟಗಾರ ಗುರಿಸಾಧಿಸಿದ ಮೇಲೂ ನಿಷ್ಕ್ರಿಯನಾಗಿರುವುದಿಲ್ಲ. ಪಡೆದ ಸ್ವಾತಂತ್ರ್ಯದ ಸಂರಕ್ಷಕ ಶಕ್ತಿಯಾಗಿ ಕಾವಲು ನಾಯಿಯಂತೆ ಕ್ರಿಯಾಶಾಲಿಯಾಗಿರುತ್ತಾನೆ. ಇರಬೇಕು. ಇದು ಸಾಮಾಜಿಕ ಹೊಣೆಗಾರಿಕೆಯ ನಿಜವಾದ ಕ್ರತು ಶಕ್ತಿ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ- ಮಣಿಪುರದ ಪೈಶಾಚಿಕ ಕೃತ್ಯ- ಸುಪ್ರೀಮ್ ಉಸ್ತುವಾರಿಯಲಿ ನಡೆಯಲಿ ನ್ಯಾಯಾಂಗ ತನಿಖೆ

ನಮ್ಮ ದೇಶದಲ್ಲಿ ನಡೆದ ದುರಂತವೆಂದರೆ ಹೋರಾಟದ ಸಂಕಥನಗಳನ್ನೇ ತಿರುಚಿದಂತೆ ಅದನ್ನೇ ಚರಿತ್ರೆಯೆಂದು ನಂಬಿಸಲಾಗುತ್ತದೆ. ನಿಜವಾದ ಹೋರಾಟಗಾರರು ಹೇಳಹೆಸರಿಲ್ಲದಂತೆ ಕಳೆದುಹೋಗುತ್ತಾರೆ. ಹೋರಾಟದ ಪ್ರತಿಫಲವನ್ನು ಉಣ್ಣುವ ಫಲಾನುಭವಿಗಳು ವ್ಯವಸ್ಥೆಯ ಭಾಗವಾಗಿದ್ದವರಾಗುತ್ತಾರೆ. ಇವರು ಆರು ಕೊಟ್ಟರೆ ಅತ್ತೆಯ ಕಡೆ ಮೂರು ಕೊಟ್ಟರೆ ಸೊಸೆಯ ಕಡೆ ಎಂಬ ವ್ಯವಹಾರ ನೀತಿಯ ಅವಕಾಶವಾದಿಗಳು. ಇವರು ವುಟ್ಟು ಹೋರಾಟಗಾರರು, ಶಬ್ದ ಗಾರುಡಿಗಳು. ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಜಾಣ ಮೌನವಹಿಸಿ ಆಳುವ ವ್ಯವಸ್ಥೆಗೆ ಪರೋಕ್ಷ ಬೆಂಬಲ ನೀಡಿದಂತೆ ತಟಸ್ಥವಾಗಿದ್ದವರು. ಆದರೆ ವ್ಯವಸ್ಥೆ ಬದಲಾದ ತಕ್ಷಣದಲ್ಲಿ ಮೌನ ಮುರಿದು ಬಣ್ಣ ಬದಲಾಯಿಸಿದವರು. ಬದಲಾದ ವ್ಯವಸ್ಥೆಗೆ ತಾವೇ ಕಾರಣವೆಂಬಂತೆ ಪೋಜು ಕೊಡುವ ಅವಕಾಶವಾದಿಗಳು. ಇಂಥವರು ಬದಲಾದ ರಾಜಕಾರಣದ ಸಂದರ್ಭದಲ್ಲಿ ಭವಿಷ್ಯದ ರಾಜಕಾರಣಕ್ಕೆ ದಿಕ್ಕು ದಿಸೆ ರೂಪಿಸುವ ರೂವಾರಿಗಳಂತೆ ಮಾರ್ಗದರ್ಶನ ನೀತಿಗಳನ್ನು ಹೇಳುತ್ತಾ ಹೋಗುತ್ತಾರೆ. ರಾಜ ಗುರುಗಳಾಗುತ್ತಾರೆ. ಕ್ರಾಂತಿಯ ಮಾತನಾಡಬೇಕಿದ್ದ ಸಂದರ್ಭದಲ್ಲಿ ಜಾಣ ಮೌನ ಧ್ಯಾನಿಗಳಾಗಿದ್ದ ಇವರು ತಮ್ಮ ಮೌನಕ್ಕೆ ನೀಡುತ್ತಿದ್ದ ಸಮರ್ಥನೆಯ ನೀತಿಯೆಂದರೆ ಪಕ್ಷಾತೀತ ನಡೆಯ ನಿಲುವೇ ಸಾಹಿತ್ಯ ಸಂಸ್ಕೃತಿಯ ಚೆಲುವು.

‘ಜನತೆಯ ನೆನಪಿನ ಶಕ್ತಿ ಕಿರಿದು’ -ಎಂಬುದು ಇವರ ಗಾಢನಂಬಿಕೆ. ಆದ್ದರಿಂದಲೇ ರಾಜಕಾರಣದ ಆಡಳಿತ ವ್ಯವಸ್ಥೆ ಬದಲಾಗುತ್ತಿದ್ದ ಹಾಗೆಯೇ ಅವಘಡ ಕಾಲದ ಎಲ್ಲ ಅವಾಂತರಗಳಿಗೆ ಮದ್ದು ಅರೆಯುವ ಬುದ್ಧಿವಂತಿಕೆಯನ್ನು ಮೆರೆಯುತ್ತಾರೆ. ಎಲ್ಲ ಮುಖ್ಯ ವಾಹಿನಿಗಳ ಮುಂದೆ ಇವರೇ ವ್ಯವಸ್ಥೆಯ ಮುಖವಾಣಿಗಳಾಗುತ್ತಾರೆ. ಮಾತಾಳಿಗಳಾಗುತ್ತಾರೆ. ಹೀಗಾಗಿ ಸಾಹಿತ್ಯ ಕಲೆ ಸಂಸ್ಕೃತಿ ಎಂಬುವು ಇಂಥ ಅಡ್ಡ ಬಡುಕರಿಗೆ ಸರಕುಗಳಾಗುತ್ತವೆ. ಯಾವ ಸಮಾಜದಲ್ಲಿ ಇಂಥ ಅಡ್ಡ ಬಡುಕರ ವಹಿವಾಟಿಗೆ ಅವಕಾಶಗಳು ತೆರೆಯುತ್ತಾ ಹೋಗುತ್ತವೆಯೋ ಅಂಥ ಸಮಾಜದಲ್ಲಿ ವಿವೇಕವೆಂಬುದು ತೆರೆಯ ಮರೆಗೆ ಸರಿದು ನಿಜದ ಸಾವಾಗುತ್ತದೆ. ಹೆಣವಾಸನೆಯ ವಾತಾವರಣದಲ್ಲಿ ಮೂಗುಳ್ಳವರು ಹೊರಗೆ ಹೋಗುತ್ತಾರೆ. ಉಗಳಿದ್ದು ಪ್ರಸಾದ ಹೂಸಿದ್ದು ಪರಿಮಳವನ್ನುವ ಪಡೆವಳರಿಂದ ಮಾತಿನ ಮರಳು ಮನೆಗಳು ಭ್ರಮೆಯ ಅರಮನೆಗಳು ಏಳುತ್ತಾ ಹೋಗುತ್ತವೆ. ಆದರೆ ಬದಲಾದ ವ್ಯವಸ್ಥೆಯೊಳಗಿನ ಬದಲಾವಣೆಯ ವ್ಯಕ್ತಿ ಶಕ್ತಿ ವಿವೇಕಶಾಲಿಯಾಗಿದ್ದಾಗ ಹೆಣವಾಸನೆಗೆ ಅವಕಾಶವಿಲ್ಲದೆ ನಿಜದ ನಡೆ ನಿಲುವಾಗುತ್ತದೆ. ಸಾಹಿತ್ಯ ಕಲೆ ಸಂಸ್ಕೃತಿ ಇತ್ಯಾದಿಗಳು ಹಿಪೋಕ್ರಸಿಗಳ ಬಂಡವಾಳವಾಗದೆ ಬದ್ಧತೆಯ ಅರಿವಿನ ಕ್ರಿಯೆಗಳಾಗುತ್ತವೆ. ಮಾತು ಜ್ಯೋತಿರ್ಲಿಂಗವಾಗುತ್ತದೆ. ಪರಮ ಜಿನೇಂದ್ರವಾಣಿಯೇ ಸರಸ್ವತಿ ಎಂಬ ಮಹಾಕವಿ ಪಂಪನ ಮಾತಿನ ಸತ್ಯ ಸಮಾಜದಲ್ಲಿ ನಿತ್ಯದ ನಿಲುವಾಗುತ್ತದೆ. ನಿಜದ ನಡೆಯಾಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X