- ಆರ್ಎಮ್ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಮೂವರು ಆರೋಪಿಗಳ ಬಂಧನಕ್ಕಾಗಿ ಪೊಲೀಸರ ಹುಡುಕಾಟ
ರಾಜ್ಯದಲ್ಲಿ ಮಳೆಯ ಕೊರತೆ ಹಾಗೂ ಇಳುವರಿ ಕಡಿಮೆಯಿಂದ ಟೊಮ್ಯಾಟೊ ದರ ಗಗನಕ್ಕೇರಿದ್ದು, ಕೊಳ್ಳುವವರ ಕೈ ಸುಡುವಂತಾಗಿದೆ. ಈ ಬೆನ್ನಲ್ಲೆ, ಎಲ್ಲೆಡೆ ಟೊಮ್ಯಾಟೊ ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳ ಹಿಂದೆ 2 ಟನ್ಗೂ ಅಧಿಕ ಟೊಮ್ಯಾಟೊ ಇದ್ದ ಬೊಲೆರೋ ವಾಹನವನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಭಾಸ್ಕರ್, ಸಿಂಧೂಜಾ ಬಂಧಿತರು. ಇನ್ನೂ ಮೂವರು ಆರೋಪಿಗಳ ಬಂಧನಕ್ಕಾಗಿ ಆರ್ಎಂಸಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
2 ಸಾವಿರ ಕೆಜಿಗೂ ಅಧಿಕ ಟೊಮ್ಯಾಟೊ ಇದ್ದ ಬೊಲೆರೋ ವಾಹನವನ್ನು ಕಳ್ಳತನ ಮಾಡಿದ್ದ ಆರೋಪಿಗಳು, ಯೋಜನೆ ರೂಪಿಸಿ ಟೊಮ್ಯಾಟೊವನ್ನು ಚೆನ್ನೈ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿದ್ದಾರೆ. ಬಳಿಕ ಖಾಲಿ ಬೊಲೆರೋ ವಾಹನವನ್ನು ತಂದು ನಿಲ್ಲಿಸಿ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಏನಿದು ಘಟನೆ?
ರಾಜ್ಯದಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾದ ಬೆನ್ನಲ್ಲೆ ಕಳವು ಪ್ರಕರಣಗಳು ವರದಿಯಾಗುತ್ತಿವೆ. ಸುಮಾರು 2 ಟನ್ಗೂ ಹೆಚ್ಚು ಟೊಮ್ಯಾಟೊ ಇದ್ದ ಬೊಲೆರೋ ವಾಹನವನ್ನು ಕಳ್ಳರು ಜು.8ರಂದು ಕಳವು ಮಾಡಿ ಪರಾರಿಯಾಗಿದ್ದರು.
ಜು. 8ರಂದು ನಗರದ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಈ ಘಟನೆ ನಡೆದಿತ್ತು. ಟೊಮ್ಯಾಟೊ ಬೆಳೆದ ರೈತ ಹಿರಿಯೂರಿನಿಂದ ಕೋಲಾರದ ಕಡೆಗೆ ಸಾಗಿಸುತ್ತಿದ್ದರು. ಈ ವೇಳೆ, ಕಾರಿನಲ್ಲಿ ಬಂದ ಮೂವರು ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೊಲೆರೋ ವಾಹನದ ಸಮೇತ 2 ಟನ್ ಟೊಮ್ಯಾಟೊ ಕದ್ದ ಕಳ್ಳರು : ರೈತ ಕಂಗಾಲು
ನಂತರ ಆರ್ಎಮ್ಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ವಾಹನವನ್ನು ಅಡ್ಡಗಟ್ಟಿ, ಪೀಣ್ಯ ಬಳಿ ನಿಮ್ಮ ಬೊಲೆರೋ ವಾಹನದಿಂದ ನಮ್ಮ ಗಾಡಿಗೆ ಟಚ್ ಮಾಡಿದ್ದೀರಿ ಎಂದು ಜಗಳ ಆರಂಭಿಸಿ, ಬೊಲೆರೋ ಚಾಲಕ ಮತ್ತು ರೈತನ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೊಬೈಲ್ ಕಿತ್ತುಕೊಂಡು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ನಂತರ ಟೊಮ್ಯಾಟೊ ಕಂಡ ಅವರು ಬೊಲೆರೋ ಸಮೇತ ಕದ್ದು, ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಆರ್ಎಮ್ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.