ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಕೆ. ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ನಾಗಶೆಟ್ಟಿ ಕುಲಕರ್ಣಿಯನ್ನು ಕೂಡಲೇ ಹುದ್ದೆಯಿಂದ ಅಮಾನತು ಮಾಡಿ ತನಿಖೆ ನಡೆಸುವಂತೆ ಬೀದರ್ ಜಿಲ್ಲಾ ದಲಿತ ವಿದ್ಯಾರ್ಥಿ ಪರಿಷತ್ ಒತ್ತಾಯಿಸಿದೆ.
“ಸರ್ಕಾರಿ ವಸತಿ ಶಾಲೆಗಳಲ್ಲಿ ಓದುವ ಮಕ್ಕಳು ಆರ್ಥಿಕವಾಗಿ ಬಡವರಾಗಿರುತ್ತಾರೆ. ತಮ್ಮ ಮನೆಯಲ್ಲಿ ವಿದ್ಯಾಭ್ಯಾಸ ನಡೆಸಲು ತೊಂದರೆಯಾಗುವ ಮಕ್ಕಳು ಹೆಚ್ಚು ವಸತಿ ಶಾಲೆಗಳ ಮೊರೆ ಹೋಗುತ್ತಾರೆ. ಇದನ್ನೇ ದುರುಪಯೋಗ ಪಡಿಸಿಕೊಂಡ ಪ್ರಾಂಶುಪಾಲರು ಇಂತಹ ಹೀನ ಕೃತ್ಯಗಳನ್ನು ನಡೆಸುತ್ತಾರೆ. ಶಾಲೆಯಲ್ಲಿ ಕಲಿಸುವ ಶಿಕ್ಷಕರು ಅದರಲ್ಲಿಯೂ ವಸತಿ ಶಾಲೆಯ ಶಿಕ್ಷಕರು ಅಲ್ಲಿ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಶಿಕ್ಷಣ ನೀಡಬೇಕು. ಇಂತಹ ಹೀನ ಕೆಲಸಗಳಿಂದ ಎಲ್ಲ ವಸತಿ ಶಾಲೆಗಳ ಮೇಲೆ ಪಾಲಕರಿಗೆ ಅನುಮಾನ ಮೂಡುತ್ತದೆ. ಇದರಿಂದ ವಸತಿ ಶಿಕ್ಷಣದಿಂದ ಪಾಲಕರು ತಮ್ಮ ಮಕ್ಕಳನ್ನು ದೂರ ಇಡುವ ಕಲ್ಪನೆ ಮೂಡುತ್ತದೆ ಎಂಬುದಕ್ಕೆ ಇದೊಂದು ಪ್ರಕರಣ ಸಾಕ್ಷಿಯಾಗುತ್ತದೆ” ಎಂದು ಆರೋಪಿಸಿದರು.
“ತಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ವಸತಿ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮಗೆ ಆದ ಅನ್ಯಾಯದ ಬಗ್ಗೆ ತಮ್ಮ ಕೈ ಬರಹದ ಮೂಲಕ ಅಲ್ಲಿನ ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ. ಆದರೆ ಪತ್ರ ಬರೆದು 10 ದಿನಗಳಾದರೂ ಅಲ್ಲಿನ ಶಿಕ್ಷಕ ವೃಂದ ಯಾವುದೇ ಸ್ಪಂದನೆ ನೀಡದಿರುವುದು ಪ್ರಾಂಶುಪಾಲರನ್ನು ರಕ್ಷಿಸುವ ಕೆಲಸ ಮಾಡಿದಂತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಾಸ್ಟೆಲ್ ವಾರ್ಡನ್ ಅಮಾನತಿಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಆಗ್ರಹ
“ಬೀದರ್ ಜಿಲ್ಲಾಧಿಕಾರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯ ಅಧಿಕಾರಿಗಳು ಈ ಪ್ರಕಾರವನ್ನು ಗಂಭೀರವಾಗಿ ಪರಿಗಣಿಸಿ ವಸತಿ ಶಾಲೆಯ ಪ್ರಾಂಶುಪಾಲ ನಾಗಶೆಟ್ಟಿ ಕುಲಕರ್ಣಿಯನ್ನು ಅಮಾನತು ಮಾಡಿ ಸಂಪೂರ್ಣ ಶಿಕ್ಷಕ ವೃಂದವನ್ನು ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲಿನ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ತೀವ್ರ ಹೋರಾಟ ರೂಪಿಸಲಾಗುವುದು” ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಸಂದೀಪ್ ಕಾಂಟೆ ಎಚ್ಚರಿಸಿದರು.