ಜಗತ್ತು ಸಹನೆ ಕಳೆದುಕೊಳ್ಳುತ್ತಿದೆ. ಬಹಳಷ್ಟು ‘ಅಗ್ರೆಸಿವ್’ ಆಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಕೋಪಗೊಳ್ಳುವುದು, ಸ್ಮಿಮಿತ ಕಳೆದುಕೊಳ್ಳುವುದು, ಭಾವನೆಗಳ ಹತೋಟಿ ಇಲ್ಲದಿರುವುದು ಮನಸ್ಥಿತಿಯನ್ನು ಆವೇಗಗೊಳಿಸುತ್ತಿದೆ. ಈ ಮಾನಸಿಕ ಸ್ಥಿತಿಯು ಹಲ್ಲೆ, ಕೊಲೆಯಂತಹ ಹಿಂಸಾತ್ಮಕ ಕೃತ್ಯಗಳಿಗೆ ಕಾರಣವಾಗುತ್ತಿವೆ. ಅಂತಹದ್ದೇ ಘಟನೆಯಲ್ಲಿ ಬೆಳಗಾವಿಯಲ್ಲಿ ಯುವಕನೊಬ್ಬ ತನ್ನ ಸಹ ಪ್ರಯಾಣಿಕನಿಗೆ ಚಾಕು ಹಿರಿದಿರುವ ಘಟನೆ ನಡೆದಿದೆ.
ಬಸ್‌ನಲ್ಲಿ ಕಿಟಿಕಿ ಪಕ್ಕದ ಸೀಟ್‌ನಲ್ಲಿ ಕೂರಲು ಇಬ್ಬರು ಪ್ರಯಾಣಿಕರ ನಡುವೆ ಗಲಾಟೆ ನಡೆದಿದೆ. ಜಗಳವು ವಿಕೋಪಕ್ಕೆ ತಿರುಗಿದ್ದು, ಚಾಕು ಇರಿತದಂತಹ ಗಂಭೀರ ಕೃತ್ಯದ ಹಂತಕ್ಕೆ ತಲುಪಿದೆ.
ಬೆಳಗಾವಿಯ ಪಂಚಬಾಳೇಕುಂದ್ರಿ ಗ್ರಾಮದಿಂದ ಬೆಳಗಾವಿಗೆ ತೆರಳುತ್ತಿದ್ದ ಬಸ್‌ನಲ್ಲಿ ಘಟನೆ ನಡೆದಿದೆ. ಇಬ್ಬರು ಯುವಕರು ಕಿಟಕಿ ಪಕ್ಕದ ಸೀಟಿಗಾಗಿ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ, ಯುವಕನೋರ್ವ ಮತ್ತೊಬ್ಬ ಯುವಕನಿಗೆ ಚಾಕು ಇರಿದಿದ್ದಾನೆ.
ಪಂಚಬಾಳೇಕುಂದ್ರಿ ಗ್ರಾಮದ ಮಜ್ಜು ಸನದಿ (20) ಎಂಬ ಯುವಕನ ಎದೆ ಭಾಗಕ್ಕೆ ಚಾಕು ಇರಿದು, ಆರೋಪಿ ಯುವಕ ಪರಾರಿಯಾಗಿದ್ದಾನೆ. ಗಾಯಗೊಂಡ ಮಜ್ಜು ಸನದಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.