ಶರಣಾಗುವ ಯಾವುದೇ ಪ್ರಶ್ನೆ ಇರಾನ್ ಮುಂದೆ ಇಲ್ಲ ಎಂದು ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಹೇಳಿದ್ದಾರೆ.
ಶಾಂತಿಯ ಜೊತೆ ಇರಾನ್ ದೃಢವಾಗಿ ನಿಲ್ಲುವಂತೆ ಯುದ್ಧದ ಜೊತೆಯು ದೃಢವಾಗಿ ನಿಲ್ಲಲಿದೆ. ನಮ್ಮ ರಾಷ್ಟ್ರ ಯಾರಿಗೂ ಶರಣಾಗುವುದಿಲ್ಲ ಎಂದು ಅವರು ದೂರದರ್ಶನದ ಸಂದೇಶದಲ್ಲಿ ಹೇಳಿದ್ದಾರೆ ಎಂದು ʼತಸ್ನಿಮ್ʼ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ ಮತ್ತು ಅದರ ಇತಿಹಾಸವನ್ನು ತಿಳಿದಿರುವವರು ಇರಾನಿಯನ್ನರು ಬೆದರಿಕೆಯ ಭಾಷೆಗೆ ಸರಿಯಾಗಿ ಎಂದಿಗೂ ಉತ್ತರಿಸುವುದಿಲ್ಲ ಎಂದು ತಿಳಿದಿದ್ದಾರೆ ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗೆ ಇರಾನ್ ನಾಯಕ ತಿರುಗೇಟು ನೀಡಿದ್ದಾರೆ.
ಯಾವುದೇ ಮಿಲಿಟರಿ ಹಸ್ತಕ್ಷೇಪವು ನಿಸ್ಸಂದೇಹವಾಗಿ ಸರಿಪಡಿಸಲಾಗದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ತಿಳಿಯಬೇಕು ಎಂದು ಅವರು ಹೇಳಿದ್ದಾರೆ.
ಇರಾನ್‌ನಲ್ಲಿ 585 ಮಂದಿ ಮೃತ್ಯು
ಬುಧವಾರ ಮುಂಜಾನೆ ಇರಾನ್‌ನ ರಾಜಧಾನಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ತೀವ್ರ ವಾಯುದಾಳಿ ನಡೆಸಿದ್ದು, ಇರಾನ್ ನಾದ್ಯಂತ ಕನಿಷ್ಠ 585 ಜನರು ಮೃತಪಟ್ಟಿದ್ದಾರೆ ಮತ್ತು 1,326 ಜನರು ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪು ಹೇಳಿದೆ.
ಇದನ್ನು ಓದಿದ್ದೀರಾ? ಏರ್ ಇಂಡಿಯಾ ಬೋಯಿಂಗ್ 787 ವಿಮಾನಗಳಲ್ಲಿ ಗಂಭೀರ ದೋಷಗಳಿಲ್ಲ: ವಾಯುಯಾನ ಸಂಸ್ಥೆ
ಇಸ್ರೇಲಿ ದಾಳಿಗಳಲ್ಲಿ ಮೃತಪಟ್ಟವರಲ್ಲಿ 239 ಜನರು ನಾಗರಿಕರು ಮತ್ತು 126 ಜನರು ಭದ್ರತಾ ಸಿಬ್ಬಂದಿ ಎನ್ನಲಾಗಿದೆ.
ಮಹ್ಸಾ ಅಮಿನಿಯ ಸಾವಿನ ವಿರುದ್ಧ 2022 ರಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿವರವಾದ ಸಾವುನೋವು ಅಂಕಿಅಂಶಗಳನ್ನೂ ಒದಗಿಸಿದ್ದ ಗುಂಪು, ಇಸ್ಲಾಮಿಕ್ ಗಣರಾಜ್ಯದಲ್ಲಿನ ಸ್ಥಳೀಯ ವರದಿಗಳನ್ನೂ ಪರಿಶೀಲಿಸುತ್ತದೆ.
ಇರಾನ್‌ನ ಮಿಲಿಟರಿ ಮತ್ತು ಪರಮಾಣು ಕಾರ್ಯಕ್ರಮವನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ ನಡೆಸಿದ ವಾಯು ಕಾರ್ಯಾಚರಣೆಯ ಆರನೇ ದಿನದಂದು ಟೆಹ್ರಾನ್ ನಿವಾಸಿಗಳು ಗುಂಪು ಗುಂಪಾಗಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ತಿಳಿದು ಬಂದಿದೆ.
ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ನಿರ್ಮಿಸುವ ಸಾಧ್ಯತೆಯನ್ನು ತಡೆಯಲು ಇಸ್ರೇಲ್ ತನ್ನ ವಾಯುದಾಳಿ ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕಾಯಿತು ಎಂದು ಇಸ್ರೇಲ್ ಹೇಳಿಕೊಂಡಿದೆ. ಇರಾನ್ ಮತ್ತು ಅಮೆರಿಕ ಪರಮಾಣು ಕುರಿತು ಹೊಸ ರಾಜತಾಂತ್ರಿಕ ಒಪ್ಪಂದದ ಸಾಧ್ಯತೆಯ ಕುರಿತು ಮಾತುಕತೆ ನಡೆಸುತ್ತಿದ್ದಾಗ ಈ ಬೆಳವಣಿಗೆಗಳು ಸಂಭವಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತುಕತೆಗಾಗಿ ನಿಗದಿಪಡಿಸಿದ 60 ದಿನಗಳ ಅವಧಿಯ ನಂತರ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.