ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್‍ನಲ್ಲಿ ಸುಮಾರು 10 ಸಾವಿರ ಮಂದಿ ಭಾರತೀಯರು ಸಿಲುಕಿದ್ದು, ಆ ಪೈಕಿ ವಿದ್ಯಾರ್ಥಿಗಳು ಸೇರಿದಂತೆ 125ಕ್ಕೂ ಅಧಿಕ ಮಂದಿ ಕನ್ನಡಿಗರಿದ್ದಾರೆ. ಅವರೆಲ್ಲರನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಕರೆತರಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದೇವೆ’ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಇಸ್ರೇಲ್ ಮತ್ತು ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಅಲ್ಲಿರುವ ಅನಿವಾಸಿ ಭಾರತೀಯರು ಆತಂಕಗೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಭಾರತೀಯ ರಾಯಭಾರಿ ಕಚೇರಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಹೇಳಿದರು.
ರಾಜ್ಯದಿಂದ ಅಧ್ಯಯನಕ್ಕಾಗಿ ತೆರಳಿದ್ದ ನದೀಮ್ ಹುಸೈನ್ ಸೇರಿದಂತೆ 9 ಮಂದಿ ವಿದ್ಯಾರ್ಥಿಗಳಿದ್ದು, ಅವರ ಪೋಷಕರು ತಮ್ಮನ್ನು ಸಂಪರ್ಕಿಸಿದ್ದಾರೆ. ಅವರೊಂದಿಗೆ ಇರಾನ್‍ನ ವಿವಿಧ ವಿವಿಗಳಲ್ಲಿ ಅಧ್ಯಯನಕ್ಕೆ ತೆರಳಿರುವ ರಾಜ್ಯದ 50ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಅಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಆಲಿಪುರದ ವಿದ್ಯಾರ್ಥಿಗಳು ಸೇರಿ ಇನ್ನಿತರರು ಇರಾನ್ ರಾಜಧಾನಿ ಟೆಹರಾನ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ, ಧಾರ್ಮಿಕ ಅಧ್ಯಯನ, ಉದ್ಯೋಗ ಹಾಗೂ ಪ್ರವಾಸಕ್ಕಾಗಿ ತೆರಳಿದ್ದು, ಅಲ್ಲಿ ಸಿಲುಕಿದ್ದಾರೆ ಎಂದು ಗೊತ್ತಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪಾದಚಾರಿಗಳನ್ನು ‘ಬೇವರ್ಸಿ’ಗಳಂತೆ ನಡೆಸಿಕೊಳ್ತಿದೆ ಬೆಂಗಳೂರು ನಗರ!
ಹೀಗಾಗಿ, ಅವರೆಲ್ಲರನ್ನು ಭಾರತೀಯ ರಾಯಭಾರಿ ಕಚೇರಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸಂಪರ್ಕ ಮಾಡುತ್ತಿದ್ದೇವೆ. ಅವರ ಮಾಹಿತಿಯನ್ನು ವಿದೇಶಾಂಗ ಸಚಿವಾಲಯ ಹಾಗೂ ರಾಯಭಾರಿ ಕಚೇರಿಗೆ ನೀಡಲಾಗಿದೆ. ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರಕಾರವು ಪ್ರಯತ್ನ ನಡೆಸಿದೆ ಎಂದು ಆರತಿ ಕೃಷ್ಣ ಹೇಳಿದರು.
‘ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರ ಪೈಕಿ 5 ಸಾವಿರ ಮಂದಿಯನ್ನು ಹಂತ-ಹಂತವಾಗಿ ಇರಾನ್‍ನ ಟೆಹರಾನ್ ಸಮೀಪದಲ್ಲಿನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಅಲ್ಲಿಂದ ಅವರೆಲ್ಲನ್ನು ಭಾರತ ದೇಶಕ್ಕೆ ಕರೆತರಲು ಅಗತ್ಯ ಕ್ರಮ ವಹಿಸಲಾಗುತ್ತಿದೆ. ಹೀಗಾಗಿ ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ’ ಎಂದು ಆರತಿ ಕೃಷ್ಣ ಭರವಸೆ ನೀಡಿದರು.