ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕು ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕರಡಿಕಲ್ಲು ಅತ್ತೂರು ಕೊಲ್ಲಿಯಲ್ಲಿ ಸರಿ ಸುಮಾರು 52 ಬುಡಕಟ್ಟು ಸಮುದಾಯದ ಕುಟುಂಬಗಳು ‘ ಇದು ನಮ್ಮ ಪೂರ್ವಜರ ಭೂಮಿ, ಇಲ್ಲಿಯೇ ಬದುಕಲು ಅವಕಾಶ ಕೊಡಿ ‘ ಎಂದು ದಿನಾಂಕ-05-05-2025 ರಂದು ಅರಣ್ಯ ಪ್ರವೇಶ ಮಾಡಿದ್ದರು.
ಆದರೆ, ಇದೀಗ ನಾಗರಹೊಳೆ ಬಾಳೆಕಾವು ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ ಯಾಗಿದೆ, ತಕ್ಷಣವೇ ಗುಡಿಸಲುಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರು.
ಇಂದು ಏಕಾಏಕಿ ಸರಿ ಸುಮಾರು 250 ಜನ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಹುಲಿ ಸಂರಕ್ಷಣಾ ಪಡೆಯ ಸಿಬ್ಬಂದಿ, ಅಧಿಕಾರಿಗಳು ಜಮಾಯಿಸಿ ಬುಡಕಟ್ಟು ಜನರ 8 ಗುಡಿಸಲು ಪೈಕಿ 6 ಗುಡಿಸಲು ಕಿತ್ತು ಹಾಕಿ. ಪ್ಲಾಸ್ಟಿಕ್ ಹೊದಿಕೆ, ಕಂಬಗಳು ಇತ್ಯಾದಿ ಪರಿಕರಗಳನ್ನೆಲ್ಲ ಹೊತ್ತೋಯ್ದಿದ್ದಾರೆ.

ಇಷ್ಟೆಲ್ಲ ನಡೆದರು ಬುಡಕಟ್ಟು ಸಮುದಾಯದ 52 ಕುಟುಂಬಗಳು ವಿಚಲಿತಾರಾಗದೆ, ‘ ನಮ್ಮ ಕಾಡು, ನಮ್ಮ ಹಕ್ಕು ‘ ನಾವು ಇಲ್ಲಿಯೇ ಇರುತ್ತೇವೆ ಕಾಡಿನಿಂದ ಹೊರ ನಡೆಯುವುದಿಲ್ಲ ಎಂದು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ತಮ್ಮ ಹಕ್ಕಿನ ಪ್ರತಿಪಾದನೆ ಭಾಗವಾಗಿ ಹೋರಾಟ ನಡೆಸುತಿದ್ದಾರೆ.
ನಾಗರಹೊಳೆ ಜಮ್ಮಾ ಪಾಲೆ ಹಕ್ಕು ಸ್ಥಾಪನ ಸಮಿತಿಯ ರಾಜ ಈದಿನ. ಕಾಮ್ ಜೊತೆ ಮಾತನಾಡಿ ” ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಆದಿವಾಸಿ ಬುಡಕಟ್ಟು ಜನಾಂಗದವರು ನೆಲ ಮೂಲ ನಿವಾಸಿಗಳು ಇಲ್ಲಿಯೇ ಹುಟ್ಟಿ, ಬೆಳೆದ ಕಾಡಿನ ಮಕ್ಕಳು. ಅರಣ್ಯ ಕಾಯ್ದೆ ಹೆಸರಿನಲ್ಲಿ, ಪುನರ್ವಸತಿ ಕಲ್ಪಿಸುವ ವಾಗ್ದಾನ ನೀಡಿ ಹೊರ ಹಾಕಿ. ಯಾವುದನ್ನೂ ಪರಿಪಾಲನೆ ಮಾಡದ ನಂಬಿಕೆ ದ್ರೋಹಿಗಳು ಇವರು. ಕಾಡನ್ನು ಉಳಿಸಿ, ಬೆಳಸಿ ಕಾಡೇ ಉಸಿರಾನ್ನಾಗಿಸಿಕೊಂಡ ಜನರಿಗೆ, ಕಾಡಿನ ಜೊತೆ ಜೊತೆಗೆ ಪೂರ್ವಜರ ಸಂಭಂದ, ಹುಟ್ಟಿ ಬೆಳೆದ ಜಾಗದ ಬಾವನಾತ್ಮಕ ಸಂಭಂದ ಬೆಸೆದಿದೆ. ಹೀಗಿರುವಾಗ, ಅರಣ್ಯ ಇಲಾಖೆ ಅಧಿಕಾರಿಗಳು ಪತ್ರಿಕೆಗಳ ಮೂಲಕ ಇಲ್ಲ ಸಲ್ಲದ ಹೇಳಿಕೆ ನೀಡಿ ವಿಚಾರ ಪಲ್ಲಟ ಮಾಡುತ್ತಿದ್ದಾರೆ.

ಅಧಿಕಾರಿಗಳು ಇಲ್ಲಿ ಬುಡಕಟ್ಟು ಜನರು ಇದ್ದರು ಎನ್ನಲು ಯಾವುದೇ ಕುರುಹು ಇಲ್ಲ ಎನ್ನುತ್ತಾರೆ. ಆದರೆ, ಶಾಲೆಯಲಿ ಓದಿದ ಮಕ್ಕಳ ದಾಖಲಾತಿ, ವರ್ಗಾವಣೆ ಪ್ರಮಾಣ ಪತ್ರ, ದೃಡೀಕರಣ ಪತ್ರ, ಪಡಿತರ ಚೀಟಿ, ಮತದಾರರ ಚೀಟಿ, ಆಧಾರ್ ಹೀಗೆ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಇದೆಲ್ಲವೂ ಸಹ ಕರಡಿಕಲ್ಲು ಅತ್ತೂರು ಕೊಲ್ಲಿ ಗ್ರಾಮ ಎಂದೇ ನಮೂದು ಆಗಿದೆ. ಅಧಿಕಾರಿಗಳು ಯಾವುದನ್ನೂ ಪರಿಶೀಲನೆ ಮಾಡದೆ, ಮಾಧ್ಯಮಗಳು ಸಹ ಇದನ್ನೆಲ್ಲಾ ತಿಳಿಯದೆ ಇಲ್ಲಸಲ್ಲದ ರೀತಿಯಲ್ಲಿ ಬಿತ್ತರ ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದೆ ಸರಿ ಅನ್ನುವಂತೆ ಬಿಂಬಿತವಾಗಿದೆ “.
ಆದಿವಾಸಿ ಬುಡಕಟ್ಟು ಜನ ಇಲ್ಲಿಯೇ ವಾಸ ಮಾಡಿರುವುದಕ್ಕೆ ಸ್ಮಶಾನವಿದೆ. ಮನೆಗಳ ಕುರುಹು ಇದೆ. ಆಚರಣೆಯ ಭಾಗವಾದ ದೇವರ ಕಲ್ಲುಗಳು ಇದ್ದಾವೆ. ಕಾಡಿನಲ್ಲಿ ಇದೆಲ್ಲವೂ ಹೇಗೆ ಬರಲು ಸಾಧ್ಯ?. ಪೂರ್ವಜರನ್ನು ಇಲ್ಲಿ ಹೂಳಲು ಹೇಗೆ ಸಾಧ್ಯ? ನೂರಾರು ವರ್ಷ ಬಾಳಿ ಬದುಕಿದ್ದಾರೆ. ಇವಾಗ ಕಡಿಮೆ ಅಂದರು 50 ವರ್ಷಗಳ ಇತ್ತೀಚಿಗೆ ದಾಖಲೆ ಪ್ರಕಾರ ಇಲ್ಲಿಯೇ ಇರುವುದಕ್ಕೆ ಪೂರಕ ದಾಖಲೆಗಳು ಇವೆ.

ಇದನ್ನೆಲ್ಲಾ ಗಮನಿಸದೆ ಕಾಡು ಪ್ರವೇಶಿಸಿದ ಜನರ ಮೇಲೆ ಗದಪ್ರಹಾರ ನಡೆಸುವುದು ಎಷ್ಟು ಸರಿ. 52 ಕುಟುಂಬಗಳನ್ನು ಹೊರ ಹಾಕಲು 250 ಜನ ಸಿಬ್ಬಂದಿಗಳು ಬಂದು ಗುಡಿಸಲು ಕೀಳುತ್ತಾರೆ ಅಂದರೆ ಇದಕ್ಕಿಂತ ದೌರ್ಜನ್ಯ ಮತ್ತೊಂದು ಇರಲು ಸಾಧ್ಯವೇ?. ಏನೇ ಆಗಲಿ ಕಾಡು ನಮ್ಮದು, ನಮ್ಮ ಹಕ್ಕು. ಇಲ್ಲಿಯೇ ಇರುತ್ತೇವೆ. ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.

ಬುಡಕಟ್ಟು ಸಮುದಾಯದ ಶಿವು ಮಾತನಾಡಿ ” 8 ಗುಡಿಸಲಿನಲ್ಲಿ 6 ಗುಡಿಸಲು ಕಿತ್ತಿದ್ದಾರೆ. ಈಗ ಇರುವುದು 2 ಗುಡಿಸಲು. ಅಲ್ಲಿ ಅಷ್ಟು ಜನ ಇರಲು ಸಾಧ್ಯವೇ ಇಲ್ಲ. ಇನ್ನ ಒಂದು ಗುಡಿಸಿಲಿನಲ್ಲಿ ಅಕ್ಕಿ, ಬೇಳೆ, ವಸ್ತುಗಳನ್ನು ಇರಿಸಿದ್ದೇವೆ. ಈಗ ಪೊಲೀಸರು, ಅರಣ್ಯ ಇಲಾಖೆ ಮಾನವೀಯತೆಯನ್ನು ಮರೆತು ಗುಡಿಸಲು ಕಿತ್ತು, ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾರೆ. ನಾವೆಲ್ಲರೂ ಇಲ್ಲಿಯೇ ಇದ್ದೇವೆ. ಮಳೆಯ ಸಮಯ ಆದ್ದರಿಂದ ನಾವೆಲ್ಲಾ ಮಳೆಯಲ್ಲಿಯೇ ನೆನೆಯಬೇಕಾದ ಪರಿಸ್ಥಿತಿ. ಮಳೆಯಲ್ಲಿಯೇ ಮಲಗಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ?ಮಂಡ್ಯ | ಸ್ಲಂ ನಿವಾಸಿಗಳಿಗೆ ಶೀಘ್ರವೇ ಹಕ್ಕುಪತ್ರ ವಿತರಿಸಿ: ಸಾಮಾಜಿಕ ಹೋರಾಟಗಾರ ಡಾ. ಎಚ್ ವಿ ವಾಸು

ನಮ್ಮನ್ನೆಲ್ಲ ಶೋಷಿಸುವುದು ಅಷ್ಟೇ ಅಲ್ಲಾ, ಕಾನೂನಿನ ಹೆಸರಿನಲ್ಲಿ ಇಂತಹ ದೌರ್ಜನ್ಯ ನಡೆಸಿ ಹಿಂಸಿಸುತ್ತಿದ್ದಾರೆ. ವಯಸ್ಸಾದವರು, ಮಕ್ಕಳು ಯಾವುದನ್ನೂ ಗಮನಕ್ಕೆ ತೆಗೆದುಕೊಂಡಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ. ಆದರೂ, ಯಾರು ಸಹ ಪ್ರಶ್ನೆ ಮಾಡುತ್ತಿಲ್ಲ. ಅದೇನೇ ಆದರೂ ನಾವಿಲ್ಲಿಯೇ ಇರುತ್ತೇವೆ ” ಎಂದರು.