ಮಳೆಗಾಲದಲ್ಲಿ ಸಂಭವಿಸುವ ಯಾವುದೇ ಹಾನಿ, ಅನಾಹುತಗಳ ಬಗ್ಗೆಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ನಿರ್ಲಕ್ಷ್ಯ ವಹಿಸಿದರೇ ಅಂತಹ ಅಧಿಕಾರಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬುಧವಾರ ಮಂಗಳೂರಿನ ಪಡೀಲ್ನಲ್ಲಿರುವ ದ.ಕ.ಜಿಲ್ಲಾಧಿಕಾರಿ ಕಚೇರಿ ಪ್ರಜಾ ಸೌಧದ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ಧನ ನೀಡುವುದಕ್ಕೆ ಹಿಂದೇಟು ಹಾಕಬಾರದು. ಜಿಲ್ಲೆಯಲ್ಲಿ ಕಳೆದ ಬಾರಿ ಎಲ್ಲೆಲ್ಲಿ ಭೂಕುಸಿತ, ಗುಡ್ಡ ಜರಿತದಂತಹ ಅನಾಹುತ ಸಂಭವಿಸಿದೆಯೋ ಈ ಭಾಗಳಲ್ಲಿ ಮುಂಜಾಗ್ರತೆ ವಹಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿತ್ತು. ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮುಂಚೆಯೇ ಸೂಕ್ತ ಕ್ರಮ ಕೈಗೊಳ್ಳುವುದರಿಂದ ಅವಘಡ ತಪ್ಪಿಸಬಹುದು” ಎಂದರು.
ಜಿಲ್ಲಾ ಮತ್ತು ತಾಲ್ಲೂಕು ನಿಯಂತ್ರಣ ಕೊಠಡಿಗಳು ದಿನದ 24 ಗಂಟೆಯೂ ಸೇವೆಗೆ ಸಿಗುವಂತೆ ನೋಡಿಕೊಳ್ಳಬೇಕು. ಕೆತ್ತಿಕ್ಕಲ್ ಸಹಿತ ಅಪಾಯಕಾರಿ ಭೂಪ್ರದೇಶ, ಗುಡ್ಡ ಪ್ರದೇಶಗಳ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಸೂಚಿಸಿದರು.
ಜಿಲ್ಲೆಯ ಹಲವೆಡೆ ಅಪಾಯದ ಅಂಚಿನಲ್ಲಿರುವ ಹಳೆಯ ಸೇತುವೆಗಳನ್ನು ತಜ್ಞರಿಂದ ಪರಿಶೀಲಿಸಿ, ವರದಿ ಬಂದ ಬಳಿಕ ಸೇತುವೆಗಳನ್ನು ಸಂಚಾರಕ್ಕೆ ಅನುವು ಮಾಡಿಕೊಂಡಬೇಕು ಹೇಳಿದರು.
ಇದನ್ನೂ ಓದಿ: ಮಂಗಳೂರು | ಡಿವೈಡರ್ಗೆ ಕಾರು ಡಿಕ್ಕಿ; NSUI ಮುಖಂಡ ಸೇರಿ ಇಬ್ಬರು ಸಾವು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ದ.ಕ.ಜಿಪಂ ಸಿಇಒ ಡಾ. ಆನಂದ್, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.