ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ದಾಳಿ ಮಾಡುವ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ. ಆದರೆ ದಾಳಿ ಮಾಡಬೇಕೆ ಬೇಡವೇ ಎಂಬುದರ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಮೆರಿಕ ಮಾಧ್ಯಮ ಸಿಬಿಎಸ್ ವರದಿ ಮಾಡಿದೆ.
ಇರಾನ್ ತನ್ನ ಪರಮಾಣು ಯೋಜನೆಗಳನ್ನು ತ್ಯಜಿಸಲು ಒಪ್ಪಿಕೊಳ್ಳಬಹುದು ಎಂಬ ಕಾರಣಕ್ಕೆ ಟ್ರಂಪ್ ದಾಳಿಗಳನ್ನು ಪ್ರಾರಂಭಿಸುವುದನ್ನು ತಡೆದಿದ್ದಾರೆ. ಇರಾನ್‌ನಲ್ಲಿರುವ ಭೂಗತ ಯುರೇನಿಯಂ ಎನ್‌ರೀಚ್‌ಮೆಂಟ್ ಫೋರ್ಡೊ ಮೇಲೆ ಅಮೆರಿಕ ದಾಳಿ ನಡೆಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಇಸ್ರೇಲ್-ಇರಾನ್ ಸಂಘರ್ಷ | ತನ್ನ ಪ್ರಜೆಗಳಿಗೆ ವಾಟ್ಸ್‌ಆ್ಯಪ್ ಡಿಲೀಟ್ ಮಾಡಲು ಕರೆ ಕೊಟ್ಟ ಇರಾನ್; ಕಾರಣವೇನು ಗೊತ್ತೇ?
ಈಗಾಗಲೇ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ ಎಂದು ಟ್ರಂಪ್‌ಗೆ ಹೇಳಿದ್ದಾರೆ. ಹಾಗೆಯೇ ಟ್ರಂಪ್ ಅವರನ್ನು ಖಂಡಿಸಿದ್ದಾರೆ. “ಯಾವುದೇ ಯುಎಸ್ ಮಿಲಿಟರಿ ಹಸ್ತಕ್ಷೇಪ ದುಬಾರಿಯಾಗುತ್ತದೆ. ಇರಾನ್ ರಾಷ್ಟ್ರ ಶರಣಾಗುವುದಿಲ್ಲ” ಎಂದು ಖಮೇನಿ ಸ್ಪಷ್ಟಪಡಿಸಿದ್ದಾರೆ.
ಇದಾದ ಬಳಿಕ “ಶುಭವಾಗಲಿ” ಎಂದು ಹೇಳಿ ಬೇರೆ ಹೇಳಿಕೆ ನೀಡಲು ನಿರಾಕರಿಸಿದ್ದರು. “ನಾನು ಏನು ಮಾಡಲಿದ್ದೇನೆಂದು ಯಾರಿಗೂ ತಿಳಿದಿಲ್ಲ” ಎಂದೂ ಹೇಳಿಕೊಂಡಿದ್ದಾರೆ. ಇದಾದ ಬೆನ್ನಲ್ಲೇ ಇರಾನ್ ಮೇಲಿನ ದಾಳಿ ಯೋಜನೆಗಳಿಗೆ ಟ್ರಂಪ್ ಬೆಂಬಲ ನೀಡಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಇಸ್ರೇಲ್-ಇರಾನ್ ಸಂಘರ್ಷ | ಟೆಹ್ರಾನ್‌ನಲ್ಲಿ ಭಾರತೀಯರು: ತಕ್ಷಣವೇ ರಾಯಭಾರಿ ಕಚೇರಿ ಸಂಪರ್ಕಿಸಲು ಸೂಚನೆ
ಉಭಯ ದೇಶಗಳ ನಡುವೆ ಸಂಘರ್ಷ ಮುಂದುವರೆದಿದೆ. ಇಸ್ರೇಲ್ ಸೇನೆಯು ಇರಾನ್ ಮೇಲೆ ಹೆಚ್ಚಿನ ದಾಳಿಗಳನ್ನು ನಡೆಸಿ, ಕ್ಷಿಪಣಿ ತಾಣಗಳು ಮತ್ತು ಪರಮಾಣು ಸೌಲಭ್ಯಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಹಾರಿಸಿರುವುದಾಗಿ ಇರಾನ್ ಹೇಳಿದೆ.
ಕಳೆದ ಶುಕ್ರವಾರ ದಾಳಿ ಪ್ರಾರಂಭವಾಗಿದ್ದು ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 585 ಜನರು ಸಾವನ್ನಪ್ಪಿದ್ದಾರೆ ಎಂದು ವಾಷಿಂಗ್ಟನ್ ಡಿಸಿ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರು ಹೇಳಿದ್ದಾರೆ. ಈ ಪೈಕಿ 239 ನಾಗರಿಕರು ಮತ್ತು 126 ಭದ್ರತಾ ಸಿಬ್ಬಂದಿ ಎಂದು ಹೇಳಲಾಗಿದೆ. ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಸುಮಾರು 400 ಕ್ಷಿಪಣಿಗಳನ್ನು ಹಾರಿಸಿದೆ. ಅದರಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ನಾಗರಿಕರು ಎಂದು ಇಸ್ರೇಲ್ ಹೇಳಿಕೊಂಡಿದೆ.
