ಬೆಳಗಾವಿ ನಗರದಲ್ಲಿ ಕೆಲ ಕಿಡಿಗೇಡಿಗಳು ಮಾರಕಾಸ್ತ್ರಗಳು — ಚಾಕು, ತಲವಾರು ಇತ್ಯಾದಿಗಳನ್ನು ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಗರ ಪೊಲೀಸ್ ಇಲಾಖೆ ತೀವ್ರ ಎಚ್ಚರಿಕೆಯ ಕ್ರಮ ಕೈಗೊಂಡಿದೆ.
ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ ರಾವ್ ಬೊರಸೆ ಬುಧವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಇನ್ನೆಲ್ಲಾ ಇಂತಹವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗುವುದು. ಅವರು ಅಪ್ರಾಪ್ತರಾಗಿದ್ದರೂ ಕೂಡ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆತನ ಹೆಸರಿನಲ್ಲಿ ರೌಡಿಶೀಟ್ ತೆರೆಯಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ವಿಶೇಷ ತಂಡ ರಚನೆ:
ಅಕ್ರಮವಾಗಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುವವರ ವಿರುದ್ಧ ನಿಗಾ ಇಡುವ ನಿಟ್ಟಿನಲ್ಲಿ ಐದಾರು ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ಪಟಕಳ ತಂಡವನ್ನು ರಚಿಸಲಾಗಿದೆ. ಈ ತಂಡ ಗುರುವಾರದಿಂದಲೇ ಕಾರ್ಯಚರಣೆಯಲ್ಲಿ ತೊಡಗಲಿದೆ.
“ತಂಡವು ಒಂದು ವಾಹನದಲ್ಲಿ ಬೇಟಿ ನಡೆಸಲಿದ್ದು, ಯಾರ ಮೇಲೆ ಸಂಶಯ ಮೂಡಿದರೂ ತಕ್ಷಣ ತಪಾಸಣೆ ಮಾಡಲಾಗುತ್ತದೆ. ಮಾರಕಾಸ್ತ್ರಗಳು ಪತ್ತೆಯಾದರೆ, ಯಾವುದೇ ತಾಳ್ಮೆ ತೋರದೆ ಕಾನೂನು ಕ್ರಮ ಜರುಗಿಸಲಾಗುತ್ತದೆ,” ಎಂದು ಆಯುಕ್ತರು ಎಚ್ಚರಿಸಿದರು.
ಸಾರ್ವಜನಿಕರಿಗೆ ಎಚ್ಚರಿಕೆ:
ಇನ್ನುಮುಂದೆ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳೊಂದಿಗೆ ಕಾಣಿಸಿಕೊಂಡರೆ, ಅವರ ವಿರುದ್ಧ ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆ, ರೌಡಿಶೀಟ್ ಸೇರಿ ಕಠಿಣ ಕ್ರಮಗಳು ಜಾರಿಗೆ ಬರಲಿವೆ. ಅಲ್ಲದೇ, ಅವರು ಹಬ್ಬ-ಹರಿದಿನಗಳಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗುವಂತೆಯೂ ಮಾಡಲಾಗುತ್ತದೆ.
ಅಂತಿಮವಾಗಿ, ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಆದ್ಯತೆ. ಸಾರ್ವಜನಿಕರು ಸಹಯೋಗ ನೀಡಬೇಕೆಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದು, ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.