ಮನೆ, ಮನೆಗೆ ಕುಡಿಯುವ ನೀರು ತಲುಪಿಸಲು ಅಳವಡಿಸಿರುವ ಪೈಪುಗಳಲ್ಲಿ ಬಹುತೇಕ ಪೈಪುಗಳು ಚರಂಡಿಗಳಲ್ಲಿವೆ. ದಾವಣಗೆರೆ ಜಿಲ್ಲೆ ಹರಿಹರ ನಗರದ ಹೊರವಲಯದಲ್ಲಿರುವ ಗುತ್ತೂರು ಗ್ರಾಮದ ಊರು ಬಾಗಿಲು, ಎ ಕೆ ಕಾಲೋನಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಚರಂಡಿಗಳಲ್ಲೇ ಕುಡಿಯುವ ನೀರಿನ ಪೈಪುಗಳನ್ನು ಅಳವಡಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ ಜೆ ಮಹಾಂತೇಶ್ ಆರೋಪಿಸಿದ್ದಾರೆ.
ಜಿಲ್ಲೆಯ ಹರಿಹರ ನಗರದ ಹೊರವಲಯದ ಗುತ್ತೂರು ಗ್ರಾಮದಲ್ಲಿ ದಸಂಸ ಕಾರ್ಯಕರ್ತರು ಸ್ಥಳ ಪರಿಶೀಲನೆ ನಡೆಸಿದಾಗ “ಹರಿಹರದಲ್ಲಿ ಕೆಯುಐಡಿಎಫ್‌ಸಿ, ಕೆಐಯುಡಬ್ಲ್ಯೂ, ಎಂಐಪಿ, ಪಿಐಯು ಸಂಸ್ಥೆಗಳಿಂದ ಜಾರಿಯಾಗುತ್ತಿರುವ ಜಲಸಿರಿ ಕುಡಿಯುವ ನೀರಿನ ಯೋಜನೆಯ ನ್ಯೂನತೆಗಳು ನಿತ್ಯವೂ ಹೊರ ಬರುತ್ತಿವೆ. ಗ್ರಾಮದ ಮುಖ್ಯ ರಸ್ತೆ, ಓಣಿಗಳ ಕ್ರಾಸ್ ರಸ್ತೆಗಳಲ್ಲಿ ಸದರಿ ಜಲಸಿರಿ ಪೈಪುಗಳ ಜಾಯಿಂಟ್‌ಗಳು ಚರಂಡಿ ತ್ಯಾಜ್ಯದಲ್ಲಿ ಮುಳುಗಿವೆ” ಎಂದು ದೂರಿದರು.
“ಚರಂಡಿ ನೀರು ಸಣ್ಣ ಪ್ರಮಾಣದಲ್ಲಿ ಪೈಪಿನ ಒಳ ಹೊಕ್ಕಿದ್ದರೂ ಯಾರಿಗೂ ತಿಳಿಯುವುದಿಲ್ಲ. ಜನತೆ ಮಾತ್ರ ಇದು ಸ್ವಚ್ಚ ನೀರೆಂದು ಸೇವಿಸುತ್ತಾರೆ. ಕುಟುಂಬದ ಸದಸ್ಯರ ಆರೋಗ್ಯ ಹದಗೆಟ್ಟರೆ ಯಾರು ಜವಾಬ್ದಾರರು?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈ ಹಿಂದೆ ಜಲಸಿರಿ ನ್ಯೂನತೆಗಳ ಬಗ್ಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಇವರಿಗೆ ಸಂಘಟನೆಯಿಂದ ದೂರು ನೀಡಿದ ನಂತರ ನಗರದ ಕೆಲವೆಡೆ ಚರಂಡಿಗಳಲ್ಲಿ ಹಾದು ಹೋಗಿರುವ ನೀರಿನ ಪೈಪುಗಳಿಗೆ ಹೊದಿಕೆ ಪೈಪುಗಳನ್ನು ಅಳವಡಿಸಲಾಗಿದೆ. ಆದರೆ ಚರಂಡಿ ಬಿಟ್ಟು ಬೇರೆಡೆಗೆ ನೀರಿನ ಪೈಪುಗಳನ್ನು ಸ್ಥಳಾಂತರಿಸಿಲ್ಲ. ಚರಂಡಿ ಹಾಗೂ ಒಳಚರಂಡಿ ಪೈಪುಗಳಿಂದ 8 ಅಡಿ ಅಂತರದಲ್ಲಿ ಜಲಸಿರಿ ನೀರಿನ ಪೈಪುಗಳನ್ನು ಅಳವಡಿಸಬೇಕೆಂದು ಸರ್ಕಾರ ಸ್ವಷ್ಟವಾಗಿ ನೀತಿ ರೂಪಿಸಿದ್ದರೂ ಕೆಯುಐಡಿಎಫ್‌ಸಿ, ಕೆಐಯುಡಬ್ಲ್ಯೂ, ಎಐಪಿ, ಪಿಐಯು ಸಂಸ್ಥೆಗಳು ಈ ನಿಯಮಗಳನ್ನು ಗಾಳಿಗೆ ತೂರಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಗ್ರಾಮ ಪಂಚಾಯತಿ ನಿರ್ಲಕ್ಷ್ಯ; ನಿವಾಸಿಗಳಿಂದಲೇ ಚರಂಡಿ ಸ್ವಚ್ಛತೆ ಕಾರ್ಯ
“ನಗರದಲ್ಲಿ ಜಲಸಿರಿ ಯೋಜನೆ ಜಾರಿಯಲ್ಲಿ ತೊಡಗಿರುವ ಸಂಸ್ಥೆಯ ಇಂಜಿನಿಯರ್‌ಗಳು, ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಹಾಕಬೇಕು. ಹರಿಹರದ ಜನರ ಆರೋಗ್ಯವನ್ನು ಕಾಪಾಡಬೇಕು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿಯ ನ್ಯೂನತೆಗಳನ್ನು ಸರಿಪಡಿಸದಿದ್ದರೆ ನಗರಸಭೆ ಎದರು ಸಂಘಟನೆಯಿಂದ ಪ್ರತಿಭಟನೆ ಕೈಗೊಂಡು, ತನಿಖಾ ಸಂಸ್ಥೆಗಳಿಗೆ ದೂರು ನೀಡಿ ಹೋರಾಟ ಮುಂದುವರೆಸಲಾಗುತ್ತದೆ” ಎಂದು ಎಚ್ಚರಿಸಿದ್ದಾರೆ.